Advertisement

ಶಾಲಾ ಸುತ್ತಮುತ್ತ ತಂಬಾಕು ಬಳಕೆಯ ನಿಯಂತ್ರಣದಲ್ಲಿ ಜನಸಾಮಾನ್ಯರ ಪಾತ್ರ

10:59 PM Jun 13, 2020 | Sriram |

ಯುವಜನತೆಯು ತಂಬಾಕನ್ನು ಬಳಕೆ ಮಾಡುವುದನ್ನು ನೀವೆಲ್ಲರೂ ಗಮನಿಸಿರುತ್ತೀರಿ. ಹೆಚ್ಚಿನ ಯುವಜನರು ತಂಬಾಕು ಬಳಕೆ ಮಾಡುವುದನ್ನು ಹೆಮ್ಮೆಯ ವಿಚಾರವೆಂದು ಭಾವಿಸುತ್ತಾರೆ, ಆದರೆ ಅದು ಅವರ ತಪ್ಪು ಕಲ್ಪನೆಯಾಗಿದೆ. ವಿಶೇಷವಾಗಿ ಹಾಸ್ಟೆಲ್‌ಗ‌ಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಧೂಮಪಾನ ಮಾಡುವುದು ಸಾಮಾನ್ಯವಾಗಿದೆ. ಅಲ್ಲಿ ಸುಲಭವಾಗಿ ತಂಬಾಕು ಬಳಕೆಗೆ ಒಳಗಾಗಬಹುದು. ಹೆಚ್ಚಾಗಿ ಟಿ.ವಿ., ಚಲನಚಿತ್ರಗಳು, ಇಂಟರ್ನೆಟ್‌, ಜಾಹೀರಾತು ಮತ್ತು ಕೆಲವೊಮ್ಮೆ ಸ್ನೇಹಿತರಿಂದ ಪ್ರಭಾವಿತರಾಗುತ್ತಾರೆ. ಯುವಜನತೆ ಹೆಚ್ಚಾಗಿ ತಂಬಾಕು ಉತ್ಪನ್ನಗಳು ಕಡಿಮೆ ವೆಚ್ಚಕ್ಕೆ ಅಥವಾ ಉಚಿತವಾಗಿ ತಂಬಾಕು ಬಳಕೆಗೆ ಅವಕಾಶ ಸಿಕ್ಕಿದರೆ ಬಳಕೆ ಮಾಡುವ ಸಾಧ್ಯತೆ ಜಾಸ್ತಿ ಇರುತ್ತದೆ. ಯುವ ಜನತೆಯು ತಮ್ಮ ಮನೆಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ತಂಬಾಕನ್ನು ಬಳಕೆ ಮಾಡುವುದನ್ನು ನೋಡಿ ಪ್ರೇರಿತರಾಗಿ ಬಳಕೆ ಮಾಡುವ ಸಾಧ್ಯತೆಯಿರುತ್ತದೆ. ಹೆಚ್ಚಿನ ಚಲನಚಿತ್ರಗಳಲ್ಲಿ ತಂಬಾಕು ಬಳಕೆಯ ಚಿತ್ರಣಗಳನ್ನು ತೋರಿಸುವುದರಿಂದ ಅದು ಯುವಜನತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲೂಬಹುದು.

Advertisement

ಯುವಜನತೆ ತಂಬಾಕು ಸೇವನೆಯನ್ನು ಮಾಡುವ ಸಮಯದಲ್ಲಿ ಪ್ರಾರಂಭಿಕವಾಗಿ ಧೂಮಪಾನ ಅಥವಾ ತಂಬಾಕನ್ನು ಚಲನಚಿತ್ರಗಳಲ್ಲಿ ಮಾದರಿ ವ್ಯಕ್ತಿಗಳು ಅಥವಾ ಕುಟುಂಬದ ಸದಸ್ಯರು ಬಳಕೆ ಮಾಡುವುದನ್ನು ಗಮನಿಸಿರುತ್ತಾರೆ. ಅನಂತರದಲ್ಲಿ ಅದರ ಬಳಕೆಯ ಬಗ್ಗೆ ಕುತೂಹಲ ಹೆಚ್ಚಾಗಿ ಬಳಕೆ ಮಾಡುವ ಕುರಿತು ಆಲೋಚಿಸಬಹುದು. ಹದಿಹರೆಯದವರು ಮತ್ತು ಯುವಜನತೆ ತಂಬಾಕನ್ನು ಬಳಸುವುದನ್ನು ತಡೆಗಟ್ಟಲು ನಾವೆಲ್ಲ ಒಟ್ಟಾಗಿ ಸಹಕರಿಸಬೇಕು, ಹಾಗೆಯೇ ತಂಬಾಕನ್ನು ತ್ಯಜಿಸಲು ಪ್ರೇರೇಪಿಸಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಹೆಜ್ಜೆಯನ್ನಿಡಬೇಕು.

