ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಿಂದುಳಿದ ತಾಲೂಕಾಗಿರುವ ಬಾಗೇಪಲ್ಲಿಯ ಬಹಳಷ್ಟು ಗ್ರಾಮಗಳು ಇಂದಿಗೂ ಕುಗ್ರಾಮಗಳಾಗಿಯೇ ಭಾಸವಾಗುತ್ತಿವೆ. ಅಧಿಕಾರ ಶಾಹಿಯ ನಿರ್ಲಕ್ಷ್ಯವೋ ಅಥವಾ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೋ ಏನೋ ದಶಕಗಳು ಹುರುಳಿದರೂ ಕೆಲ ಗ್ರಾಮಗಳು ಡಾಂಬರ್ ಕಂಡಿಲ್ಲ.
ಬಾಗೇಪಲ್ಲಿ ತಾಲೂಕಿನ ಕೊತ್ತಪಲ್ಲಿ ಗ್ರಾಪಂ ವ್ಯಾಪ್ತಿಯ ಮಾಡಪ್ಪಲ್ಲಿ ಗ್ರಾಮದ ನತದೃಷ್ಟವೋ ಏನೋ ಹಲವು ವರ್ಷಗಳಿಂದಲೂ ರಸ್ತೆ ಡಾಂಬರೀಕರಣವಾಗದೆ ಗ್ರಾಮಸ್ಥರು ಮುಳ್ಳಿನಂತೆ ಇರುವ ಜೆಲ್ಲಿ ಕಲ್ಲುಗಳ ಮೇಲೆ ಓಡಾಡುವ ದುಸ್ಥಿತಿ ಎದುರಾಗಿದೆ. ಎಷ್ಟೇ ಕಾಡಿ ಬೇಡಿದರೂ ಜನಪ್ರತಿನಿಧಿಗಳು ಇತ್ತ ಕಡೆಗೆ ತಿರುಗಿ ನೋಡುತ್ತಿಲ್ಲ ಎಂಬ ಆರೋಪ, ಅಸಹಾಯಕತೆನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ.
ಜಲ್ಲಿ-ಕಲ್ಲುಗಳ ಮೇಲೆಯೇ ನಡೆದಾಟ: ಪ್ರತಿನಿತ್ಯ ಶಾಲೆಗೆ ಹೋಗುವ ಮಕ್ಕಳು ಬಹಳಷ್ಟು ಬಡ ಮಕ್ಕಳಿದ್ದು, ಮುಳ್ಳಿನಂತೆ ಸುರಿದಿರುವ ದೊಡ್ಡ ಜಲ್ಲಿಕಲ್ಲುಗಳ ಮೇಲೆಯೇ ನಡೆದಾಡಬೇಕು. ದ್ವಿಚಕ್ರ ವಾಹನ ಸವಾರರು ಪಂಚರ್‌ಗೆಂದೇ ಇಂತಿಷ್ಟು ಪ್ರಮಾಣದ ಹಣದ ವ್ಯವಸ್ಥೆ ಮಾಡಿಕೊಂಡು ಜೇಬಿನಲ್ಲಿಟ್ಟು ಕೊಂಡಿರಬೇಕಾಗಿದೆ.
ಚುನಾವಣೆ ವೇಳೆ ಭೇಟಿ: ನಮ್ಮ ಗ್ರಾಮ ರಾಜಕಾರಣಿಗಳಿಗೆ ನೆನಪಾಗುವುದು ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಎಂದು ಗ್ರಾಮದ ರಸ್ತೆಯ ಅವ್ಯವಸ್ಥೆಯನ್ನು ನೋಡಿ ಗ್ರಾಮದ ನರಸಿಂಹಮ್ಮಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು. ಗೆದ್ದ ಮೇಲೆ ಮಾಡಪ್ಪಲ್ಲಿ ಎಂಬ ಗ್ರಾಮವೂ ಇದೆಯೇ? ಎಂಬ ಪ್ರಶ್ನೆ ಮೂಡತ್ತದೆ. ಇದೊಂದು ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಗ್ರಾಮ. ನಮ್ಮೂರಲ್ಲಿ 500 ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಬಹುತೇಕ ಅನಾನುಕೂಲಗಳಿಂದಲೇ ಬದುಕು ಕಟ್ಟಿಕೊಂಡಿದ್ದಾರೆ ಇಲ್ಲಿಯ ಜನತೆ.
ಕುಡಿಯಲು ಶುದ್ಧವಾದ ನೀರು ಸಿಗುತ್ತಿಲ್ಲ. ಊರಿನ ಸುತ್ತಲೂ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗಳಿಂದಾಗಿ ಉಸಿರಾಡುವ ಗಾಳಿಯೂ ದೂಳುಮಯವಾಗಿದೆ. ಯಾವುದೇ ರೀತಿಯ ಸಾರ್ವಜನಿಕ ಸಾರಿಗೆ ಸೌಲಭ್ಯಗಳಿಲ್ಲದೇ ದ್ವಿಚಕ್ರ ವಾಹನಗಳನ್ನೇ ನೆಚ್ಚಿಕೊಂಡಿದ್ದೇವೆ. ಹದಗೆಟ್ಟ ರಸ್ತೆಯಿಂದಾಗಿ ಸಂಚರಿಸಲು ನರಕಯಾತನೆ ಅನುಭವಿಸುವಂತಾಗಿದೆ ಎಂದು ಉದಯವಾಣಿಗೆ ವಿವರಿಸಿದರು.
ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಬದಲಾವಣೆಯಾಗಲಿಲ್ಲ ಎಂದು ಗ್ರಾಮಸ್ಥರು ಸ್ಥಳೀಯ ಶಾಸಕರ ಹಾದಿಯಾಗಿ ಗ್ರಾಪಂ ತಾಪಂ, ಜಿಪಂ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಿಎಂ ಕಚೇರಿ ಸೂಚಿಸಿದರೂ ರಸ್ತೆ ದುರಸ್ತಿ ಇಲ್ಲ: ರಸ್ತೆ ಸರಿಪಡಿಸುವಂತೆ ಗ್ರಾಮದ ನಿವಾಸಿಯೊಬ್ಬರು ಇ-ಮೇಲ್ ಮೂಲಕ ಪ್ರಧಾನಮಂತ್ರಿ ಕಚೇರಿಗೆ ದೂರು ನೀಡದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಕಚೇರಿ, ಶೀಘ್ರವೇ ರಸ್ತೆ ದುರಸ್ತಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಆದರೂ ದುರಸ್ತಿಪಡಿಸದ ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ನರೇಗಾ ಯೋಜನೆಯಡಿಯಲ್ಲಿ ಈ ರಸ್ತೆಯನ್ನು ದುರಸ್ತಿ ಮಾಡಿರುವ ಬಗ್ಗೆ ಖಾತ್ರಿಯಾಗಿದೆಯಾದರೂ ಮಣ್ಣಿನ ರಸ್ತೆ ಗುಣಮಟ್ಟದಲ್ಲಿ ಮತ್ತಷ್ಟು ದುಸ್ಥಿತಿಗೆ ಜಾರಿದೆ.