Advertisement

ಸಹಬಾಳ್ವೆಗೆ ಮಠಗಳ ಪಾತ್ರ ಅಪಾರ

11:45 AM Apr 20, 2022 | Team Udayavani |

ಚಿಕ್ಕಮಗಳೂರು: ಸಮಾಜದಲ್ಲಿ ಶಾಂತಿ-ಸಹಬಾಳ್ವೆ ಮೂಡಿಸುವಲ್ಲಿ ಮಠಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಮಂಗಳವಾರ ಕೊಪ್ಪ ತಾಲೂಕು ಹರಿಹರಪುರ ಶ್ರೀಮಠದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಬದಲಾವಣೆ ಕಾರ್ಯ ಮಠಗಳಿಂದ ನಿರಂತರವಾಗಿ ನಡೆಯುತ್ತಿದೆ. ಅದರಂತೆ ಹರಿಹರಪುರ ಶ್ರೀಮಠದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಶ್ರದ್ಧೆ ಯಿಂದ ಜನರ ಮನಸ್ಸು ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು.

ಎಲ್ಲಾ ಮನಸ್ಸುಗಳನ್ನು ಜೋಡಿಸುವ ಕೆಲಸ ಅಷ್ಟು ಸುಲಭವಲ್ಲ. ಆದರ್ಶಯುತ ಸಮಾಜ ನಿರ್ಮಾಣ ವಾಗಬೇಕಾದರೆ ಗುರುಭಕ್ತಿ ಮತ್ತು ಆತ್ಮವಿಶ್ವಾಸ ಬಹಳ ಮುಖ್ಯವಾಗಿರಬೇಕು. ಶಂಕರಾಚಾರ್ಯರ ಶಕ್ತಿ ಇಡೀ ದೇಶಕ್ಕೆ ತಿಳಿದಿದೆ. ಪವಿತ್ರ ಹೀನ ಸಮಾಜವನ್ನು ಚಾರಿತ್ರ್ಯವಂತ ಸಮಾಜ ನಿರ್ಮಾಣ ಮಾಡಲು ಶಂಕರಾಚಾರ್ಯರು ದೇಶದ ಉದ್ದಗಲಕ್ಕೂ ಮಠಗಳನ್ನು ಸ್ಥಾಪನೆ ಮಾಡಿದರು.

ಅವರ ವಿಚಾರ, ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇವರಲ್ಲಿ ಮತ್ತು ಗುರುವಿನಲ್ಲಿನ ಭಕ್ತಿ ಬಹಳ ಮುಖ್ಯ, ಭಕ್ತಿಯ ಅಭಿವ್ಯಕ್ತಿಯಾದಾಗ ದೇವರು ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ. ಅಸ್ತಿತ್ವಕ್ಕಾಗಿ ನಾನು ಎಂದು ಹೊಡೆದಾಡುತ್ತೇವೆ. ನಾನು ಎಂಬ ಅಸ್ತಿತ್ವವನ್ನು ಸಮರ್ಪಣೆ ಮಾಡಿದರೆ ಲೋಕದ ನಿಸರ್ಗದ ಒಂದು ಭಾಗವಾಗುತ್ತೇವೆ ಎಂದರು.

ಶ್ರೀಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾ ಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

Advertisement

ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್‌.ಜೀವರಾಜ್‌, ಹೊರನಾಡು ಅನ್ನಪೂರ್ಣೇಶ್ವರಿ ಶ್ರೀ ಕ್ಷೇತ್ರದ ಧರ್ಮದರ್ಶಿ ಡಾ| ಭೀಮೇಶ್ವರ ಜೋಶಿ, ಶ್ರೀ ಮಠದ ಆಡಳಿತಾಧಿಕಾರಿ ರವಿಶಂಕರ್‌, ರಾಮಸ್ವಾಮಿ ಸೇರಿ ಅನೇಕರು ಇದ್ದರು.

ಅದ್ಧೂರಿ ಸ್ವಾಗತ:

ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಶ್ರೀಮಠಕ್ಕೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಮಠವನ್ನು ಪ್ರವೇಶಿಸಿದ ಮುಖ್ಯಮಂತ್ರಿಗಳು ಶ್ರೀ ಲಕ್ಷೀನರಸಿಂಹ ಸ್ವಾಮಿ, ಆದಿ ಶಂಕರಾಚಾರ್ಯ, ಶಾರದಾ ಪರಮೇಶ್ವರಿ ದೇವರ ದರ್ಶನ ಪಡೆದರು. ಲಕ್ಷೀನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಮುಖ್ಯಮಂತ್ರಿಗಳು ಇಡೀ ನಾಡು ಸುಭಿಕ್ಷವಾಗಿರುವಂತೆ, ಜನರನ್ನು ಆಯುರಾರೋಗ್ಯವಂತರನ್ನಾಗಿ ಇಡುವಂತೆ ವಿಶೇಷವಾಗಿ ದೇವರಲ್ಲಿ ಪ್ರಾರ್ಥಿಸಿದರು.

ನಾನು ಮುಖ್ಯಮಂತ್ರಿಯಾಗಿ ಇಲ್ಲಿಗೆ ಬಂದಿಲ್ಲ. ಭಕ್ತನಾಗಿ ಬಂದಿದ್ದೇನೆ. ನಾಡಿಗೆ ಶ್ರೇಯಸ್ಸು ನೀಡುವಂತೆ ಶ್ರದ್ಧಾಪೂರ್ವಕವಾಗಿ ದೇವರಲ್ಲಿ ಪ್ರಾರ್ಥಿಸಿದ್ದೇನೆ. ಶ್ರೀಮಠ ಉತ್ತಮ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು, ಮಠಕ್ಕೆ ಸರ್ಕಾರದಿಂದ ಎಲ್ಲಾ ಸಹಾಯ- ಸಹಕಾರ ನೀಡಲಾಗುವುದು. –ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

 

Advertisement

Udayavani is now on Telegram. Click here to join our channel and stay updated with the latest news.

Next