ಹದಿನೆಂಟು ವರ್ಷದೊಳಗಿನವರನ್ನು ಅಪ್ರಾಪ್ತ ವಯಸ್ಕರೆಂದು ಪರಿಗಣಿಸಬಹುದು. ಈ ವಯಸ್ಸಿನಲ್ಲಿ ಮಕ್ಕಳು ತಂಬಾಕನ್ನು ಬಳಕೆ ಮಾಡಲು ಹಾತೊರೆಯುತ್ತಿರುವ ಸಾಧ್ಯತೆಗಳಿರುತ್ತವೆ. ಒಂದು ವೇಳೆ ಅವರಿಗೆ ಅಪ್ರಾಪ್ತ ವಯಸ್ಸಿನಲ್ಲಿ ತಂಬಾಕು ಉತ್ಪನ್ನಗಳು ಸಿಗದಿದ್ದಲ್ಲಿ ಅವರನ್ನು ತಂಬಾಕು ಉತ್ಪನ್ನಗಳಿಂದ ದೂರವಿಡಬಹುದು. ಹಾಗೆಯೇ ಒಂದು ವೇಳೆ ಅಪ್ರಾಪ್ತ ವಯಸ್ಕರು ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದರೆ ಆ ಸಮಯದಲ್ಲಿ ಅವರು ತಂಬಾಕು ಉತ್ಪನ್ನಗಳಿಗೆ ಆಕರ್ಷಿತರಾಗುವ ಸಾಧ್ಯತೆಗಳಿರಬಹುದು. ಈ ಎಲ್ಲಾ ಕಾರಣಗಳಿಗಾಗಿ ಅಪ್ರಾಪ್ತ ವಯಸ್ಕರಿಂದ ತಂಬಾಕು ಉತ್ಪನ್ನಗಳನ್ನು ದೂರವಿರಿಸುವ ಕಾರಣಕ್ಕಾಗಿ ಕೋಟ್ಪಾ ಕಾಯಿದೆ 6-ಎ ಯನ್ನು ಜಾರಿಗೆ ತರಲಾಗಿದೆ.

ಶಾಲಾ ಮಕ್ಕಳು ಹೆಚ್ಚಾಗಿ ಯಾವುದೇ ಒಂದು ವಸ್ತುವಿನ ಮೇಲೆ ಬೇಗ ಆಕರ್ಷಿತರಾಗುತ್ತಾರೆ ಮತ್ತು ಸುಲಭವಾಗಿ ಸಿಗುವ ವಸ್ತುಗಳನ್ನು ಪಡೆಯಲು ಮುಂದಾಗುತ್ತಾರೆ. ಹಾಗೆಯೇ ತಂಬಾಕು ಉತ್ಪನ್ನಗಳ ಮೇಲೆ ಸುಲಭವಾಗಿ ಆಕರ್ಷಿತರಾಗುವ ಸಾಧ್ಯತೆಗಳಿರುವುದರಿಂದ, ವಿದ್ಯಾರ್ಥಿಗಳು ಯಾವುದೇ ತಂಬಾಕು ಉತ್ಪನ್ನಗಳ ಮೇಲೆ ಆಕರ್ಷಿತರಾಗಬಾರದೆನ್ನುವ ಕಾರಣಕ್ಕಾಗಿ ಕೋಟಾ³ ಕಾಯಿದೆ 6-ಬಿಯ ಪ್ರಕಾರ ಶಾಲಾ ಆವರಣ ಗೋಡೆಯಿಂದ ನೂರು ಗಜಗಳ ವ್ಯಾಪ್ತಿಯಲ್ಲಿ ಯಾವುದೇ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.

