ಚಾಮರಾಜನಗರ: ಕರ್ನಾಟಕದಲ್ಲಿ 37 ಸ್ಥಾನ ಗೆದ್ದ ಜೆಡಿಎಸ್ ಅಧಿಕಾರ ಹಿಡಿದ ರೀತಿಯಲ್ಲಿ 80 ಸ್ಥಾನಗಳನ್ನು ಬಿಎಸ್‌ಪಿ ಮತ್ತು ಮೈತ್ರಿ ಪಕ್ಷಗಳು ಗೆದ್ದು ಕೇಂದ್ರ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಹೀಗಾಗಿ ಮಾಯಾವತಿ ಯವರು ಮುಂದಿನ ಪ್ರಧಾನಿಯಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಚಾ.ನಗರ ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಡಾ. ಶಿವಕುಮಾರ್ ಹೇಳಿದರು.
ನಗರದಲ್ಲಿ ಶುಕ್ರವಾರ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಈ
ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಕೂಟ 240 ಸ್ಥಾನಗಳಿಗಿಂತ ಮೇಲೆ ಹೋಗು ವುದಿಲ್ಲ. ಕಾಂಗ್ರೆಸ್ 150 ಸ್ಥಾನಗಳನ್ನು ದಾಟು ವುದಿಲ್ಲ. ಹೀಗಾಗಿ ಯಾರೇ ಸರ್ಕಾರ ರಚಿಸಿದರೂ ಬಿಎಸ್‌ಪಿ ಬೆಂಬಲ ಪಡೆಯಬೇಕು. ಹೀಗಾಗಿ ಮಾಯಾವತಿ ಪ್ರಧಾನಿಯಾಗುವ ಸಾಧ್ಯತೆಯಿದೆ ಎಂದರು.
ಪ್ರಧಾನಿ ಸ್ಥಾನ ನೀಡುವುದಾದರೆ ಬಿಜೆಪಿ ಜೊತೆ ಬಿಎಸ್‌ಪಿ ಮೈತ್ರಿ ಮಾಡಿಕೊಳ್ಳುವುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಹುಜನ ಸಮಾಜ ಪಕ್ಷ, ಬಿಜೆಪಿ ಜೊತೆ ಕೈಜೋಡಿಸುವ ಸಾಧ್ಯತೆ ತುಂ ಬಾ ಕಡಿಮೆ. ಜಾತ್ಯತೀತ ಪಕ್ಷಗಳ ಮೈತ್ರಿ ಕೂಟದ ಜೊತೆ ಕೈಜೋಡಿಸುತ್ತದೆ ಎಂದು ತಿಳಿಸಿದರು.
ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ: ಕಾಂಗ್ರೆಸ್ ಪಕ್ಷ ಮುಖಂಡರು ಅಪಪ್ರಚಾರ ಮಾಡುವ ರೀತಿ ಬಿಎಸ್‌ಪಿ,
ಬಿಜೆಪಿಯ ಎ ಟೀಂ ಅಥವಾ ಬಿ ಟೀಂ ಅಲ್ಲ. ಇದು ಪ್ರಜಾಪ್ರಭುತ್ವ ಮೌಲ್ಯವನ್ನು ಎತ್ತಿ ಹಿಡಿಯುವ, ಬಹುಜನರಿಗಾಗಿ, ಕ್ಷೇತ್ರದಲ್ಲಿ ಬದಲಾವಣೆ ತರುವ ಪಕ್ಷವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಯವರಿಗೆ ತಮ್ಮ ಸಾಧನೆಗಳ ಬಗ್ಗೆ ಹೇಳಿಕೊಳ್ಳುವುದಕ್ಕೆ ಏನೂ ಇಲ್ಲ. ಅದಕ್ಕೆ ಬಿಎಸ್‌ಪಿ ಮೇಲೆ ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಏನೇ ಹೇಳಲಿ ನಾವು ತಲೆಕೆಡಿಸಿಕೊಳ್ಳುವುದಿಲ್ಲ, ಈಗಾ ಗಲೇ ಕ್ಷೇತ್ರಾದ್ಯಂತ 2 ಸುತ್ತು ಪ್ರಚಾರ ನಡೆಸಿದ್ದೇನೆ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ. ಉತ್ತಮ ವಾತಾವರಣ ಇದೆ, ಆದ್ದರಿಂದ ನಾನೇ ಗೆಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಧ್ರುವ, ಪ್ರಸಾದ್‌ಗೆ ವಿಶ್ರಾಂತಿ ನೀಡಿ: ನನ್ನ ಪ್ರತಿಸ್ಪರ್ಧಿಗಳಾದ ಶ್ರೀನಿವಾಸಪ್ರಸಾದ್ ಹಾಗೂ ಧ್ರುವನಾರಾಯಣ ಅವರು
ಹಿರಿಯರು. ಪ್ರಚಾರದಲ್ಲಿ ವೈಯಕ್ತಿಕ ನಿಂದನೆ ಬೇಡ, ಸಾಕಷ್ಟು ರಾಜಕಾರಣ ಮಾಡಿದ್ದೀರಿ ಸಾಕು, ಯುವ ಸಮೂಹ
ಬದಲಾವಣೆ ಬಯಸುತ್ತಿದೆ ಆದ್ದರಿಂದ ನೀವು ವಿಶ್ರಾಂತಿ ತೆಗೆದುಕೊಂಡು ನಮಗೆ ಅವಕಾಶ ಮಾಡಿಕೊಡಿ ಎಂದರು.
