ರಬಕವಿ–ಬನಹಟ್ಟಿ: ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯ ನೌಕರರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಅದರಲ್ಲೂ ಕೋವಿಡ್ ನಿರ್ವಹಣೆಯ ಸಂದರ್ಭದಲ್ಲಿ ಸರ್ಕಾರಿ ನೌಕರರು ಮಾಡಿದ ಸೇವೆ ಶ್ರೇಷ್ಠವಾದುದು. ಆದ್ದರಿಂದ ದೇಶ ಕಟ್ಟುವ ಕಾರ್ಯದಲ್ಲಿ ರಾಜ್ಯ ಸರ್ಕಾರಿ ನೌಕರರ ಪಾತ್ರ ಬಹಳಷ್ಟು ಮುಖ್ಯವಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಅವರು ಶನಿವಾರ ಸ್ಥಳೀಯ ಭದ್ರನವರ ಕಲ್ಯಾಣ ಮಂಟಪದಲ್ಲಿ ರಬಕವಿ ಬನಹಟ್ಟಿ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಾಧಾರಣ ಸಭೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ನೌಕರರಿಗೆ ಯಾವುದೆ ರೀತಿಯ ಕಿರುಕುಳ ಬೇಡ. ನೌಕರರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಸಂಘಟನೆ ಮುಖ್ಯವಾಗಿದೆ. ಸರ್ಕಾರಿ ನೌಕರರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಲಿ. ಸರ್ಕಾರಿ ನೌಕರರು ಅನ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು. ರಾಜ್ಯ ಸರ್ಕಾರದಲ್ಲಿರುವ ಎಲ್ಲ ಇಲಾಖೆಗಳಲ್ಲಿಯ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ತುರುವುದರ ಜೊತೆಗೆ ಸಾರಿಗೆ ನೌಕರರು ಅತ್ಯಂತ ಕಡಿಮೆ ಸಂಬಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕುರಿತು ಕೂಡಾ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಇದೇ ಸಂದರ್ಭದಲ್ಲಿ ರಬಕವಿ ಬನಹಟ್ಟಿ ತಾಲ್ಲೂಕು ಅಧ್ಯಕ್ಷ ಬಸವರಾಜ ಹನಗಂಡಿ ಮಾತನಾಡಿ, ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಸರ್ಕಾರ ಅದಷ್ಟು ಬೇಗನೆ ತುಂಬಿಕೊಳ್ಳುವಂತೆ ಕ್ರಮ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ನೌಕರರ ದಿ.1.4.2006 ರಲ್ಲಿ ಜಾರಿಯಾದ ಪಿಂಚಣಿ ಯೋಜನೆಯು ಸರ್ಕಾರಿ ನೌಕರರ ಮರಣ ಶಾಸನವಾಗಿದೆ. ಆದ್ದರಿಂದ ಇದನ್ನು ರದ್ದುಗೊಳಿಸಬೇಕು. ಅದೇ ರೀತಿಯಾಗಿ ಸಿಎನ್ಆರ್ ಕಾನೂನು ರದ್ದುಗೊಳಿಸಬೇಕು. ಶಿಕ್ಷಕರ ವರ್ಗಾವಣೆಯಲ್ಲಿ ಶೇ. ೨೫ ರಷ್ಟರ ಬದಲಾಗಿ ಶೇ. 100 ರಷ್ಟು ವರ್ಗಾವಣೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ಎಂ.ಎನ್.ಬಳ್ಳಾರಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ವೇದಿಕೆಯ ಮೇಲೆ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಸಂಜೀವ ಹಿಪ್ಪರಗಿ, ಗ್ರೇಡ್.೨ ತಹಶೀಲ್ದಾರ್ ಎಸ್.ಬಿ.ಕಾಂಬಳೆ, ಪೌರಾಯುಕ್ತ ಶ್ರೀನಿವಾಸ ಜಾಧವ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ನ್ಯಾಮಗೌಡ, ಶ್ರೀಶೈಲ ಬೀಳಗಿ, ಬಸಪರಪ್ಪ ಹಟ್ಟಿ, ಶಿವಾನಂದ ಶೆಲ್ಲಿಕೇರಿ, ವಿಜಯಕುಮಾರ ವಂದಾಲ, ಮಲ್ಲಿಕಾರ್ಜುನ ಖವಟಕೊಪ್ಪ, ಪ್ರಕಾಶ ಮಠಪತಿ, ವಿಠ್ಠಲ ವಾಲೀಕಾರ, ಎಸ್.ಬಿ.ಭುಜರುಕ್, ನೀಲಕಂಠ ದಾತಾರ, ಅನುರಾಧಾ ಹಾದಿಮನಿ, ಎ.ಜಿ.ಕಾಖಂಡಕಿ ಸೇರಿದಂತೆ ಅನೇಕರು ಇದ್ದರು.
ಮಹೇಶ ಬಾಗಲಕೋಟ ಸ್ವಾಗತಿಸಿದರು. ಪ್ರಶಾಂತ ಹೊಸಮನಿ ಮತ್ತು ಪದ್ಮಾವತಿ ಹಳ್ಳೂರ ನಿರೂಪಿಸಿದರು. ಮಲ್ಲಿಕಾರ್ಜುನ ಗಡೆನ್ನವರ ವಂದಿಸಿದರು.
ಸಮಾರAಭದಲ್ಲಿ ಶಂಕರ ಅರಬಳ್ಳಿ, ಎಸ್.ಎಲ್.ಕಾಗಿಯವರ, ರವಿ ಹುಕ್ಕೇರಿ, ಶಂಕರ ಹಳಿಂಗಳಿ, ಬಿ.ಡಿ.ನೇಮಗೌಡ, ಯಶವಂತ ವಾಜಂತ್ರಿ, ಮ.ಕೃ.ಮೇಗಾಡಿ ಸೇರಿದಂತೆ ರಬಕವಿ ಬನಹಟ್ಟಿ ತಾಲ್ಲೂಕು ಘಟಕದ ನೌಕರರ ಸಂಘದ ಸದಸ್ಯರು ಇದ್ದರು.