ಕೋಟ್ಪಾ ಸೆಕ್ಷನ್‌ 6 ಎ ಮತ್ತು ಬಿ
ತಂಬಾಕು ಬಳಕೆಯ ಪ್ರಾರಂಭಿಸುವುದನ್ನು ತಡೆಗಟ್ಟಲು ಕಾಯಿದೆ ಕಾನೂನುಗಳನ್ನು ರೂಪಿಸಲಾಗಿದೆ. ಸಿಗರೇಟ್‌ ಮತ್ತು ಇತರ ತಂಬಾಕು ಉತ್ಪನ್ನ ಕಾಯಿದೆ (ಕೋಟ್ಪಾ) 2003, ಈ ಕಾಯಿದೆಯಲ್ಲಿ ವಿವಿಧ ಸೆಕ್ಷನ್‌ಗಳಿದ್ದು, ಅವುಗಳಲ್ಲಿ ಸೆಕ್ಷನ್‌ 6 ಎ ಮತ್ತು ಬಿ ಬಹಳ ಪ್ರಮುಖವಾದದ್ದು.
ಸೆಕ್ಷನ್‌-ಎ ಪ್ರಕಾರ, ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಗೆ ಸಿಗರೇಟ್‌ ಅಥವಾ ಇನ್ನಾವುದೇ ತಂಬಾಕು ಉತ್ಪನ್ನವನ್ನು ಮಾರಾಟ ಮಾಡಲು ಅನುಮತಿ ಇರುವುದಿಲ್ಲ. ಹಾಗೆಯೇ ಅಂಗಡಿಗಳಲ್ಲಿ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯು ತಂಬಾಕು ಅಥವಾ ಇತರ ತಂಬಾಕು ಉತ್ಪನ್ನವನ್ನು ಮಾರಾಟ ಮಾಡುವಂತಿಲ್ಲ. ತಂಬಾಕು ಉತ್ಪನ್ನವನ್ನು ಖರೀದಿಸುವ ವ್ಯಕ್ತಿಯು ಅಪ್ರಾಪ್ತ ವಯಸ್ಸಿನವನಲ್ಲ ಎಂಬುದನ್ನು ಮಾರಾಟಗಾರನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ.

Advertisement

ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎನ್ನುವ ಪ್ರದರ್ಶನ ಫ‌ಲಕವನ್ನು ಹಾಕಬೇಕು. ಸೆಕ್ಷನ್‌-ಬಿ ಪ್ರಕಾರ, ಯಾವುದೇ ಶಿಕ್ಷಣ ಸಂಸ್ಥೆಯ ನೂರು ಗಜಗಳಷ್ಟು ವ್ಯಾಪ್ತಿಯಲ್ಲಿ ಕಾನೂನಿನ ಪ್ರಕಾರ, ಯಾವುದೇ ತಂಬಾಕು ಉತ್ಪನ್ನವನ್ನು ಮಾರಾಟ ಮಾಡುವಂತಿಲ್ಲ. ಶಿಕ್ಷಣ ಸಂಸ್ಥೆಯ ಆವರಣ ಗೋಡೆಯ ಹೊರಗೆ ಪ್ರದರ್ಶನ ಫ‌ಲಕವನ್ನು ಹಾಕಬೇಕು. ಯಾವುದೇ ಶಿಕ್ಷಣ ಸಂಸ್ಥೆಯ ನೂರು ಗಜಗಳಷ್ಟು ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ. ನೂರು ಗಜಗಳ ಅಂತರವನ್ನು ಶಾಲಾ ಆವರಣ ಗೋಡೆಯ ಹೊರಗಿನ ಮಿತಿಯಿಂದ ಪ್ರಾರಂಭಿಸಿ ಅಳೆಯಲಾಗುತ್ತದೆ.

ಸೆಕ್ಷನ್‌ 6-ಎ ಉಲ್ಲಂಘನೆ ಮತ್ತು ಕೈಗೊಳ್ಳುವ ಕ್ರಮ ಯಾವುದು ಉಲ್ಲಂಘನೆ?
-18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು.
– 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಯಿಂದ ಅಂಗಡಿಗಳಲ್ಲಿ ಯಾವುದೇ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು.
-ಯಾವುದೇ ತಂಬಾಕು ಉತ್ಪನ್ನಗಳನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ರಸ್ತೆಬದಿಯಲ್ಲಿ ವ್ಯಾಪಾರಿಗಳಾಗಿ, ಬಸ್ಸುಗಳು ಮತ್ತು ರೈಲುಗಳಲ್ಲಿ, ಟ್ರಾಫಿಕ್‌ ಸಿಗ್ನಲ್‌ಗ‌ಳಲ್ಲಿ, ಹೊರಗಿನ ಚಿತ್ರಮಂದಿರಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ, ಬಸ್‌ ನಿಲ್ದಾಣಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟ ಮಾಡುವುದು.
– ಮಾರಾಟವನ್ನು ನಿಷೇಧಿಸಲು ನಿರ್ದಿಷ್ಟಪಡಿಸಿದ ಸಂಕೇತಗಳನ್ನು ಪ್ರದರ್ಶಿಸದ ಅಂಗಡಿಗಳು.

