Advertisement

ಬೇರುಬಿಟ್ಟವರು ಮಾತೃ ಇಲಾಖೆಗೆ

09:42 AM Jul 20, 2018 | Team Udayavani |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ನಿಯೋಜನೆ ನಿಮಿತ್ತ ಬಂದು ಹಲವು ವರ್ಷಗಳಿಂದ ಅಲ್ಲಿಯೇ ಬೇರುಬಿಟ್ಟಿರುವ ಇಂಜಿನಿಯರ್‌ಗಳ ಎತ್ತಂಗಡಿಗೆ ನಗರಾಭಿವೃದ್ಧಿ ಇಲಾಖೆ ಮುಂದಾಗಿದೆ. ಗರಿಷ್ಠ ಅವಧಿ ಮೀರಿದ್ದರೂ ಎರವಲು ಸೇವೆ ಮೇಲೆ ನಿಯೋಜನೆಗೊಂಡ ಇಂಜಿನಿಯರ್‌ಗಳು ಮಾತೃ ಇಲಾಖೆಗೆ ಹಿಂತಿರುಗುವ ಯೋಚನೆಯಲ್ಲಿಲ್ಲ. ಕೆಲವರು ದಶಕದಿಂದಲೂ ಜಾಗಬಿಟ್ಟು ಕದಲಿಲ್ಲ. ಇಂತಹ ಸುಮಾರು ನೂರಕ್ಕೂ ಹೆಚ್ಚು ಸಿಬ್ಬಂದಿ ಪಟ್ಟಿ ಸಿದ್ಧಪಡಿಸಿದ್ದು, ಅವರೆಲ್ಲರನ್ನು ಮಾತೃ ಇಲಾಖೆಗೆ ವಾಪಸ್‌ ಕಳಿಸುವ ಚಿಂತನೆ ನಡೆಸಲಾಗಿದೆ.

Advertisement

ನಿಯೋಜನೆಯ ಗರಿಷ್ಠ ಅವಧಿ 5 ವರ್ಷಕ್ಕಿಂತ ಹೆಚ್ಚು ಕಾಲದಿಂದ ವಿವಿಧ ವಿಭಾಗಗಳಲ್ಲಿ ಠಿಕಾಣಿ ಹೂಡಿರುವವರ ಪಟ್ಟಿ ಈಗಾಗಲೇ ಸಿದ್ಧವಾಗಿದೆ. ಅದರಲ್ಲಿ ಒಬ್ಬ ಕಾರ್ಯನಿರ್ವಾಹಕ ಇಂಜಿನಿಯರ್‌, ಒಬ್ಬ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳು, ಸಹಾಯಕ ನಿರ್ದೇಶಕ, ಸಹಾಯಕ ಇಂಜಿನಿಯರ್‌ಗಳು ಮತ್ತು ಕಿರಿಯ ಇಂಜಿನಿಯರ್‌ಗಳು ಸೇರಿದಂತೆ 104 ಮಂದಿ ಇದ್ದಾರೆ ಎನ್ನಲಾಗಿದೆ. ಈ ಪೈಕಿ ಬಹುತೇಕರ ಮಾತೃ ಇಲಾಖೆ ಲೋಕೋಪಯೋಗಿ ಆಗಿದೆ.

ಈ ಹಿಂದೆ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾರ್ಜ್‌ ಕೂಡ ಹೀಗೆ ಬೇರು ಬಿಟ್ಟವರನ್ನು ವಾಪಸ್‌ ಕಳಿಸಲು ಮುಂದಾಗಿದ್ದರು. ಆದರೆ, ಚುನಾವಣೆ ಮತ್ತು ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದ್ದ ಕಾರಣ ಪ್ರಗತಿ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣದಿಂದ ಆ ಪ್ರಯತ್ನ ಕೈಬಿಟ್ಟಿದ್ದರು.

