Advertisement

ಪ್ಲಾಸ್ಟಿಕ್‌ ನಿಷೇಧದಲ್ಲಿ ಅಧಿಕಾರಿಗಳ ಪಾತ್ರ ಹೆಚ್ಚು

12:57 AM Sep 17, 2019 | Lakshmi GovindaRaju |

ಬೆಂಗಳೂರು: ಪ್ಲಾಸ್ಟಿಕ್‌ ನಿಷೇಧ ಕಾರ್ಯದಲ್ಲಿ ಜನಪ್ರತಿನಿಧಿಗಳಿಗಿಂತ ಬಿಬಿಎಂಪಿ ಅಧಿಕಾರಿಗಳ ಪಾತ್ರ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಅಗತ್ಯ ಬಿಬಿಎಂಪಿಗಿದೆ ಎಂದು ಮೇಯರ್‌ ಗಂಗಾಬಿಕೆ ಅಭಿಪ್ರಾಯಪಟ್ಟರು.

Advertisement

ಕೆ.ಜಿ ರಸ್ತೆಯ ಕಂದಾಯ ಭವನದಲ್ಲಿ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ “ಪ್ಲಾಸ್ಟಿಕ್‌ ಬಳಕೆ ನಿಷೇಧ ಹಾಗೂ ಘನತ್ಯಾಜ್ಯ ವಿಲೇವಾರಿ’ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೂರು ವರ್ಷಗಳ ಹಿಂದೆಯೆ ನಗರದಲ್ಲಿ ಪ್ಲಾಸ್ಟಿಕ್‌ ನಿಷೇಧ ನಿಮಯ ಜಾರಿಮಾಡಲಾಗಿದೆ. ಇಲ್ಲಿಯವರೆಗೆ ನಿಷೇಧದಕ್ಕೆ ಶತಾಯಗತಾಯ ಪ್ರಯತ್ನ ಮಾಡುತ್ತಿದ್ದೇವೆ. ಆದರೂ, ಸಂಪೂರ್ಣ ಸಾಧ್ಯವಾಗಿಲ್ಲ. ಬಿಬಿಎಂಪಿ ಸದಸ್ಯರು ಹಾಗೂ ಮೇಯರ್‌ ಬದಲಾಗುತ್ತಿರುತ್ತಾರೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಶಾಶ್ವತವಾಗಿರುತ್ತಾರೆ.

ಹೀಗಾಗಿ, ಪ್ಲಾಸ್ಟಿಕ್‌ ನಿಷೇಧದಲ್ಲಿ ಹೆಚ್ಚಿನ ಜವಾಬ್ದಾರಿ ಅಧಿಕಾರಿಗಳ ಮೇಲಿರುತ್ತದೆ. ಈ ಕುರಿತು ಆಗಾಗ ಎಚ್ಚರಿಸುವ ಅಗತ್ಯವಿರುವುದಿಲ್ಲ. ಆದರೆ, ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳು ಎಚ್ಚರಿಸಿದಾಗ ಮಾತ್ರ ಪ್ಲಾಸ್ಟಿಕ್‌ ನಿಷೇಧ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗುತ್ತಾರೆ. ಆ ನಿಟ್ಟಿನಲ್ಲಿ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಅಗತ್ಯವಿದೆ ಎಂದರು.

ಪ್ಲಾಸ್ಟಿಕ್‌ ಉತ್ಪಾದನಾ ಕಾರ್ಖಾನೆಗೆ ಏಕೆ ಬೀಗ ಹಾಕುತ್ತಿಲ್ಲ ಎಂದು ವಿದ್ಯಾರ್ಥಿಯೊಬ್ಬ ಮೇಯರ್‌ಗೆ ಪ್ರಶ್ನಿಸಿದಾಗ ಉತ್ತರಿಸಿದ ಮೇಯರ್‌, ಸದ್ಯ ಬೆಂಗಳೂರಿನಲ್ಲಿರುವ ಎಲ್ಲಾ ಪ್ಲಾಸ್ಟಿಕ್‌ ಉತ್ಪಾದನಾ ಕಾರ್ಖಾನೆಗಳನ್ನು ಜಪ್ತಿ ಮಾಡಿ, ಬೀಗ ಹಾಕಲಾಗಿದೆ. ಆದರೂ ಕೆಲವೊಂದು ಕಡೆ ರಾತ್ರಿ ವೇಳೆ ಮತ್ತೂಂದು ಬಾಗಿಲಿನಿಂದ ಬಂದು ಪ್ಲಾಸ್ಟಿಕ್‌ ಉತ್ಪಾದಿಸುತ್ತಿದ್ದಾರೆ.