ದಂಡನೆ ಏನು?
– ಅಪ್ರಾಪ್ತ ವಯಸ್ಕರಿಗೆ ತಂಬಾಕನ್ನು ಮಾರಾಟ ಮಾಡಿದರೆ 200 ರೂಪಾಯಿ ದಂಡ ವಿಧಿಸಲಾಗುತ್ತದೆ.
-ಅಪ್ರಾಪ್ತ ವಯಸ್ಕರಿಗೆ ತಂಬಾಕು ಸೇರಿದಂತೆ ಯಾವುದೇ ವ್ಯಸನಕಾರಿ ವಸ್ತುಗಳನ್ನು ಕೊಡುವುದು ಬಾಲಾಪರಾಧಿ ನ್ಯಾಯ ಕಾಯ್ದೆ – ಸೆಕ್ಷನ್‌-77 ರ ಪ್ರಕಾರ ಒಂದು ಲಕ್ಷ ರೂ. ತನಕ ದಂಡ ಮತ್ತು 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುವುದು.

ಸೆಕ್ಷನ್‌ 6 (ಎ) ಬೋರ್ಡ್‌ ಹೇಗಿರಬೇಕು?
– ಫ‌ಲಕವು ಕನಿಷ್ಠ 60 ಸೆಂ. ಮೀ. ಅಗಲ ಮತ್ತು 30 ಸೆಂ. ಮೀ. ಎತ್ತರ ಅಳತೆಯ ಬಿಳಿಯ ಬಣ್ಣದ ಹಿನ್ನಲೆಯನ್ನು ಹೊಂದಿರಬೇಕು.
– ಫ‌ಲಕದಲ್ಲಿ “18 ವರ್ಷದೊಳಗಿನ ವ್ಯಕ್ತಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ” ಎಂದು ಭಾರತೀಯ ಭಾಷೆಯಲ್ಲಿ ಬರೆದಿರಬೇಕು ಮತ್ತು ಚಿತ್ರಾತ್ಮಕ ಚಿತ್ರಣವು ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾದ ಪರಿಣಾಮವನ್ನು ಒಳಗೊಂಡಿರಬೇಕು.

ಸೆಕ್ಷನ್‌ 6-ಬಿ ಉಲ್ಲಂಘನೆ ಮತ್ತು ಕೈಗೊಂಡ ಕ್ರಮ
ಯಾವುದು ಉಲ್ಲಂಘನೆ?
-ಶಿಕ್ಷಣ ಸಂಸ್ಥೆಗಳ 100 ಗಜಗಳ ಸುತ್ತ ಯಾವುದೇ ರೂಪದಲ್ಲಿ ತಂಬಾಕು ಮಾರಾಟ ಮಾಡುವುದು.
-ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತ ಫ‌ಲಕಗಳ ಅಳವಡಿಸದೆ ಇರುವುದು.

ದಂಡನೆ ಏನು?
-ಶಿಕ್ಷಣ ಸಂಸ್ಥೆಗಳ ಸುತ್ತ ತಂಬಾಕು ಮಾರಾಟ ಮಾಡಿದರೆ 200 ರೂಪಾಯಿ ದಂಡ ವಿಧಿಸಲಾಗುತ್ತದೆ.
ಕೋಟಾ³ ಉದ್ದೇಶಗಳಿಗಾಗಿ ಶಿಕ್ಷಣ ಸಂಸ್ಥೆ ಎಂದರೆ ನಿರ್ದಿಷ್ಟ ಮಾನದಂಡಗಳಿಗೆ ಅನುಗುಣವಾಗಿ ಶೈಕ್ಷಣಿಕ ಸೂಚನೆಗಳನ್ನು ನೀಡುವ ಯಾವುದೇ ಸ್ಥಳ ಅಥವಾ ಕೇಂದ್ರ ಅಥವಾ ಸೂಕ್ತ ಪ್ರಾಧಿಕಾರದಿಂದ ಸ್ಥಾಪಿಸಲ್ಪಟ್ಟ ಅಥವಾ ಗುರುತಿಸಲ್ಪಟ್ಟ ಯಾವುದೇ ಶಾಲೆ/ಕಾಲೇಜು ಮತ್ತು ಉನ್ನತ ಕಲಿಕೆಯ ಸಂಸ್ಥೆಗಳನ್ನು ಒಳಗೊಂಡಿರುತ್ತದೆ.

