ಕಾಪು: ಮನುಷ್ಯನ ಪರಿಪೂರ್ಣ ಬೆಳವಣಿಗೆಯಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು. ಯಾವುದೇ ಒಂದು ಶಾಲೆಯನ್ನು ಕಟ್ಟುವುದು ದೊಡ್ಡ ಸಂಗತಿಯಲ್ಲ. ಉತ್ತಮ ರೀತಿಯಲ್ಲಿ ಮುನ್ನಡೆಸುವುದು ಬಹಳಷ್ಟು ಜವಾಬ್ದಾರಿಯ ಕೆಲಸವಾಗಿರುತ್ತದೆ. ಶಾಲೆಗಳಲ್ಲಿ ನೀಡುವ ಉತ್ತಮ ಶಿಕ್ಷಣ ಮಕ್ಕಳ ಬದುಕು ಬೆಳಗುತ್ತದೆ. ಅದು ಶಾಲೆ ಕಟ್ಟಲು ಸಹಕರಿಸಿದವರು, ದೇಹ ದಣಿಸಿದವರಲ್ಲಿಯೂ ಸಾರ್ಥಕ್ಯ ಭಾವ ಮೂಡಲು ಕಾರಣ ವಾಗುತ್ತದೆ ಎಂದು ಉಡುಪಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಹೇಳಿದರು.
ಅವರು ಗುರುವಾರ ಕೈಪುಂಜಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಪ್ರಯುಕ್ತ ಕೈಪುಂಜಾಲು ವಿದ್ಯಾಸಾಗರ ಎಜುಕೇಶನ್ ಟ್ರಸ್ಟ್ ನೇತೃತ್ವದಲ್ಲಿ ಕೈಪುಂಜಾಲು ಚೆನ್ನಪ್ಪ ಸಾಹುಕಾರ್ ಸ್ಮರಣಾರ್ಥ ನಿರ್ಮಾಣಗೊಂಡ ವಿಶ್ವೇಶತೀರ್ಥ ವಿದ್ಯಾಲಯದ ಕಟ್ಟಡವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಶಿಕ್ಷಕರ ಜವಾಬ್ದಾರಿ ಸಭಾಭವನ ಉದ್ಘಾಟಿಸಿದ ಡಾ| ಜಿ. ಶಂಕರ್ ಮಾತನಾಡಿ, ಮೊಗವೀರ ಸಮಾಜದ ಹಿರಿಯರ ಪರಿಶ್ರಮದ ಫಲವಾಗಿ ಕರಾವಳಿಯಲ್ಲಿ ಮಂದಿರಗಳು, ಶಾಲೆಗಳು ಆರಂಭ ಗೊಂಡಿವೆ. ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಿರಿಯರು ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ. ಇಲ್ಲಿ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡುವ ಜವಾ ಬ್ದಾರಿ ಶಿಕ್ಷಕ ವರ್ಗದ್ದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಬೆಂಗಳೂರು ಏಸ್ ಸಂಸ್ಥೆಯ ಅಧ್ಯಕ್ಷ ರಾಮದಾಸ್ ಪುತ್ತಿಗೆ ಶುಭಾಶಂಸನೆಗೈದರು.
ಸಮ್ಮಾನ: ಪೇಜಾವರ ಶ್ರೀಗಳನ್ನು ಫಲವಸ್ತುಗಳನ್ನು ನೀಡಿ, ಪುಷ್ಪಾರ್ಚ ನೆಯೊಂದಿಗೆ ಗೌರವಿಸಲಾಯಿತು. ದಾನಿಗಳು, ಗುತ್ತಿಗೆದಾರರು, ನಿವೃತ್ತ ಶಿಕ್ಷಕರು, ಸ್ಥಳದಾನಿಗಳು ಮತ್ತು ಕಟ್ಟಡ ಸಮಿತಿ ಪ್ರಮುಖರನ್ನು, ಟ್ರಸ್ಟ್‌ನ ಪ್ರಮುಖರನ್ನು ಸಮ್ಮಾನಿಸಿ, ಗೌರವಿಸಲಾಯಿತು.
ಉದ್ಯಮಿಗಳಾದ ಸಾಧು ಸಾಲ್ಯಾನ್, ಹರಿಯಪ್ಪ ಸಾಲ್ಯಾನ್, ಕೆ. ವಾಸುದೇವ ಶೆಟ್ಟಿ, ಮನೋಹರ್ ಎಸ್. ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ, ಆನಂದ ತೀರ್ಥ ವಿದ್ಯಾಲಯದ ಕಾರ್ಯದರ್ಶಿ ಬಿ. ಸುಬ್ರಹ್ಮಣ್ಯ ಸಾಮಗ, ಶಿಕ್ಷಣ ತಜ್ಞ ವಾಸುದೇವ ಭಟ್ ಮೈಸೂರು, ದಂಡತೀರ್ಥ ಪ್ರತಿಷ್ಠಾನದ ಅಧ್ಯಕ್ಷ ಸೀತಾರಾಮ ಭಟ್, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಕೈಪುಂಜಾಲು ಮೊಗವೀರ ಮಹಾಸಭಾದ ಅಧ್ಯಕ್ಷ ಪ್ರವೀಣ್ ಶ್ರೀಯಾನ್, ಪ್ರಮುಖರಾದ ನಾಗರಾಜ ಸುವರ್ಣ, ಚಂದ್ರಶೇಖರ ಅಮೀನ್, ದಯಾವತಿ ಎಸ್. ಕುಂದರ್, ಸಂತೋಷ್ ಕುಂದರ್, ಸಾಕ್ಷತ್ ಯು.ಕೆ., ಆಶಾಲತಾ ವೇದಿಕೆಯಲ್ಲಿದ್ದರು.
ವಿದ್ಯಾಸಾಗರ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸತೀಶ್ ಕುಂದರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಟ್ರಸ್ಟ್ ಕಾರ್ಯದರ್ಶಿ ರಮೇಶ್ ಪೂಜಾರಿ ಕೈಪುಂಜಾಲು, ವಿದ್ಯಾಧರ ಪುರಾಣಿಕ್ ಸಮ್ಮಾನಿತರನ್ನು ಪರಿಚಯಿಸಿದರು. ಕಟ್ಟಡ ನಿರ್ಮಾಣ ಸಮಿತಿ ಜತೆ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ವಂದಿಸಿದರು. ಸಚ್ಚೇಂದ್ರ ಅಂಬಾಗಿಲು ನಿರ್ವಹಿಸಿದರು.