ಮಧುಗಿರಿ: ದೇಶದ ಅಭಿವೃದ್ಧಿ ಹಾಗೂ ರಕ್ಷಣಾ ವ್ಯವಸ್ಥೆಯಲ್ಲಿ ಕರುನಾಡಿನ ಪಾತ್ರ ಮಹತ್ವದ್ದಾಗಿದೆ. ದೇಶದ ಒಕ್ಕೂಟದ ವ್ಯವಸ್ಥೆಯಲ್ಲಿ ವಿಶ್ವದಲ್ಲಿ ವಿಶ್ವಗುರುವಾಗುವತ್ತ ದಾಪುಗಾಲಿಟ್ಟಿದ್ದು, ಎಲ್ಲರೂ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸುವಂತೆ ಶಾಸಕ ಎಂ.ವಿ. ವೀರಭದ್ರಯ್ಯ ಹೇಳಿದರು.
ಪಟ್ಟಣದ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆದ 74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ನಮಗೆ ದೇಶ ಏನು ಕೊಟ್ಟಿದೆ ಎನ್ನುವುದಕ್ಕಿಂದ ದೇಶಕ್ಕೆ ನಮ್ಮಿಂದ ಏನಾಗಿದೆ ಎಂಬ ಆಲೋಚನೆ ಎಲ್ಲರಲ್ಲೂ ಬರಬೇಕು. ಇಂದು ಭಾರತ ವಿಶ್ವದಲ್ಲಿ ಅಭಿವೃದ್ಧಿಯಾಗುತ್ತಿದ್ದು, ಇದರಲ್ಲಿ ರಾಜ್ಯದ ಪಾಲು ದೊಡ್ಡದು. ತೆರಿಗೆ ಸಂಗ್ರಹ, ಸಂಪನ್ಮೂಲ ಕ್ರೋಢೀಕರಣ, ರಕ್ಷಣಾ ವ್ಯವಸ್ಥೆಗೆ ಸಹಕಾರ ಹಾಗೂ ನಿರುದ್ಯೋಗ ನಿರ್ಮೂಲನೆಗೆ ಒತ್ತು ನೀಡಿದೆ ಎಂದರು.
ಇಂಥ ಸಮಯದಲ್ಲಿ ಕೋವಿಡ್ ಹಾವಳಿಯಿಂದಾಗಿ ಕೊಂಚ ಅಭಿವೃದ್ಧಿಗೆ ತಡೆಯಾಗಿದ್ದು, ಮುಂದಿನ ದಿನಗಳಲ್ಲಿ ಸರಿಯಾಗಲಿದೆ. ಇದರೊಂದಿಗೆ ವರುಣನ ಅವಕೃಪೆಯಾಗಿದ್ದು, ಅರ್ಧ ರಾಜ್ಯ ತತ್ತರಿಸಿದೆ. ಈ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೊಂದವರ ನೆರವಿಗೆ ಧಾವಿಸಬೇಕು. ಪ್ರವಾಹದಿಂದ ಹೆಚ್ಚಾಗುವ ನೀರನ್ನು ಕೃಷಿಗೆ ಹಾಗೂ ಕುಡಿಯುವ ನೀರಿಗಾಗಿ ನಾಲೆಗಳಿಗೆ ಹರಿಸಿದರೆ ಬಯಲುಸೀಮೆ ರೈತರು ನೆಮ್ಮದಿಯಾಗಿರಲಿದ್ದು, ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ತಿಳಿಸಿದರು. ಉಪವಿಭಾಗಾಧಿಕಾರಿ ಡಾ.ನಂದಿನಿದೇವಿ ಮಾತನಾಡಿ, ಮಹಾತ್ಮ ಹಾಗೂ ಹುತಾತ್ಮರ ತ್ಯಾಗ-ಬಲಿದಾನವನ್ನು ನೆನೆದು ಅವರು ತಂದು ಕೊಟ್ಟ ಸ್ವಾತಂತ್ರ್ಯವನ್ನು ಸದುಪ ಯೋಗ ಮಾಡಿಕೊಂಡು ದೇಶದ ಪ್ರಗತಿಗೆ ಶ್ರಮಿ ಸಲು ಎಲ್ಲರೂ ಬದ್ಧರಾಗಬೇಕು. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮಧುಗಿರಿ ರಾಜ್ಯಕ್ಕೆ 3ನೇ ಸ್ಥಾನಕ್ಕೆ ಬಂದಿದ್ದು, ಇದಕ್ಕೆ ಕಾರಣರಾದ ಎಲ್ಲರಿಗೂ ಅಭಿನಂದನೆಗಳು ಎಂದರು. ತಹಶೀಲ್ದಾರ್ ಡಾ.ವಿಶ್ವನಾಥ್, ತಾಪಂ ಅಧ್ಯಕ್ಷೆ ಇಂದಿರಾ, ಇಒ ದೊಡ್ಡಸಿದ್ದಯ್ಯ, ಜಿಪಂ ಸದಸ್ಯ ಕೆಂಚಮಾರಯ್ಯ, ಜಿ.ಜೆ.ರಾಜಣ್ಣ, ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್, ಕಸಾಪ ಅಧ್ಯಕ್ಷ ಚಿ.ಸೂ. ಕೃಷ್ಣಮೂರ್ತಿ, ಟಿಎಚ್‌ಒ ಡಾ.ರಮೇಶ್‌ಬಾಬು, ಪುರಸಭೆ ಸದಸ್ಯರಾದ ಜಗಣ್ಣ, ನಾರಾಯಣ್, ಚಂದ್ರಶೇಖರ ಬಾಬು, ಗಂಗರಾಜು, ಮುಖ್ಯಾಧಿಕಾರಿ ಅಮರ ನಾರಾಯಣ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶಯ್ಯ ಇದ್ದರು.