ಸೆಕ್ಷನ್‌ 6(ಬಿ) ಬೋರ್ಡ್‌ ಹೇಗಿರಬೇಕು?
-ಫ‌ಲಕವು 36 ಸೆಂ.ಮೀ. ಅಗಲ ಮತ್ತು 24 ಸೆಂ.ಮೀ. ಎತ್ತರ ಅಳತೆಯನ್ನು ಹೊಂದಿರಬೇಕು.
-ಫ‌ಲಕದಲ್ಲಿ “”ಈ ವಿದ್ಯಾಸಂಸ್ಥೆಯ ಆವರಣದಿಂದ 100 ಯಾರ್ಡ್‌ (ಗಜಗಳ) ಅಂತರದಲ್ಲಿ ಸಿಗರೇಟು ಅಥವಾ ಇತರೆ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ. ಉಲ್ಲಂಘನೆಯು ಶಿಕ್ಷಾರ್ಹ ಅಪರಾಧವಾಗಿದ್ದು ರೂ.200ರ ವರೆಗೆ ಕೋಟ್ಪಾ-2003ರ ಕಾಯ್ದೆ ಅಡಿಯಲ್ಲಿ ದಂಡ ವಿಧಿಸಲಾಗುವುದು” ಎಂದು ಬರೆದಿರಬೇಕು.

ತತ್‌ಕ್ಷಣದ ದಂಡ
ಕೇಂದ್ರ ಅಥವಾ ರಾಜ್ಯ ಸರಕಾರದಲ್ಲಿ ಅಧಿಕಾರವನ್ನು ಹೊಂದಿರುವ ವ್ಯಕ್ತಿಯು, ಅವರ ವ್ಯಾಪ್ತಿಯಲ್ಲಿ ಕಾನೂನನ್ನು ಉಲ್ಲಂಘಿಸಿದರೆ, ಸ್ಥಳದಲ್ಲೇ ಚಲನ್‌ ನೀಡಿ ದಂಡವನ್ನು ಹಾಕಬಹುದು ಅಥವಾ ನ್ಯಾಯಾಲಯದ ಮುಂದೆ ದಂಡವನ್ನು ಪಾವತಿಸಬಹುದು. ರಾಜ್ಯ ಸರಕಾರವು ನಿರ್ಧರಿಸಿದಂತೆ, ಯಾವುದೇ ನಿಗದಿತ ದಿನಗಳಲ್ಲಿ ಅಪರಾಧಿ ಗೊತ್ತುಪಡಿಸಿದ ನ್ಯಾಯಾಲಯ ಅಥವಾ ಖಜಾನೆಯಲ್ಲಿ ದಂಡವನ್ನು ಪಾವತಿಸುವ ನಿರ್ದೇಶನದೊಂದಿಗೆ ಚಲನನ್ನು ನೀಡಬಹುದು.

ಕಾನೂನನ್ನು ಉಲ್ಲಂಘಿಸಿದವರ ಬಂಧನ
ಒಂದು ವೇಳೆ ಕಾನೂನನ್ನು ಉಲ್ಲಂಘಿಸುವವರು ದಂಡವನ್ನು ಪಾವತಿಸಲು ನಿರಾಕರಿಸಿದರೆ ಅವರ ಹೆಸರು ಮತ್ತು ವಿಳಾಸವನ್ನು ನೀಡಲು ವಿಫ‌ಲವಾದರೆ ಮತ್ತು ಬದಲಿಗೆ ಆತನ/ಅವಳ ವಿರುದ್ಧ ಕ್ರಮವನ್ನು ಕೈಗೊಂಡು ಯಾವುದೇ ಕರೆಗಳನ್ನು ಸ್ವೀಕರಿಸುವ ಅಧಿಕೃತ ಅಧಿಕಾರಿಗಳ ಕೋರಿಕೆಗಳನ್ನು ಪೂರೈಸುವುದರಲ್ಲಿ ಯಶಸ್ವಿಯಾಗದಿದ್ದಲ್ಲಿ, ಅಂತಹ ವ್ಯಕ್ತಿಯು ಅಧಿಕೃತ ಅಧಿಕಾರಿಗಳಿಂದ ಬಂಧನಕ್ಕೆ ಒಳಪಡುತ್ತಾರೆ.

