Advertisement

ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು

06:14 PM Jul 25, 2022 | Team Udayavani |

ಚಿತ್ರದುರ್ಗ: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ತಾಲೂಕಿನ ತುರುವನೂರು ಭಾಗದ ಮಹಿಳೆಯರ ಪಾತ್ರವೂ ಇದೆ. ಗಾಂಧಿವಾದಕ್ಕೆ ಮನಸೋತಿದ್ದ ಕೆಲ ಮಹಿಳೆಯರು ಬ್ರಿಟಿಷರ ವಿರುದ್ಧ ಹೋರಾಡಿದರೆ, ಹಲವರು ಹೋರಾಟಕ್ಕೆ ಬೆಂಬಲವಾಗಿದ್ದರು ಎಂದು ನಿವೃತ್ತ ಪ್ರಾಧ್ಯಾಪಕಿ ಡಾ| ಪಿ.ಯಶೋದಾ ರಾಜಶೇಖರಪ್ಪ ಹೇಳಿದರು.

Advertisement

ಚಿತ್ರದುರ್ಗ ಇತಿಹಾಸ ಕೂಟ, ಇತಿಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ 45ನೇ ಉಪನ್ಯಾಸ ಮಾಲಿಕೆಯಲ್ಲಿ “ಚಿತ್ರದುರ್ಗ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು’ ವಿಷಯದ ಕುರಿತು ಅವರು ಮಾತನಾಡಿದರು.

ತುರುವನೂರು ಗ್ರಾಮದ ಮಹಿಳೆಯರ ಸ್ವಾತಂತ್ರ್ಯ ಹೋರಾಟದ ಸಾಹಸವನ್ನು ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್‌ ಸಭೆಯಲ್ಲಿ ಮಹಾತ್ಮಾ ಗಾಂಧೀಜಿಯವರೇ ಹಾಡಿ ಹೊಗಳಿದ್ದಾರೆ. ನಾಗರತ್ನಮ್ಮ ಹಿರೇಮಠ, ಶಾಂತಮ್ಮ ಇತರರು ಎದೆಗುಂದದೆ ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನು ತ್ಯಜಿಸಿ ಹೋರಾಟಕ್ಕಿಳಿದಿದ್ದರು. ಒಂಭತ್ತು ತಿಂಗಳ ತುಂಬು ಗರ್ಭಿಣಿ ಮಹಿಳೆಯೊಬ್ಬರು ಈಚಲು ಮರ ಕಡಿಯುವ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಇತಿಹಾಸ ತುರುವನೂರಿಗಿದೆ ಎಂದು ಸ್ಮರಿಸಿದರು.

ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಸಾವಿತ್ರಮ್ಮ, ವಿಜಯಲಕ್ಷ್ಮೀಬಾಯಿ, ಸುಶೀಲಮ್ಮ, ಗೌಡ್ರ ಹನುಮಕ್ಕ ಇವರುಗಳೆಲ್ಲಾ ತುರುವನೂರಿನ ಮಹಿಳೆಯರು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತದೆ. ಕೆಲವು ಸ್ವಾತಂತ್ರ್ಯ ಹೋರಾಟಗಾರರು ಸೆರೆವಾಸ ಅನುಭವಿಸಿ ಹೊರಬರುತ್ತಾರೆ. 1945ರಲ್ಲಿ ನಡೆದ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಹೊಳಲ್ಕೆರೆ, ಹೊಸದುರ್ಗ, ಚಳ್ಳಕೆರೆಯಲ್ಲಿ ಅನೇಕ ಮಹಿಳೆಯರು ಭಾಗವಹಿಸಿ ಗುಂಡೇಟು ತಿಂದು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ.

ಇನ್ನು ಕೆಲವು ಮಹಿಳೆಯರು ನೇರವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದಿದ್ದರೂ ಹೋರಾಟಗಾರರನ್ನು ಕಾಪಾಡಿದ ಉದಾಹರಣೆಗಳಿವೆ. ಸ್ವಾತಂತ್ರ್ಯ ಹೋರಾಟಕ್ಕಾಗಿಯೇ ವಕೀಲಿ ವೃತ್ತಿಯನ್ನು ಬಿಟ್ಟು ಅನೇಕ ಬಾರಿ ಜೈಲಿಗೆ ಹೋಗಿ ಬಂದ ಎಸ್‌.ನಿಜಲಿಂಗಪ್ಪನವರಿಗೆ ಅವರ ಪತ್ನಿ ಮುರಿಗೆಮ್ಮ ಸ್ವಾತಂತ್ರ್ಯದ ಕಿಚ್ಚು ಹಚ್ಚುತ್ತಿದ್ದರು ಎಂದರು.

Advertisement

ಹೋರಾಟದಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಸರ್ಕಾರ ತನಗೆ ನೀಡಿದ್ದ ಪಿಂಚಣಿಯನ್ನು ಗೌಡ್ರ ಹನುಮಕ್ಕ ತಿರಸ್ಕರಿಸಿದ್ದರು. ಕೊನೆಗೆ ಅವರನ್ನು ಎಂಎಲ್‌ಸಿಯಾಗಿ ನೇಮಕ ಮಾಡಿಕೊಂಡಾಗ ಅಧಿಕಾರಾವಧಿ  ಮುಗಿದ ನಂತರ ಸಿಕ್ಕ ಪಿಂಚಣಿ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳದೆ ಆಸ್ಪತ್ರೆ ಕಟ್ಟಿಸಿ ದೇಶಭಕ್ತಿ ಪ್ರದರ್ಶಿಸಿದರು. ಗಣೆಕಲ್‌ ಭೀಮಕ್ಕ ಕೂಡ ಕೆಚ್ಚೆದೆಯ ಹೋರಾಟಗಾರ್ತಿಯಾಗಿದ್ದಳು ಎಂದು ತಿಳಿಸಿದರು.

ರಾಜ್ಯದಲ್ಲೇ ಮೊದಲ ಬಾರಿಗೆ ಮದಕರಿಪುರದಲ್ಲಿ ಖಾದಿ ಭಂಡಾರ ತೆರೆಯಲಾಯಿತು. ಈಗಿನ ನಮ್ಮ ದೇಶದ ರಾಜಕಾರಣಿಗಳು ಕಿಂಚಿತ್ತಾದರೂ ಕತೃತ್ವ ತೋರಿದರೆ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ತೋರಿದ ಸಾಹಸ, ಧೈರ್ಯ ಸಾರ್ಥಕವಾಗುತ್ತದೆ ಎಂದರು. ಇತಿಹಾಸ ಕೂಟದ ನಿರ್ದೇಶಕ ಡಾ| ಲಕ್ಷ್ಮಣ ತೆಲಗಾವಿ, ಸಂಚಾಲಕ ಡಾ| ಎನ್‌.ಎಸ್‌. ಮಹಂತೇಶ್‌, ಸಾಹಿತಿ ಡಾ| ಬಿ.ಎಲ್‌. ವೇಣು, ಜಿ.ಎಸ್‌. ಉಜ್ಜಿನಪ್ಪ, ಡಾ| ಸಿ. ತಿಪ್ಪೇಸ್ವಾಮಿ, ಜಿ.ಎನ್‌. ಮಲ್ಲಿಕಾರ್ಜುನಪ್ಪ, ಶಿವಕುಮಾರ್‌, ಶರೀಫಾಬಿ, ಕವಿ ಜೈಪ್ರಕಾಶ್‌, ಡಿ. ಗೋಪಾಲಸ್ವಾಮಿ ನಾಯಕ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next