ವಿರೋಧಿಸುವ ಮತದಾರರಿಲ್ಲ: ನಮ್ಮ ಮತಗಳು ಕಾಂಗ್ರೆಸ್ ಮತಗಳಾಗಲು ಸಾಧ್ಯವಿಲ್ಲ. ನಾವು ಯಾರಿಗೂ ಸಹಾಯ
ಮಾಡುತ್ತಿಲ್ಲ. ನಮ್ಮ ಮನೆ ಕಟ್ಟುತ್ತಿದ್ದೇವೆ. ಬಿಜೆಪಿ, ಕಾಂಗ್ರೆಸ್ ಎರಡೂ ನಮ್ಮ ಪ್ರತಿಸ್ಪರ್ಧಿಗಳು. ಬಿಜೆಪಿ, ಕಾಂಗ್ರೆಸ್‌ಗಳ
ಹೋರಾಟದ ಮಧ್ಯೆ ಬಿಎಸ್‌ಪಿಯನ್ನು ಜನರು ಬೆಂಬಲಿ ಸುತ್ತಿದ್ದಾರೆ. ನಮ್ಮನ್ನು ವಿರೋಧಿಸುವ ಮತದಾರರು ಇಲ್ಲ.
ಹೀಗಾಗಿ ಕ್ಷೇತ್ರದಲ್ಲಿ ಬಿಎಸ್‌ಪಿ ಜಯಗಳಿಸಲಿದೆ ಎಂಬ ವಿಶ್ವಾಸವನ್ನು ಶಿವಕುಮಾರ್ ವ್ಯಕ್ತಪಡಿಸಿದರು.
ಟೀಕಿಸುವುದು ಸರಿಯಲ್ಲ: ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಕೊಳ್ಳೇಗಾಲ ಬಿಎಸ್‌ಪಿ ಶಾಸಕ ಎನ್. ಮಹೇಶ್‌ರನ್ನು ಬೆಟ್ಟಕ್ಕೆ ಸೀರೆ ಉಡಿಸುತ್ತೇವೆ ಎಂದವರು, ಏನನ್ನೂ ಮಾಡಿಲ್ಲ ಎಂದು ಟೀಕಿಸಿರುವ ಬಗ್ಗೆ ಪ್ರಶ್ನಿಸಿದಾಗ, ಕೇವಲ ಆರು ತಿಂಗಳಲ್ಲಿ ಅವರನ್ನು ಜಡ್ಜ್ ಮಾಡುವುದು ಸರಿಯಲ್ಲ. 25 ವರ್ಷಗಳಿಂದ ಕಾಂಗ್ರೆಸ್ ಗೆದ್ದಿದ್ದು ಏನು ಮಾಡಿದ್ದಾರೆ. ಬೇರೆ ಏನೂ ಬೇಡ, ರಸ್ತೆ ಪಕ್ಕ ಶೌಚಕ್ಕೆ ಹೋಗುವುದನ್ನು ತಡೆಗಟ್ಟಿ, ಶೌಚಾಲಯ ನಿರ್ಮಿಸಿಕೊಡಲು ಆಗಿಲ್ಲ. ಹೀಗಿರುವಾಗ ಬಿಎಸ್‌ಪಿ ಶಾಸಕರನ್ನು ಇಷ್ಟು ಬೇಗ ಟೀಕಿಸುವುದು ಸರಿಯಲ್ಲ ಎಂದರು.
ಸ್ಥಳೀಯರಿಗೆ ಸೌಲಭ್ಯ: ನಾನು ಗೆದ್ದರೆ ಕ್ಷೇತ್ರದಲ್ಲಿ ಇರುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿ, ಜಿಲ್ಲೆಯ ವಿದ್ಯಾವಂತ ಯುವಕರಿಗೆ ತರಬೇತಿಗಳನ್ನು ನೀಡಿ, ಅವರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇನೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದೆ ಅದರ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಆಸ್ಪತ್ರೆಯಿಲ್ಲ, ತುರ್ತು ಚಿಕಿತ್ಸೆಗಳಿಗೆ ಇನ್ನೂ ಮೈಸೂರನ್ನೇ ಅವಲಂಬಿ ಸಬೇಕಾಗಿದೆ. ಸ್ಥಳೀಯವಾಗಿ ಉತ್ತಮ ವೈದ್ಯಕೀಯ ಸೌಲಭ್ಯ ದೊರಕಿಸಲು ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಇ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ದೇವರಾಜು ಕಪ್ಪಸೋಗೆ ಇತರರು ಇದ್ದರು.