ಅಧಿಕೃತ ವ್ಯಕ್ತಿಯು ಬಂಧಿತ ವ್ಯಕ್ತಿಯನ್ನು ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ಹಸ್ತಾಂತರಿಸಬೇಕು ಮತ್ತು ಕೋಟ್ಪಾ ಕಾಯ್ದೆ 2003 ರ ಸೆಕ್ಷನ್‌ 21 ಮತ್ತು 23ರ ಅಡಿಯಲ್ಲಿ ದೂರು ನೀಡಬೇಕು.

ಬಂಧನಕ್ಕೊಳಗಾದ ಯಾವುದೇ ವ್ಯಕ್ತಿಯನ್ನು ಕಾನೂನಿನ ಪ್ರಕಾರ ವ್ಯವಹರಿಸಲು ಸಂಬಂಧಪಟ್ಟ ದಂಡಾಧಿಕಾರಿ(ಮ್ಯಾಜಿಸ್ಟ್ರೇಟ್‌) ಮುಂದೆ ಹಾಜರಿಪಡಿಸಲಾಗುತ್ತದೆ.

ಕೋಟ್ಪಾ -ಸೆಕ್ಷನ್‌ -6 (ಎ ಮತ್ತು ಬಿ)
ಉಲ್ಲಂಘನೆಯಾದಲ್ಲಿ ಈ ಕೆಳಕಂಡ ಅಧಿಕಾರಿಗಳು
ಕ್ರಮ ಕೈಗೊಳ್ಳಬಹುದು
-ಶೈಕ್ಷಣಿಕ ಸಂಸ್ಥೆಯ ಉಪಕುಲಪತಿ ಅಥವಾ ನಿರ್ದೇಶಕರು ಅಥವಾ ವಿಶ್ವವಿದ್ಯಾಲಯದ ಶಿಸ್ತುಪಾಲನಾಧಿಕಾರಿ (ಪ್ರೊಕ್ಟರ್‌) ಅಥವಾ ಪ್ರಾಂಶುಪಾಲರು ಅಥವಾ ಮುಖ್ಯ ಶಿಕ್ಷಕರು ಅಥವಾ ಶಿಕ್ಷಣ ಸಂಸ್ಥೆಯ ಉಸ್ತುವಾರಿ.
-ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರು.
-ಆಹಾರ ಮತ್ತು ಔಷಧ ಇಲಾಖೆಯ ರಾಜ್ಯ ಆಹಾರ ಮತ್ತು ಔಷಧ ಆಡಳಿತದಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಯ ಎಲ್ಲ ಅಧಿಕಾರಿಗಳು.
-ಶಿಕ್ಷಣ ಇಲಾಖೆಯಿಂದ ಇನ್ಸ್‌ಪೆಕ್ಟರ್‌ ಹುದ್ದೆಯ ಎಲ್ಲಾ ಅಧಿಕಾರಿಗಳು.
-ಪುರಸಭೆಯ ಆರೋಗ್ಯ ಅಧಿಕಾರಿಗಳು.
-ಪಂಚಾಯತ್‌ ರಾಜ್‌ ಸಂಸ್ಥೆಗಳ ಪ್ರತಿನಿಧಿಗಳು (ಅಧ್ಯಕ್ಷರು ಅಥವಾ ಸರ್ಪಂಚ್‌ ಅಥವಾ ಪಂಚಾಯತ್‌ ಕಾರ್ಯದರ್ಶಿ)
-ಜಿಲ್ಲಾ ಆರೋಗ್ಯ ವಿಭಾಗದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಅಥವಾ ಹಣಕಾಸು ವ್ಯವಸ್ಥಾಪರು (ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌)
-ಸಿವಿಲ್‌ ಸರ್ಜನ್‌ ಅಥವಾ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿ.ಎಚ್‌.ಸಿ.) ದ ವೈದ್ಯಕೀಯ ಅಧಿಕಾರಿ.
-ಬ್ಲಾಕ್‌ ಡೆವಲಪ್‌ಮೆಂಟ್‌ ಆಫೀಸರ್‌ ಮತ್ತು ಬ್ಲಾಕ್‌ ಎಕ್ಸ್‌ಟೆನ್ಶನ್‌ ಎಜುಕೇಟರ್‌ (ಬಿಇಇ)
-ರಾಜ್ಯ ಸರಕಾರದ ಆರೋಗ್ಯ ಮತ್ತು ಶಿಕ್ಷಣ ವಿಭಾಗದ ನಿರ್ದೇಶಕರು ಅಥವಾ ಜಂಟಿ ನಿರ್ದೇಶಕರು.
-ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯ ರಾಜ್ಯ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ನೋಡಲ್‌ ಅಧಿಕಾರಿಗಳು.
ಈ ಎಲ್ಲ ಮೇಲ್ಕಂಡ ಅಧಿಕಾರಿ ವರ್ಗದವರು ಕೋಟ್ಪಾ ಸೆಕ್ಷನ್‌ 6 (ಎ ಮತ್ತು ಬಿ) ಯ ಉಲ್ಲಂಘನೆಯಾದಲ್ಲಿ ಸೂಕ್ತ ಕ್ರಮ ಕೈಗೊಂಡಲ್ಲಿ ಈ ಕಾಯಿದೆಯು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಸಹಕಾರಿಯಾಗುವುದು.

