ಬೆಳಗಾವಿ: ಎಂಜಿನಿಯರ್‌ಗಳು ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಲು ತಾಂತ್ರಿಕ ಜ್ಞಾನ ಹಾಗೂ ಪರಿಣಿತಿ ಹೊಂದಿದರೆ ಸಾಲದು. ಜತೆಗೆ ಕಾನೂನು, ನಿರ್ವಹಣೆ, ಆಡಳಿತ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆಯೂ ಅರಿವು ಹೊಂದಬೇಕಾದ ಅಗತ್ಯವಿದೆ. ಆಗ ಆ ಕಾಮಗಾರಿ ಮತ್ತು ಯೋಜನೆ ಯಶಸ್ಸು ಆಗಲು ಸಾಧ್ಯ ಎಂದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಗಿರೀಶ ಹೊಸೂರ ಹೇಳಿದರು.
ನೆಹರೂ ನಗರದ ಇನ್‌ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಸಭಾಂಗಣದಲ್ಲಿ ರವಿವಾರ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಹಾಗೂ ಎಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರಗತಿಗಾಗಿ ಎಂಜಿನಿಯರ್‌ಗಳ ಪಾತ್ರ ಮುಖ್ಯವಾಗಿದೆ. ಎಂಜಿನಿಯರ್‌ಗಳು ದೇಶದ ಅಭಿವೃದ್ಧಿಯಲ್ಲಿ ಸದಾ ಮುಂದೆ ನಿಂತಿರುತ್ತಾರೆ. ಹೊಸ ಯೋಜನೆಗಳ ಮೂಲಕ ಅಭಿವೃದ್ಧಿಗೆ ಬುನಾದಿ ಹಾಕುತ್ತಾರೆ. ಎಂಜಿನಿಯರ್‌ಗಳು ಇತರ ಕ್ಷೇತ್ರಗಳ ಬಗ್ಗೆಯೂ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಇದರಿಂದ ಯೋಜನೆಯನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದರು.
ವೈದ್ಯಕೀಯ ಶಿಕ್ಷಣ ಹೊರತುಪಡಿಸಿ ಇನ್ನುಳಿದ ಯಾವುದೇ ಕ್ಷೇತ್ರದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳು ಅಭ್ಯಸಿಸುವ ನಿಟ್ಟಿನಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗುತ್ತಿದೆ. ಈಗಾಗಲೇ ಕರಡು ಪ್ರತಿ ಸಿದ್ಧಪಡಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುತ್ತಿದೆ. ಮುಂಬರುವ ಲೋಕಸಭೆಯ ಚಳಿಗಾಲ ಅಧಿವೇಶನದಲ್ಲಿ ನೂತನ ಶಿಕ್ಷಣ ನೀತಿಯನ್ನು ಮಂಡಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಉದ್ಯಮಿ ಸಂಗಮೇಶ ನಿರಾಣಿ ಮಾತನಾಡಿ, ರೈತರು ಕೃಷಿ ಕಾರ್ಯಗಳಿಗೆ ನೀರನ್ನು ಬಳಸಿಕೊಳ್ಳಲು ತಂತ್ರಜ್ಞಾನದ ಪ್ರಯೋಜನ ಪಡೆಯಬೇಕು. ಮಳೆ ನೀರಿನ ಪುನರ್ ಬಳಕೆಗಾಗಿ ಎಂಜಿನಿಯರ್‌ಗಳು ಸಂಶೋಧನೆ ಕೈಗೊಳ್ಳಬೇಕು.ಮಳೆ ನೀರು ಕೊಯ್ಲು ಘಟಕಗಳ ಬಗ್ಗೆ ಸಾರ್ವಜನಿಕರು ಆಸಕ್ತಿ ತೋರಬೇಕು. ನೀರಿನ ಮಿತ ಬಳಕೆಗೆ ಎಲ್ಲರೂ ಆದ್ಯತೆ ನೀಡಬೇಕು ಎಂದರು.
ಅನೇಕ ನದಿಗಳ ನೀರು ವ್ಯರ್ಥವಾಗಿ ಸಮುದ್ರ ಸೇರುವ ಮೂಲಕ ಪೋಲಾಗುತ್ತಿದೆ. ನದಿಗಳ ಜೋಡಣೆಯಿಂದ ಈ ನೀರನ್ನು ಕುಡಿಯಲು ಹಾಗೂ ಕೃಷಿಗೆ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ. ರಾಜ್ಯದಲ್ಲಿಯೂ ನದಿಗಳ ಜೋಡಣೆ ಮಾಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪುಣೆಯ ವಿಜ್ಞಾನಿ ಸೆಲ್ವ ಬಾಲನ್ ಉಪನ್ಯಾಸ ನೀಡಿ, ತಾಂತ್ರಿಕ ಕ್ಷೇತ್ರದಲ್ಲಿ ಅನೇಕ ಮಹತ್ವದ ಬದಲಾವಣೆಗಳಾಗುತ್ತಿವೆ. ಎಂಜಿನಿಯರ್‌ಗಳು ನೂತನ ತಂತ್ರಜ್ಞಾನಕ್ಕೆ ಹೊಂದಿಕೊಂಡು ಕೆಲಸ ಮಾಡುವ ಸವಾಲು ಎದುರಾಗಿದೆ. ಈ ಎಲ್ಲವನ್ನೂ ಸದ್ಬಳಕೆ ಮಾಡಿಕೊಂಡರೆ ಉನ್ನತ ಅವಿಷ್ಕಾರಗಳನ್ನು ಮಾಡಬಹುದಾಗಿದೆ ಎಂದು ಹೇಳಿದರು.
ಧಾರವಾಡದ ಡಾ. ರಾಜೇಂದ್ರ ಪೋದ್ದಾರ ಉಪನ್ಯಾಸ ನೀಡಿದರು. ಇನ್‌ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಸ್ಥಳೀಯ ಘಟಕದ ಅಧ್ಯಕ್ಷ ಡಾ. ಸಿದ್ರಾಮಪ್ಪ ಇಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಬಿ.ಜಿ. ಧರೆನ್ನಿ ಇದ್ದರು.