ಯಾದಗಿರಿ: ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆ ಅಪಾರ. ಸ್ತ್ರೀಯರು ಪ್ರತಿಯೊಂದು ರಂಗದಲ್ಲೂ ಬೆಳವಣಿಗೆ ಹೊಂದಿ ಸಮಾಜದ ಕೈಗನ್ನಡಿಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ಹೇಳಿದರು. ನಗರದ ಬಾಲಾಜಿ ಕಲ್ಯಾಣ ಮಂಟದಲ್ಲಿ ಸೋಮವಾರ ತೋಟಗಾರಿಕೆ, ಕೃಷಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಫಲ-ಪುಷ್ಪ ಪ್ರದರ್ಶನ ಮತ್ತು ಸಾವಯವ ಸಿರಿಧಾನ್ಯ ಮೇಳ ಹಾಗೂ
ಮಹಿಳಾ ದಿನಾಚರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಪಂ ಸಿಇಒ ಶಿಲ್ಪಾ ಶರ್ಮಾ ಮಾತನಾಡಿ, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ ಅವರಂತಹ ವೀರ ಮಹಿಳೆಯರ ಆದರ್ಶವನ್ನು ಮಹಿಳೆಯರು ಮೈಗೂಡಿಸಿಕೊಳ್ಳಬೇಕು. ಮಹಿಳೆಯರು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಸಮಗ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.
ಜಿಪಂ ಅಧ್ಯಕ್ಷ ಬಸನಗೌಡ ಎಸ್. ಪಾಟೀಲ್ ಯಡಿಯಾಪುರ ಮಾತನಾಡಿದರು. ಈ ಸಂದರ್ಭದಲ್ಲಿ ನಗರದ ಕನಕದಾಸ ವೃತ್ತದಿಂದ ಬಾಲಾಜಿ ಕಲ್ಯಾಣ ಮಂಟಪದವರೆಗೆ ಫಲ- ಪುಷ್ಪ ಪ್ರದರ್ಶನ ಮತ್ತು ಸಾವಯವ ಸಿರಿಧಾನ್ಯ ಮೇಳ ಜಾಥ ನಡೆಸಲಾಯಿತು.
ಈ ಸಂದರ್ಭದಲ್ಲಿ ಕರಕುಶಲ ಮತ್ತು ಸಾವಯವ ಸಿರಿಧಾನ್ಯಗಳ ಮೇಳ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಜಿಪಂ ಉಪಾಧ್ಯಕ್ಷೆ ಗಿರಿಜಮ್ಮ ಎಸ್. ರೋಟ್ನಡಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಪುಟಗಿ, ಅಮರದೀಪ್ ಎಂ., ಜಿಪಂ ಸದಸ್ಯೆ ಅನಿತಾಬಾಯಿ ರಾಠೊಡ, ಅಧಿಕಾರಿಗಳಾದ ದೇವಿಕಾ ಆರ್., ಪ್ರಭಾಕರ್ ಕವಿತಾಳ, ದತ್ತಾತ್ರೇಯ ಪಾಟೀಲ್, ಶ್ವೇತಾ ತಾಳೆಮರದ ಸೇರಿದಂತೆ ಇತರರು ಇದ್ದರು.