ಜನಸಾಮಾನ್ಯರ ಪಾತ್ರವೇನು?
ಕೋಟ್ಪಾ – ಸೆಕ್ಷನ್‌ 6 ಎ ಮತ್ತು ಬಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಎಲ್ಲರ ಪಾತ್ರ ಬಹಳ ಪ್ರಾಮುಖ್ಯವಾಗಿದೆ. ಯಾವುದೇ ಕಾನೂನು, ಕಾಯಿದೆಗಳು ಯಶಸ್ವಿಯಾಗಿ ಜಾರಿಯಾಗುವುದು ಸಾರ್ವಜನಿಕರು ಎಷ್ಟರ ಮಟ್ಟಿಗೆ ಆ ಕಾನೂನನ್ನು ಅನುಷ್ಠಾನಗೊಳಿಸಲು ತಯಾರಿದ್ದಾರೆ ಎನ್ನುವುದರ ಮೇಲೆ ನಿಂತಿದೆ. ಆ ನಿಟ್ಟಿನಲ್ಲಿ ಕೋಟ್ಪಾ -ಸೆಕ್ಷನ್‌ 6 ಎ ಮತ್ತು ಬಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬಹುದು:

-ನಮ್ಮ-ನಮ್ಮ ವ್ಯಾಪ್ತಿಯ ಅಂಗಡಿ, ಮಾರುಕಟ್ಟೆಗಳಲ್ಲಿ ಹದಿನೆಂಟು ವರ್ಷದೊಳಗಿ ನವರಿಗೆ ತಂಬಾಕು ವಿತರಣೆ ಮಾಡುತ್ತಿದ್ದಾರೆಯೇ ಎಂದು ಗಮನಿಸಬೇಕು.
-ಒಂದು ವೇಳೆ 18 ವರ್ಷದೊಳಗಿನವರಿಗೆ ತಂಬಾಕು ವಿತರಣೆ ಮಾಡುವುದನ್ನು ಗಮನಿಸಿದ್ದರೆ, ಅವರಿಗೆ ಕಾನೂನಿನ ಕುರಿತು ಅರಿವು ಮೂಡಿಸಬೇಕು. ಒಂದು ವೇಳೆ ಅವರು ಸರಿಯಾಗಿ ಪ್ರತಿಕ್ರಿಯಿಸದಿದ್ದಲ್ಲಿ ಸಂಬಂಧಿಸಿದ ಸೂಕ್ತ ಅಧಿಕಾರಿಗಳ ಗಮನಕ್ಕೆ ತರಬೇಕು.
-ಕೋಟ್ಪಾ -ಸೆಕ್ಷನ್‌ 6 ರ ಅನ್ವಯ ಪ್ರತಿಯೊಂದು ಅಂಗಡಿಯಲ್ಲಿ ಫ‌ಲಕವಿರಬೇಕು. ಫ‌ಲಕವು ಕೇವಲ ಹೆಸರಿಗೆ ಮಾತ್ರವಿರದೆ, ಕಾನೂನನ್ನು ಸರಿಯಾಗಿ ಪಾಲಿಸಬೇಕು.
-ಶಾಲಾ ಸುತ್ತಲಿನ 100 ಗಜ ಅಂತರದ ಅಂಗಡಿಗಳಲ್ಲಿ ತಂಬಾಕು ಅಥವಾ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆಯೇ ಅಥವಾ ಯಾರಾದರೂ ತಂಬಾಕಿನ ಸೇವನೆಯನ್ನು ಮಾಡುತ್ತಿದ್ದಾರೆಯೇ ಎಂದು ಶಾಲಾ ಮುಖ್ಯಸ್ಥರು ಹಾಗೂ ಮಕ್ಕಳ ಹೆತ್ತವರು ಹಾಗೂ ಪೋಷಕರು ಗಮನಿಸುತ್ತಿರಬೇಕು.
-ಶಾಲಾ ಸುತ್ತಮುತ್ತ ಯಾರಾದರೂ ತಂಬಾಕನ್ನು ಬಳಕೆ ಮತ್ತು ಮಾರಾಟ ಮಾಡುವುದನ್ನು ಶಾಲಾ ವಿದ್ಯಾರ್ಥಿಗಳು ಶಾಲೆಯ ಮುಖ್ಯಸ್ಥರಿಗೆ ತಿಳಿಸುವಂತೆ ಪ್ರೇರೇಪಿಸಬೇಕು.

