ಗೌರಿ ಲಂಕೇಶ್ ಹತ್ಯೆ ಎಂಬ” ಬ್ರೇಕಿಂಗ್ ನ್ಯೂಸ್’ ದೃಶ್ಯಮಾಧ್ಯಮದಲ್ಲಿ ಪ್ರಕಟಗೊಂಡ ಕ್ಷಣವೇ ರಾಜ್ಯ ಬೆಚ್ಚಿತ್ತು. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಾಧ್ಯಮಗಳು ಗೌರಿ ಅವರ ಪ್ರಕರಣವನ್ನು ದೊಡ್ಡದಾಗಿಯೇ ಪ್ರಕಟಿಸಿದವು. ಆದರೆ, ಅಲ್ಲಿಯವರೆಗೆ ಗೌರಿ ಅವರು ರಾಜರಾಜೇಶ್ವರಿ ನಗರದಲ್ಲಿ ನೆಲೆಸಿದ್ದಾರೆ ಎಂಬ ಬಗ್ಗೆ ನಾಗರಿಕರಿಗಿರಲಿ, ಮಾಧ್ಯಮದ ಮಂದಿಗೂ ತಿಳಿದಿರಲಿಲ್ಲ. ಸ್ಥಳೀಯ ನಿವಾಸಿಗಳಿಗೂ…!
ಘಟನೆ ನಡೆದ ಕೂಡಲೇ ಮಾಧ್ಯಮ ಪ್ರತಿನಿಧಿಗಳು ಮೈಕು, ಕ್ಯಾಮೆರಾ, ನೋಟ್‌ಪ್ಯಾಡ್, ರೆಕಾರ್ಡರ್‌ಗಳನ್ನು ಹಿಡಿದು ಎದ್ದು ಬಿದ್ದು ರಾಜರಾಜೇಶ್ವರಿ ನಗರದ ಕಡೆಗೆ ಓಡತೊಡಗಿದ್ದರು. ಆದರೆ ರಾಜರಾಜೇಶ್ವರಿ ನಗರದಲ್ಲಿ ಗೌರಿ ಮೇಡಮ್ ಮನೆ ಎಲ್ಲಿ? ಗೊತ್ತಿಲ್ಲ. ದಾರಿ ಹೋಕರನ್ನು ಕೇಳಬೇಕಷ್ಟೆ.
ಹತ್ಯೆ ಸುದ್ದಿಯ ಹಿನ್ನೆಲೆ, ಮುನ್ನೆಲೆಗಳ ಪ್ರಶ್ನೆಗಳ ತೊಳಲಾಟದಲ್ಲೇ ರಾಜರಾಜೇಶ್ವರಿ ನಗರ ಹೊಕ್ಕ ನಾನು ಅಲ್ಲೊಂದು ಕಡೆ ವೃದ್ಧ ವ್ಯಕ್ತಿಯೊಬ್ಬರನ್ನು “ಗೌರಿ ಅವರ ಮನೆ ಎಲ್ಲಿ,’ ಎಂದು ಕೇಳಿದೆ. ಅಷ್ಟೊತ್ತಿಗಾಗಲೇ ಹತ್ಯೆ ಸುದ್ದಿ ಬಿತ್ತರವಾಗಿತ್ತಲ್ಲ… ಆ ಕಾರಣಕ್ಕೇನೋ ಆ ವ್ಯಕ್ತಿ ಅನುಮಾನದಿಂದಲೇ ಗೊತ್ತಿಲ್ಲ ಎಂದರು. ಮುಂದೆ ಸಾಗಿ ಮತ್ತೂಬ್ಬರನ್ನು ವಿಚಾರಸಿದರೆ, “ಹೀಗೇ ಹೋಗಿ, ಹಾಗೆ ಹೋಗಿ’ ಎಂದು ರೂಟ್ ಮ್ಯಾಪ್ ಕೈಗಿಟ್ಟರು.
ಅವರು ಹೇಳಿದ ರಸ್ತೆಯಲ್ಲಿ ಹೊರಟೆ. ಆ ಏರಿಯಾ ಪೂರ್ತಿ ಅದೆಂಥಧ್ದೋ ಭಯ. ಆ ದಿನದ ಮಟ್ಟಿಗೆ ರಾಜರಾಜೇಶ್ವರಿ ನಗರ ಪೂರ್ತಿ ನಿಗೂಢ ಲೋಕ. ನಮ್ಮ ಮುಂದೆ ಹಾದು ಹೋದ ಪೊಲೀಸರಿಗೆ ಮನೆಗಳ ಮೇಲಿನ ಸಿಸಿಟಿವಿ ಕ್ಯಾಮೆರಾಗಳ ಮೇಲೆಯೇ ಕಣ್ಣು. ಯಾವುದೇ ಸಣ್ಣ ಗುಂಪು ಕಂಡರೂ ಪೊಲೀಸರು ಅವರನ್ನೆಲ್ಲ “ನಡೀರಿ ನಡೀರಿ’ ಎಂದು ಓಡಿಸುತ್ತಿದ್ದರು.
