Advertisement

ಹತ್ಯೆಯಾದ ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜೇಶ್‌ ಮನೆಗೆ ಜೇಟ್ಲಿ  ಭೇಟಿ

09:01 PM Aug 06, 2017 | Harsha Rao |

ತಿರುವನಂತಪುರ : ಕಳೆದ ವಾರ ರಾಜಧಾನಿಯಲ್ಲಿ ರಾಜಕೀಯ ಸೇಡಿಗಾಗಿ ಹತ್ಯೆಯಾಗಿರುವ ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜೇಶ್‌ ಮನೆಗೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ರವಿವಾರ ಭೇಟಿ ನೀಡಿ ನೊಂದಿರುವ ಕುಟುಂಬದವರನ್ನು ಸಂತೈಸಿದರು. 

Advertisement

ರಾಜೇಶ್‌ ಅವರ ಮೂರು ವರ್ಷದ ಮಗ ಮತ್ತು ವೃದ್ಧ ಮಾತಾಪಿತರ ಜತೆಗೆ ಮಾತನಾಡಿದ ಜೇಟ್ಲಿ ಕೆಲವು ಮಾಹಿತಿಗಳನ್ನು ಪಡೆದುಕೊಂಡರು. 

ಸಿಪಿಎಂ ಕಾರ್ಯಕರ್ತರು ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಸಾಯಿಸುತ್ತಿರುವ ಘಟನೆಗಳತ್ತ ದೇಶದ ಗಮನ ಸೆಳೆಯುವ ಸಲುವಾಗಿ ಕೇಂದ್ರ ಹಣಕಾಸು ಸಚಿವರೇ ರಾಜೇಶ್‌ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್‌ ಸೇರಿ ಹಲವು ಬಿಜೆಪಿ ನಾಯಕರು ಈ ಸಂದರ್ಭದಲ್ಲಿ ಜೇಟ್ಲಿ ಜತೆಗಿದ್ದರು. 

ಜು.29ರಂದು ರೌಡಿಯೊಬ್ಬನ ನೇತೃತ್ವದ ಗೂಂಡಾಗಳ ತಂಡ 34 ವರ್ಷದ ರಾಜೇಶ್‌ ಅವರನ್ನು ಕೈಕಾಲು ಕಡಿದು ಕೊಂದು ಹಾಕಿದ ಬಳಿಕ ಅವರ ಪತ್ನಿ, ಮತ್ತು ಹೆತ್ತವರು ಭೀತಿಯಿಂದ ದಿನ ದೂಡುತ್ತಿದ್ದಾರೆಂದು ಕುಮ್ಮನಂ ಈ ಸಂದರ್ಭದಲ್ಲಿ ಜೇಟ್ಲಿಗೆ ತಿಳಿಸಿದರು. 

Advertisement

ಸಿಪಿಎಂ ಕಾರ್ಯಕರ್ತರೇ ಈ ಹತ್ಯೆ ಎಸಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಸಿಪಿಎಂ ಆರೋಪವನ್ನು ನಿರಾಕರಿಸಿದೆ. ಪೊಲೀಸರು ರಾಜಕೀಯ ಸೇಡಿಗಾಗಿ ಹತ್ಯೆ ನಡೆದಿದೆ ಎಂದು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ. 
ಸಂಸತ್ತಿನಲ್ಲೂ ರಾಜೇಶ್‌ ಹತ್ಯೆ ಪ್ರತಿಧ್ವನಿಸಿತ್ತು. ಸಂಸದೆ ಮೀನಾಕ್ಷಿ ಲೇಖೀ, ಸಂಸದ ಪ್ರಹ್ಲಾದ್‌ ಜೋಶಿ ಸೇರಿದಂತೆ ಹಲವು ಬಿಜೆಪಿ ಸದಸ್ಯರು ಕೇರಳದಲ್ಲಿ ನಿರಂತರವಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ಕೇರಳ ಈಗ ದೇವರ ನಾಡಾಗಿಲ್ಲ ದೇವರು ತ್ಯಜಿಸಿದ ನಾಡಾಗಿದೆ ಎಂದು ಆರೋಪಿಸಿದ್ದರು. 

