Advertisement

ಪತಿಯ ಮನೆಗೆ ಕರೆಸಲು ದರೋಡೆ ಕಥೆ ಕಟ್ಟಿದ ಪತ್ನಿ

12:28 PM Dec 15, 2018 | Team Udayavani |

ಬೆಂಗಳೂರು: ತಡರಾತ್ರಿಯಾದರೂ ಪತಿ ಬಾರದ ಕಾರಣಕ್ಕೆ ಮಹಿಳೆಯೊಬ್ಬರು “ದರೋಡೆ ಕಥೆ’ ಕಟ್ಟಿದ ಪ್ರಕರಣ ಭೇದಿಸಿರುವ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ದಂಪತಿಗೆ ಬುದ್ದಿವಾದ ಹೇಳಿದ್ದಾರೆ.

Advertisement

ಒಂಟಿ ಮಹಿಳೆಯ ಮನೆಯಲ್ಲಿ ನಡೆದ ದರೋಡೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ. ಪತಿ ಮನೆಗೆ ಬೇಗ ಬರುತ್ತಿರಲಿಲ್ಲ ಎಂದು ಬೇಸರಗೊಂಡಿದ್ದ ಮಹಿಳೆಯೇ ದರೋಡೆಯ ಕಥೆ ಸೃಷ್ಟಿಸಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಆಕೆಯ ಪತಿಗೆ ಈ ವಿಚಾರ ತಿಳಿಸಿ, ದಂಪತಿಗೆ ಬುದ್ದಿವಾದ ಹೇಳಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪತಿಯ ವರ್ತನೆಯಿಂದ ಬೇಸತ್ತ ಮಹಿಳೆ, ಡಿ.9ರ ರಾತ್ರಿ 10 ಗಂಟೆ ಸುಮಾರಿಗೆ ಮಲಗುವ ಕೋಣೆಯಲ್ಲಿ ಬಚ್ಚಿಟ್ಟುಕೊಂಡಿದ್ದ ದುಷ್ಕರ್ಮಿಯೊಬ್ಬ ಚಾಕು ತೋರಿಸಿ, ಮೈಮೇಲಿದ್ದ ಚಿನ್ನಾಭರಣ ಹಾಗೂ ಬೀರುವನಲ್ಲಿದ್ದ ಒಡವೆಗಳನ್ನು ದೋಚಿ ಪರಾರಿಯಾಗಿದ್ದ ಎಂದು ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದಾಗ, ಅಂತಹ ಘಟನೆ ನಡೆದಿರಲಿಲ್ಲ ಎಂಬುದು ಪತ್ತೆಯಾಯಿತು. ಇದರಿಂದ ಅನುಮಾನಗೊಂಡು ಮಹಿಳೆಯನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬೆಳಕಿಗೆ ಬಂದಿದೆ.

ಮಹಿಳೆಗೆ ಮದುವೆಯಾಗಿ 8 ತಿಂಗಳಷ್ಟೇ ಆಗಿದೆ. ಆದರೆ, ವ್ಯವಹಾರದ ಕಾರಣಕ್ಕೆ ಪತಿ ನಿತ್ಯ ತಡರಾತ್ರಿ ಮನೆಗೆ ಬರುತ್ತಿದ್ದರು. ಮಹಿಳೆ ಕೂಡ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ವಾರಾಂತ್ಯದಲ್ಲಿ ಮಾತ್ರ ಪತಿ ಜತೆ ಮಾತನಾಡಲೂ ಅವಕಾಶ ಇರಲಿಲ್ಲ.  ಹೀಗಾಗಿ ಪತಿ ತನ್ನ  ಕಡೆ ಗಮನ ಹರಿಸಲಿ ಎಂಬ ಉದ್ದೇಶದಿಂದ ದರೋಡೆ ಕಥೆ ಕಟ್ಟಿದ್ದಾಗಿ ಮಹಿಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next