ಸರಿ, ದಾರಿ ಹುಡುಕಿ ಗೌರಿ ಅವರ ಮನೆ ಬಳಿ ಹೋಗುತ್ತಲೇ ಹಳದಿ ಬಣ್ಣದ ಟೇಪ್‌ಗ್ಳು ಕಂಡವು. ಅದೇ ನಂ. 473ಎ, “ಮಾನುಷಿ’ ಗೌರಿ ಅವರಿದ್ದ ಮನೆ. ಮನೆ ಸಮೀಪಕ್ಕೆ ಯಾರು ಸುಳಿಯಬಾರದೆಂಬ ಕಾರಣಕ್ಕೆ ಪೊಲೀಸರು ಹಾಗೆ ಹಳದಿ ಪಟ್ಟಿಗಳನ್ನು ಕಟ್ಟಿ ದಿಗ್ಬಂಧನ ಹಾಕಿದ್ದರು. ಗೌರಿ ಮನೆ ಅಕ್ಕ ಪಕ್ಕ ಮನೆಗಳಿಲ್ಲ. ಆ ಕಡೆ ಈ ಕಡೆ ಸೈಟ್‌ಗಳು ಖಾಲಿ. ಅಲ್ಲೊಂದು ಅವ್ಯಕ್ತ ಭಯದ ವಾತಾವರಣವೇ ಆವರಿಸಿತ್ತು. ಎದುರು ಬದುರು ಮನೆಯವರು ನಡುಗುತ್ತಲೇ ಎಲ್ಲವನ್ನೂ ಮನೆ ಮೇಲಿಂದ ನೋಡುತ್ತಿದ್ದರು.
ಮನೆಯ ಆವರಣದಲ್ಲಿ ಮೂವರು ಪೊಲೀಸರ ದಂಡು. ಮಹಜರು ಪ್ರಕ್ರಿಯೆ ಅದು. ಮನೆ ಮುಂದುಗಡೆ ಟಿ.ವಿ. ಮೀಡಿಯಾದ ಎರಡು ವ್ಯಾನುಗಳು ನಿಂತಿದ್ದವು. ಒಂದಷ್ಟು ಮಂದಿ ವರದಿಗಾರರಿದ್ದರು. ಅವರಿಗೆ ಏನಾದರೂ ಬ್ರೇಕಿಂಗ್ ಸಿಗಬಹುದಾ ಎಂಬ ಕಾತರ. ರಸ್ತೆಗಳಲ್ಲಿ ನಡೆದಾಡುತ್ತಿದ್ದವರ ಮಾತಿನ ಸಂಗತಿ ಗೌರಿ ಅವರ ಹತ್ಯೆ. ಆ ಏರಿಯಾನೇ ಒಂದು ರೀತಿ ಲೋಕ.
ದೊಡ್ಡ ದೊಡ್ಡ ಮನೆಗಳೊಂದೊಂದೂ, ದ್ವೀಪಗಳು. ಸುತ್ತಲೂ ಕಾಂಪೌಂಡು. ಮನೆಯಲ್ಲಿ ಯಾರೂ ಇಲ್ಲವೇನೋ ಎಂದನುಮಾನ ಬರುವಷ್ಟು ನಿಶ್ಯಬ್ದತೆ. ಒತ್ತೂತ್ತಾಗಿರುವ ಮರಗಳು, ಗವ್ವೆನ್ನುವ ಕತ್ತಲು, ಹುಲ್ಲು ಜೊಂಡು, ಖಾಲಿ ಬಿಟ್ಟ ಸೈಟುಗಳು, ಬೀದಿ ದೀಪವಿಲ್ಲದ ರಸ್ತೆ ಆ ಪ್ರದೇಶಕ್ಕೆ ನಿಗೂಢತೆಯನ್ನು ಕಲ್ಪಿಸಿದ್ದವು. ಆದರೆ, ನಾವು ಈಗ ನಡೆದಾಡುತ್ತಿರುವ ಸ್ಥಳದಲ್ಲೇ ದುಷ್ಕರ್ಮಿ ಹೊಂಚು ಹಾಕಿ ಕುಳಿತಿದ್ದರು ಎನ್ನುವ ಯೋಚನೆಯೇ ಮೈಜುಮ್ಮೆನ್ನಿಸಿತು.
* ಹವನ