ಮೈಸೂರು: ನಗರದ ಪಾರಂಪರಿಕ ಇರ್ವಿನ್ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು 63 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.
ಮಂಗಳವಾರ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರಸ್ತೆ ಅಗಲೀಕರಣಕ್ಕಾಗಿ 82 ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು.
ಇರ್ವೀನ್ ರಸ್ತೆಯ ಇತಿಹಾಸವನ್ನು ಮೆಲಕು ಹಾಕಿದ ಸಚಿವರು, ಆ ಕಾಲದಲ್ಲೇ ಈ ರಸ್ತೆಯಲ್ಲಿ ಮೈಸೂರು ಬ್ಯಾಂಕ್, ಪ್ರಧಾನ ಅಂಚೆ ಕಚೇರಿ, ಮಹಿಳಾ ಬ್ಯಾಂಕ್, ಪೊಲೀಸ್ ಠಾಣೆ ಕಟ್ಟಡ ಇತ್ತು. ಈ ರಸ್ತೆಯ ಕ್ಯಾಂಟೀನ್‌ನಲ್ಲಿ ಟೀ ಕುಡಿಯುತ್ತಿದ್ದುದಾಗಿ ನೆನೆದರು. ಶಾಸಕ ಎಲ್.ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್, ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ಹಾಜರಿದ್ದರು.
ಮೂಲ ಸೌಕರ್ಯ ಕಲ್ಪಿಸಿ: ಬಳಿಕ ದಟ್ಟಗಳ್ಳಿ ಬಡಾವಣೆಯಲ್ಲಿನ ಮಾಂಗಲ್ಯ ಸಂಗಮ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಕ್ರೀಡಾಂಗಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿ, ಕ್ರೀಡಾಂಗಣಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಸಚಿವರನ್ನು ಭೇಟಿ ಮಾಡಿದ ಬಡಾವಣೆ ನಿವಾಸಿಗಳು ರಸ್ತೆ, ಬೀದಿದೀಪ, ಒಳ ಚರಂಡಿ, ಉದ್ಯಾನವನದ ಸಮಸ್ಯೆಗಳನ್ನು ಹೇಳಿಕೊಂಡರು. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಸಚಿವ ಜಿಟಿಡಿ ಅಧಿಕಾರಿಗಳಿಗೆ ಹೇಳಿದರು.
ನಂತರ ಲಿಂಗಾಂಬುದಿ ಕೆರೆ ವೀಕ್ಷಣೆ ಮಾಡಿ ಮಾತನಾಡಿದ ಸಚಿವರು, ಲಿಂಗಾಂಬುದಿ ಕೆರೆಗೆ ಕಲುಷಿತ ನೀರು ಸೇರಿ ಕೆರೆ ಹಾಳಾಗುತ್ತಿದೆ. ಚರಂಡಿ ನೀರು ಕೆರೆಗೆ ಸೇರದಂತೆ ವ್ಯವಸ್ಥೆ ಕಲ್ಪಿಸಿ, ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ರೂಪಿಸಲಾಗುವುದು ಎಂದರು. ಮೇಯರ್ ಪುಷ್ಪಲತಾ ಜಗನ್ನಾಥ್, ಪಾಲಿಕೆ ಸದಸ್ಯೆ ಲಕ್ಷ್ಮೀ, ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ಮತ್ತಿತರರು ಹಾಜರಿದ್ದರು.