Advertisement

ಉಳಿದಂತೆ ನಗರದ ಹೊರಭಾಗಗಳಲ್ಲಿ ಕಾರ್ಖಾನೆಗಳಿವೆ ಹಾಗೂ ಹೊರ ಜಿಲ್ಲೆಗಳು, ರಾಜ್ಯಗಳಿಂದ ಸರಕು ಸಾಮಗ್ರಿಗಳ ಜತೆ ನಗರಕ್ಕೆ ಪ್ಲಾಸ್ಟಿಕ್‌ ಬರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಈ ವಾರ ನಗರ ಪೊಲೀಸ್‌ ಆಯುಕ್ತರು, ಆರ್‌ಟಿಒ ಅಧಿಕಾರಿಗಳ ಸಭೆ ನಡೆಸಿ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.

ಪ್ಲಾಸ್ಟಿಕ್‌ಗೆ ಪರ್ಯಾಯ ಉತ್ಪನ್ನ ನೀಡಲು ಬಿಬಿಎಂಪಿ ಏನು ಕ್ರಮವಹಿಸಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೆಯರ್‌, ಕಳೆದ ವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ಲಾಸ್ಟಿಕ್‌ ಪರ್ಯಾಯ ಬಳಿಕೆ ವಸ್ತುಗಳ ಮೇಳ ಏರ್ಪಡಿಸಲಾಗಿತ್ತು. ಅಲ್ಲಿ ಕೊಳೆಯುವ, ಬಿಸಿ ನೀರಲ್ಲಿ ಕರಗುವ ಪ್ಲಾಸ್ಟಿಕ್‌ ಪರ್ಯಾಯ ವಸ್ತುಗಳು, ಪೇಪರ್‌ ವಸ್ತುಗಳು ಬಂದಿದ್ದವು. ಆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದೆವು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ 6 ಸಾವಿರ ಟನ್‌ ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಈ ತ್ಯಾಜ್ಯವನ್ನು ಹೊರವಲಯ ಭೂಭರ್ತಿ ಸ್ಥಳಗಳಲ್ಲಿ ಎಸೆಯುತ್ತಿದ್ದೇವೆ. ಆದರೆ, ಈ ಭೂಭರ್ತಿ ಸ್ಥಳದ ಸುತ್ತಲ ಹಳ್ಳಿಗಳ ಅಂತರ್ಜಲದಲ್ಲಿ ರಸಾಯನಿಕ ಅಂಶ ಬೆರೆತು, ಕುಡಿಯುವ ನೀರು ಸಹ ಕಪ್ಪು ಬಣ್ಣದಲ್ಲಿ ಬರುತ್ತಿದೆ.

ಸದ್ಯ ಅವರಿಗೆ ಜಲಮಂಡಳಿಯಿಂದ ಪ್ರತ್ಯೇಕ ಕೊಳವೆ ಅಳವಡಿಸಿ ಶೀಘ್ರ ನೀರು ನೀಡಲು ಸೂಚಿಸಲಾಗಿದೆ. ವೈದ್ಯಕೀಯ ತ್ಯಾಜ್ಯವನ್ನು ಸದ್ಯ ಘನ ತ್ಯಾಜ್ಯದಲ್ಲಿ ಸಂಗ್ರಹಿಸಬಹುದು. ಮುಂದಿನ ದಿನಗಳಲ್ಲಿ ವೈದ್ಯಕೀಯ ತ್ಯಾಜ್ಯ ಪ್ರತ್ಯೇಕ ಸಂಗ್ರಹಕ್ಕೂ ಕ್ರಮಕೈಗೊಳ್ಳಲಾಗುವುದು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ವಾರ್ತಾ ಇಲಾಖೆ ಉಪ ನಿರ್ದೇಶಕಿ ಪಲ್ಲವಿ ಹೊನ್ನಾಪುರ ಮಾತನಾಡಿದರು. ಬೆಂಗಳೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್‌.ಸೋಮಶೇಖರ್‌ ಗಾಂಧಿ, ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಎಚ್‌.ಎಸ್‌.ಹರ್ಷಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next