ಸಾರ್ವಜನಿಕರ ಗಮನಕ್ಕೆ
-ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಧೂಮಪಾನ ಸೇವನೆಯನ್ನು ಮಾಡುವುದು ಕಂಡುಬಂದಲ್ಲಿ ಅಥವಾ ಯಾವುದೇ ಕೋಟ್ಪಾ ಕಾಯಿದೆಯನ್ನು ಉಲ್ಲಂಘಿಸಿದರೆ, ಸಾರ್ವಜನಿಕರು ಸುಲಭವಾಗಿ ಈ ಕೆಳಗಿನಂತೆ ದೂರನ್ನು ದಾಖಲಿಸಬಹುದು.
-ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ Stoptobaccoಆ್ಯಪ್‌ನ್ನು ಇನ್‌ಸ್ಟಾಲ್‌ ಮಾಡಿ, ಅನಂತರ “ರಿಜಿಸ್ಟರ್‌ ಕಂಪ್ಲೆಂಟ್‌’ ಕ್ಲಿಕ್‌ ಮಾಡಿ, ಅಂಗಡಿಯ ಫೋಟೊವನ್ನು ಅಪ್‌ ಲೋಡ್‌ ಮಾಡಿ, ನಿಮ್ಮ ಹೆಸರನ್ನು ಟೈಪ್‌ ಮಾಡಿ, ಅನಂತರ ಜಿಲ್ಲೆಯನ್ನು ಆಯ್ಕೆ ಮಾಡಿ, ಬಳಿಕ ಕೋಟಾ³ದ ಯಾವ ಕಾಯಿದೆಯನ್ನು ಉಲ್ಲಂಘಿಸಿದ್ದಾರೆಂದು ಆಯ್ಕೆ ಮಾಡಿ, ತದನಂತರ ಅಂಗಡಿಯ ವಿಳಾಸ, ನಗರ ಮತ್ತು ದೂರುದಾರರ ದೂರವಾಣಿ ಅಥವಾ ಮೊಬೈಲ್‌ ಸಂಖ್ಯೆ ಟೈಪ್‌ ಮಾಡಿ ಸಬ್‌ಮಿಟ್‌ ಮಾಡಿ.
-ಈಗ ನೀವು ದಾಖಲಿಸಿದ ದೂರು ದಾಖಲಾಗಿರುತ್ತದೆ, ಅನಂತರ ಸಂಬಂಧಪಟ್ಟ ಅಧಿಕಾರಿ ವರ್ಗದವರು ಕ್ರಮ ಕೈಗೊಳ್ಳುತ್ತಾರೆ.
-ಆ್ಯಪ್‌ ಡೌನ್‌ಲೋಡ್‌ಗಾಗಿ ಈ ಕೆಳಗಿನ ಲಿಂಕ್‌ನ್ನು ಕ್ಲಿಕ್‌ ಮಾಡಿ: https://play.google.com/store/apps/details?id=com.tobacco.tobacco

ಡಾ| ರೋಹಿತ್‌ ಭಾಗವತ್‌
ಸೋಶಿಯಲ್‌ ಸೈಂಟಿಸ್ಟ್‌
ಮಹೇಶ್‌ ಆಚಾರ್ಯ ಕೊಕ್ಕರ್ಣೆ
ರಿಸರ್ಚ್‌ ಅಸಿಸ್ಟೆಂಟ್‌
ಡಾ| ಮುರಳೀಧರ ಕುಲಕರ್ಣಿ
ಅಸೊಸಿಯೇಟ್‌ ಪ್ರೊಫೆಸರ್‌
ಸಮುದಾಯ ವೈದ್ಯಕೀಯ ವಿಭಾಗ, ಕೆಎಂಸಿ ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next