ಒಮ್ಮಿಂದೊಮ್ಮೆಲೆ ನೀನು ಮಾಡಿದ್ದೇನು? ಹೃದಯದಲ್ಲಿಯ ಹೂನಗೆಯನ್ನು ಅರಿವಾಗದಂತೆ ಕಿತ್ತುಕೊಂಡೆ. ಅನಾಮತ್ತಾಗಿ ನನ್ನ ಪ್ರೀತಿಗೆ ಘಾಸಿ ಮಾಡಿದೆ. ಇದೀಗ ನೀನಿಲ್ಲದೆ ಮೌನವೇ ಆವರಿಸಿದೆ. ಅಷ್ಟೇ ಅಲ್ಲದೆ ನಿನ್ನೂರಿನ ಬಂಡೆಗಲ್ಲುಗಳು ಕೂಡ ನನ್ನೊಡನೆ ಮಾತು ಬಿಟ್ಟಿವೆ.
ಒಂದೂ ಕಾರಣ ಕೇಳಲಿಲ್ಲ, ಯಾವ ಕಾರಣವನ್ನೂ ಹೇಳಲಿಲ್ಲ, ನನ್ನ ಒಲವ ಎದೆಗೂಡಿನಲ್ಲೊಂದು ಪ್ರೀತಿಯ ದೀಪ ಹಚ್ಚಿಟ್ಟೆ. ಇನ್ನೇನು ಪ್ರೀತಿ ಪ್ರಜ್ವಲಿಸಿ, ನಮ್ಮ ಕನಸೊಂದು ಫಲಿಸಿ ಹೊಸ ಬದುಕಿಗೆ ನಾಂದಿ ಹಾಡುತ್ತದೆ ಎನ್ನುವಷ್ಟರಲ್ಲಿ ತಟ್ಟನೇ ದೀಪ ಆರಿಸಿಟ್ಟು ಹೊರಟು ಹೋದೆಯಲ್ಲ… ಅಂದು ನಮ್ಮಲ್ಲಿ ಸರಸ, ಸಲ್ಲಾಪ, ಮುನಿಸಿನ ಜೊತೆಗೇ ಒಂದಿಷ್ಟು ಮೌನವಿತ್ತು. ನಮ್ಮಿಬ್ಬರ ಪ್ರೀತಿಗೆ ಆಕಾಶ ಸಂಭ್ರಮಿಸಿ, ಮುಂಗಾರಿನ ಅಭಿಷೇಕ ಮಾಡಿತ್ತು.
ಆ ಮಳೆಯ ತಿಳಿಹನಿಗೆ ನನ್ನೊಳಗಿನ ನವಿಲೊಂದು ನರ್ತಿಸುತ್ತಲೇ ಇತ್ತು! ಆಗೊಮ್ಮೆ ಈಗೊಮ್ಮೆ, ಶುಭ್ರ ಆಕಾಶದಲ್ಲಿ ಕಾಮನಬಿಲ್ಲು ರೋಮಾಂಚನಗೊಳ್ಳುತ್ತಿತ್ತು. ಕ್ಯಾಂಪಸ್‌ನ ಆವರಣದ ಸಂಪಿಗೆ ಮರಕ್ಕೊರಗಿ ಓದುತ್ತಾ ಕುಳಿತವನಿಗೆ ಕೀಟಲೆ ಮಾಡುತ್ತಲೇ ಇದ್ದೆ. ಅದೇನೋ ಸೆಳೆತ; ನನ್ನ ಬಳಿ ನಿಂತರೆ ನಾಚಿ ನೀರಾಗುತ್ತಿದ್ದೆ, ಕೆನ್ನೆ ಕೆಂಪಾಗುತ್ತಿದ್ದವು; ನಿನ್ನೆದೆಯ ಏರಿಳಿತ ಗಮನಿಸಿದರೆ ಪುಸ್ತಕದಲ್ಲಿನ ಅಕ್ಷರಗಳೆಲ್ಲಾ ಗೋಜಲು ಗೋಜಲು.