ರಾಜೇಶ್‌ ಮನೆಗೆ ಭೇಟಿ ನೀಡುವುದರ ಜತೆಗೆ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸುವ ಸಲುವಾಗಿ ಜೇಟ್ಲಿ ವಿಶೇಷ ವಿಮಾನದಲ್ಲಿ ರಾಜ್ಯಕ್ಕಾಗಮಿಸಿದರು. ಅವರು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಿದ್ದಾರೆಂದು ಬಿಜೆಪಿ ಮೂಲಗಳು ಹೇಳಿವೆ. 

ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್ ಸರಕಾರದ ಆಳ್ವಿಕೆಯಲ್ಲಿ ಕಾನೂನು ಮತ್ತು ವ್ಯವಸ್ಥೆ ಪಾಲನೆ ಸಂಪೂರ್ಣ ಹದಗೆಟ್ಟಿರುವುದರಿಂದ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂಬ ಒತ್ತಾಯ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಜೇಟ್ಲಿ ಭೇಟಿಗೆ ಮಹತ್ವ ಬಂದಿದೆ. ರಾಜೇಶ್‌ ಹತ್ಯೆಯಾದ ಮರುದಿನ ರಾಜ್ಯಪಾಲ ಪಿ. ಸದಾಶಿವಂ ಅವರನ್ನು ಕರೆಸಿಕೊಂಡು ರಾಜಕೀಯ ಹತ್ಯೆಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. 

ಇದಕ್ಕೆ ತಿರುಗೇಟು ನೀಡಿರುವ ಸಿಪಿಎಂ ರಾಜ್ಯ ಸರಕಾರದ ವಿರುದ್ಧ ಆರ್‌ಎಸ್‌ಎಸ್‌ ಅಪಪ್ರಚಾರ ಮಾಡುತ್ತಿದೆ ಎಂದು ಹೇಳಿದೆ.  

ರಾಜಭವನದ ಎದುರು ಸತ್ಯಾಗ್ರಹ 
ಜೇಟ್ಲಿ  ಭೇಟಿಗೆ ವಿರುದ್ಧ  ಸಿಪಿಎಂ ರವಿವಾರ ಆರ್‌ಎಸ್‌ಎಸ್‌-ಬಿಜೆಪಿ ಕಾರ್ಯಕರ್ತರಿಂದ ಹತ್ಯೆಯಾಗಿದ್ದಾರೆ ಎನ್ನಲಾಗಿರುವ ಸಿಪಿಎಂನ 21 ಕಾರ್ಯಕರ್ತರ ಸಂಬಂಧಿಕರನ್ನು ಕರೆತಂದು ರಾಜಭವನದ ಎದುರು ಧರಣಿ ನಡೆಸಿದೆ. ಆದರೆ ರಾಜ್ಯಪಾಲರು ರಾಜಭವನದಲ್ಲಿರದ ಕಾರಣ ಈ ಪ್ರತಿಭಟನೆ ವಿಫ‌ಲಗೊಂಡಿದೆ. 

ಜೇಟ್ಲಿ ನಮ್ಮ ಮನೆಗೂ ಭೇಟಿ ನೀಡಬೇಕೆಂದು ಸಿಪಿಎಂ ಕಾರ್ಯಕರ್ತರ ಬಂಧುಗಳು ಒತ್ತಾಯಿಸಿದರು. ಮಾರ್ಕ್ಸಿಸ್ಟ್‌ ಪಾರ್ಟಿ ಹಿಂಸಾಚಾರ ನಡೆಸುತ್ತಿದೆ ಎಂದು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಎಂದು ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಅಣ್ಣಾವೂರು ನಾಗಪ್ಪನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next