ಅಧಿಕಾರಿಗಳಿಗೆ ಪಾಲಿಕೆ ಏಕೆ ಅಚ್ಚುಮೆಚ್ಚು?
ಬಿಬಿಎಂಪಿಗೆ ನಿಯೋಜನೆಗೊಂಡರೆ ಬೆಂಗಳೂರಿನಲ್ಲೇ ಕಾರ್ಯನಿರ್ವಹಿಸಬಹುದು. ಇದರಿಂದ ಉತ್ತಮ “ಆದಾಯ’ದ ಜತೆಗೆ ಮಕ್ಕಳ ಶಿಕ್ಷಣಕ್ಕೂ ಅನುಕೂಲವಾಗುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿ ಯಾವಾಗಲೂ ಕೆಲಸಗಳು ನಡೆಯುತ್ತಲೇ ಇರುತ್ತವೆ. ಆದರೆ, ಮಾತೃ ಇಲಾಖೆಗಳಲ್ಲಿ ಆಗಾಗ ವರ್ಗಾವಣೆ ಕಿರಿಕಿರಿ ಇರುತ್ತದೆ ಎಂಬ ಕಾರಣಕ್ಕೆ ಎಂಟು-ಹತ್ತು ವರ್ಷಗಳಿಂದಲೂ ನಿಯೋಜನೆ ಮೇಲೆ ನೂರಾರು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಹೊಸ ಸರ್ಕಾರ ಬಂದ ನಂತರ ಬೆಂಗಳೂರು ಅಭಿವೃದ್ಧಿ ಸಚಿವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದ್ದು, ಹೀಗೆ ಎರವಲು ಸೇವೆಯ ಪಟ್ಟಿ ಪರಿಷ್ಕರಣೆ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಒಂದು ಇಲಾಖೆಯಿಂದ ಮತ್ತೂಂದು ಇಲಾಖೆಗೆ ನಿಯೋಜಿಸಲು ಅವಕಾಶ ಮತ್ತು ನಿಯಮ ಎರಡೂ ಇದೆ. ಅಷ್ಟೇ ಅಲ್ಲ, ಕರ್ನಾಟಕ ನಾಗರಿಕ ಸೇವಾ (ಸಮಾನ್ಯ ನೌಕರಿ ಭರ್ತಿ) ನಿಯಮಗಳು-1977ರ ಅನ್ವಯ ಸಮಾನ ವೇತನ ಶ್ರೇಣಿ ಕೂಡ ನೀಡಲಾಗುತ್ತದೆ. ಆದರೆ, ಅದೇ ಕೆಸಿಎಸ್‌ಆರ್‌ ನಿಯಮ 50, 50 (3) ಮತ್ತು 419ರ ಪ್ರಕಾರ ನಿಯೋಜನೆ ಮೇಲೆ ನೇಮಕಗೊಂಡ ಅಧಿಕಾರಿ/ಸಿಬ್ಬಂದಿ ವರ್ಗದ ನಿಯೋಜನಾ ಅವಧಿ ಐದು ವರ್ಷ ಮೀರುವಂತಿಲ್ಲ. ಕೆಎಂಸಿ ಕಾಯ್ದೆ ಕೂಡ ಹೀಗೆ ಗರಿಷ್ಠ ಅವಧಿ ಮೀರಿ ಕಾರ್ಯನಿರ್ವಹಿಸುವುದು ನಿಯಮಬಾಹಿರ ಎಂದು ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಇಂಜಿನಿಯರ್‌ಗಳನ್ನು ವಾಪಸ್‌ ಕರೆಸಿಕೊಳ್ಳುವ ಆಲೋಚನೆ ನಡೆದಿದೆ.

Advertisement

ಲೋಕೋಪಯೋಗಿ ಇಲಾಖೆಯಲ್ಲೇ ಹೆಚ್ಚು ನಿಯೋಜನೆ ಮೇಲೆ 175ಕ್ಕೂ ಅಧಿಕ ಸಿಬ್ಬಂದಿ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 104 ಇಂಜಿನಿಯರ್‌ಗಳು ಐದು ವರ್ಷದ ಹಿಂದಿನಿಂದಲೂ ಇದ್ದಾರೆ. ಏಳೆಂಟು ಇಂಜಿನಿಯರ್‌ಗಳ ಹೊರತುಪಡಿಸಿದರೆ, ಉಳಿದವರೆಲ್ಲ ಲೋಕೋಪಯೋಗಿ ಇಲಾಖೆಯಿಂದ ಎರವಲು ಬಂದವರು. ಏಕೆಂದರೆ, ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್‌ಗಳು ಹೆಚ್ಚು ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಕಾಮಗಾರಿಗಳೇ ಹೆಚ್ಚಿರುತ್ತವೆ. ಕೆಪಿಸಿಎಲ್‌ನಿಂದಲೂ ಸಿಬ್ಬಂದಿಯರವಲು ಪಡೆಯಬಹುದು. ಆದರೆ, ಅದೊಂದು ಸ್ವಾಯತ್ತ ಸಂಸ್ಥೆ ಆಗಿರುವುದರಿಂದ ನಮಲ್ಲಿಗಿಂತ ಅಲ್ಲಿ ಹೆಚ್ಚು ವೇತನ ಇರುತ್ತದೆ. ಹಾಗಾಗಿ, ಅಲ್ಲಿಯವರು ಹೀಗೆ ನಿಯೋಜನೆ ಬಯಸುವುದು ತುಂಬಾ ಕಡಿಮೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು

ಬಿಬಿಎಂಪಿಯಲ್ಲಿ ತುಂಬಾ ವರ್ಷಗಳಿಂದ ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವವರ ಪಟ್ಟಿ ಮಾಡಿ, ಮಾತೃ ಇಲಾಖೆಗೆ ವಾಪಸ್‌ ಕರೆಸಿಕೊಳ್ಳುವ ಉದ್ದೇಶ ಇದೆ. ಈ ಬಗ್ಗೆ ಸ್ವತಃ ಸಚಿವರೇ ಸೂಚನೆ ನೀಡಿದ್ದಾರೆ. 
  ಮಹೇಂದ್ರ ಜೈನ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ

  ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next