ಇದೀಗ, ಓದಿದ ಪಠ್ಯ ಬಾಯಿಗೆ ಬಂದರೂ, ಮೆದುಳಿಗೆ ಹೋಗುತ್ತಿಲ್ಲ! ನನ್ನೆದೆಯ ಒಳಗಿನ ಮೌನವನ್ನು ಕದಲಿಸಿದವಳು ನೀನೇ. ನನಗಿಂತಲೂ ಮೊದಲು ಮನಸ್ಸು ಬಿಚ್ಚಿ ಮಾತನಾಡಿದವಳು ನೀನು! ಏ, ಹುಡುಗ, ಪುಸ್ತಕದ ಜಗತ್ತಿಗಿಂತ ಹೊಸ ಪ್ರೀತಿಯ ಜಗತ್ತೂಂದನ್ನು ತೋರಿಸುತ್ತೇನೆ ಬಾ ಎಂದು ನಮ್ರತೆಯಿಂದ ಆಹ್ವಾನಿಸಿದವಳ ಹಿಂದೆ ಸುಮ್ಮನೇ ನಡೆದು ಬಂದವನು ನಾನು.
ನನ್ನದೆಯಲ್ಲಿ ಕುತೂಹಲದ ಮೂಟೆ ಸ್ಪಷ್ಟಗೊಳ್ಳುತ್ತಲೇ ಇತ್ತು. ಹಾಗೆಯೇ, ತುಂಬ ಹೊತ್ತು ನಡೆದವರ ನಡುವೆ ಮೌನ ಬೇರೂರಿತ್ತು. ಪ್ರಶಾಂತ ವಾತಾವರಣದಲ್ಲಿ ಸರಸರನೇ ನಡೆಯುವವಳು ತಟ್ಟನೇ ನಿಂತು ಕ್ಷಣಹೊತ್ತು ನಾಚಿ, ಮುಗುಳ್ನಕ್ಕು ಐ ಲವ್ ಯೂ ಎಂದು ಕಿವಿಯಲ್ಲಿ ಉಸಿರಿದೆಯಲ್ಲ; ಆಗ ನನ್ನನ್ನೇ ನಾನು ಮರೆತೆ! ಹೀಗೆ ದೂರ ಬಹುದೂರ ಕ್ರಮಿಸಿದೆವು, ನಂಗೊತ್ತು; ನಡೆದದ್ದು ನೇರ ದಾರಿಯೇನಲ್ಲ.
ಆದರೂ, ಭರವಸೆ ನಮ್ಮ ಜೊತೆಗಿತ್ತು, ನಡೆಯುವಾಗ ನೋವಾಗಲಿ ನಿರಾಸೆಯಾಗಲಿ, ನಮ್ಮನ್ನು ಕಾಡಲೇ ಇಲ್ಲ. ಆದರೆ, ಒಮ್ಮಿಂದೊಮ್ಮೆಲೆ ನೀನು ಮಾಡಿದ್ದೇನು? ಹೃದಯದಲ್ಲಿಯ ಹೂನಗೆಯನ್ನು ಅರಿವಾಗದಂತೆ ಕಿತ್ತುಕೊಂಡೆ. ಅನಾಮತ್ತಾಗಿ ನನ್ನ ಪ್ರೀತಿಗೆ ಘಾಸಿ ಮಾಡಿದೆ. ಇದೀಗ ನೀನಿಲ್ಲದೆ ಮೌನವೇ ಆವರಿಸಿದೆ. ಅಷ್ಟೇ ಅಲ್ಲದೆ ನಿನ್ನೂರಿನ ಬಂಡೆಗಲ್ಲುಗಳು ಕೂಡ ನನ್ನೊಡನೆ ಮಾತು ಬಿಟ್ಟಿವೆ.
ಹೊಂಡದ ದಂಡೆಗಳು ಒಡಲು ತುಂಬುವಷ್ಟು ಕಣ್ಣ ಹನಿಗಳು ಸುರಿದಿವೆ. ಮುರಿದ ನೆನಪುಗಳಿಗೆ ಕಲ್ಲೆಸೆದರೂ ಅಲೆಯಾಗಿ ಮತ್ತೆ ಬಂದು ಸಾಯಿಸುತ್ತಿವೆ. ಸುತ್ತಿಗೆ ಹೊಡೆತಕ್ಕೆ ಎದೆಬಡಿತವೇ ಪುಟಿದಂತಾಗುತ್ತಿದೆ. ಅಂದು ಮೈದುಂಬಿ ಚೆಲ್ಲಿದ ನಗುವಿನ ಫಸಲು ಈಗಿಲ್ಲ. ಬೆಟ್ಟದಷ್ಟು ಭಾರವೆನಿಸಿದೆ ನನ್ನ ಮನವು ನೀನು ಹೋದ ಮೇಲೆ. ಒಲವಿನ ಬಯಕೆ ಮರೆಯಾಗಿದೆ. ಆದಷ್ಟು ಬೇಗ ಬರುತ್ತೀಯ ತಾನೆ?
* ಲಕ್ಷ್ಮೀಕಾಂತ್ ಎಲ್ ವಿ