ಕುಂದಾಪುರ: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಚಿಕ್ಕನ್‌ಸಾಲ್ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರನ್ನು ದಾಟಿ ಹಿಂದೂ ಶ್ಮಶಾನಕ್ಕೆ ತೆರಳುವ ರಸ್ತೆಯ ಬದಿಗಳಲ್ಲಿನ ಅವ್ಯವಸ್ಥೆಗಳಿಂದಾಗಿ ಈ ದಾರಿಯಲ್ಲಿ ಸಾಗುವವರು ದಟ್ಟಣೆಯ ನಡುವ ರಸ್ತೆಯಲ್ಲೇ ನಡೆದಾಡಬೇಕಾದ ಸ್ಥಿತಿ ಬಂದಿದೆ.
ಆನಗಳ್ಳಿಗೆ ದಾರಿ
ಕುಂದಾಪುರ ನಗರದಿಂದ ಆನಗಳ್ಳಿ ಮೂಲಕ ಬಸ್ರೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದು. ಶಾಸಕರ ಪ್ರಯತ್ನದಿಂದ ಇಲ್ಲಿ ಸೇತುವೆ ಕೂಡ ನಿರ್ಮಾಣ ಆಗಿದ್ದು ಬಸ್ರೂರಿಗೆ ಸಮೀಪದ ರಸ್ತೆಯಾದ ಕಾರಣ ಈ ರಸ್ತೆ ಮೂಲಕ ಓಡಾಡುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಆನಗಳ್ಳಿ ಕುಂದಾಪುರದಿಂದ ಮಾರ್ಗವಾಗಿ ಬಸೂÅರು ಸಂಪರ್ಕಿಸುವ ಈ ರಸ್ತೆಯಲ್ಲಿ ಪ್ರತಿದಿನ ದೊಡ್ಡ ಸಂಖ್ಯೆಯಲ್ಲಿ ವಾಹನಗಳು ಹಾಗೂ ಸಾರ್ವಜನಿಕರು ಮಾತ್ರ ಸಂಚರಿಸುವುದಲ್ಲ. ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಸರಕಾರಿ ಶಾಲೆಗೆ ಬರುವ ಮಕ್ಕಳೂ ಬರುತ್ತಾರೆ. ತಾಲೂಕು ಕೇಂದ್ರದ ಪ್ರಮುಖ ಹಿಂದೂ ಶ್ಮಶಾನ ಕೂಡ ಇದೇ ಹಾದಿಯಲ್ಲಿ ದೊರೆಯುವುದು. ರಸ್ತೆ ಬದಿಗಳು ನಡೆದಾಡಲು ಯೋಗ್ಯವಾಗಿಲ್ಲದೆ ರಸ್ತೆಯಲ್ಲೇ ನಡೆಯಬೇಕಿದೆ ಎನ್ನುತ್ತಾರೆ ಚಿಕ್ಕಮ್ಮ ದೇವಸ್ಥಾನ ಅಧ್ಯಕ್ಷ ನಾಗೇಶ್ ಪುತ್ರನ್.
ನಡೆದಾಡಲು ಕಷ್ಟ
ಇಲ್ಲಿನ ರಸ್ತೆಗಳು ಒಳ್ಳೆಯ ಸ್ಥಿತಿಯಲ್ಲಿ ಇದ್ದರೂ, ರಸ್ತೆಯ ಬದಿಯಲ್ಲಿ ಹುಲ್ಲು, ಕಸ-ಕಡ್ಡಿ ಇರುವುದರಿಂದಾಗಿ, ರಸ್ತೆಯ ಬದಿಯಲ್ಲಿ ನಡೆ ದಾಡಲು ಕಷ್ಟಪಡಬೇಕಾದ ಸ್ಥಿತಿ ಇದೆ. ಮಳೆಗಾಲದ ಭಾಗಗಳಲ್ಲಿ ಅವಧಿಯಲ್ಲಿ ಕಾಲಿಡುವುದು ಅಸಾಧ್ಯವಾಗಿದೆ. ಈ ಕಾರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ನಿಂದ ಇಳಿದು ಕಾಲೇಜಿಗೆ ನಡೆದುಕೊಂಡು ಬರುವ ವಿದ್ಯಾರ್ಥಿಗಳು ರಸ್ತೆಯ ಬದಿಗಳನ್ನು ಬಿಟ್ಟು ಮುಖ್ಯ ರಸ್ತೆಯಲ್ಲಿಯೇ ನಡೆಯಬೇಕಾದ ಸ್ಥಿತಿ ಇದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪ್ರಯಾಸವಾಗಿ ಇರುವ ಜಾಗನ್ನು ಸ್ವಚ್ಛಗೊಳಿಸಿ, ಅದಕ್ಕೆ ಇಂಟರ್‌ಲಾಕ್ ಅಳವಡಿಸುವುದರಿಂದ ಪರಿಸರದ ಸೌಂದರ್ಯ ಹೆಚ್ಚುವುದರ ಜತೆಯಲ್ಲಿ, ರಸ್ತೆಯೂ ವಿಸ್ತಾರವಾಗಲಿದೆ, ರಸ್ತೆಯ ಮೇಲಿನ ಒತ್ತಡಗಳು ಕಡಿಮೆಯಾಗುತ್ತದೆ ಎನ್ನುವ ಅಭಿಪ್ರಾಯ ಸ್ಥಳೀಯರಲ್ಲಿದೆ.
ಮನವಿ
ಸಂಗಂ ಮುಖ್ಯ ರಸ್ತೆಯಿಂದ ಆನಗಳ್ಳಿ ರಸ್ತೆಗೆ ಸಂಪರ್ಕವಾದ ಬಳಿಕ ಪಾದಚಾರಿ ರಸ್ತೆ ಇಲ್ಲದ ಕುರಿತು ಸಂಘಟಿತರಾಗಿರುವ ಸಂಗಮ್ ಫ್ರೆಂಡ್ಸ್ ಸಂಘಟನೆಯ ಯುವಕರು ಸ್ಥಳೀಯ ಪುರಸಭಾ ಸದಸ್ಯರ ಮೂಲಕ ಪುರಸಭೆಗೆ ಮನವಿ ನೀಡಲು ಸಿದ್ಧತೆ ನಡೆಸಿದ್ದಾರೆ. ರಸ್ತೆಯ ಇಕ್ಕೆಲಗಳನ್ನು ಅಭಿವೃದ್ಧಿ ಮಾಡುವುದರಿಂದ ಪರಿಸರದ ಸೌಂದರ್ಯ ಹೆಚ್ಚುವುದರ ಜತೆಯಲ್ಲಿ ರಸ್ತೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎನ್ನುತ್ತಾರೆ ಬಜರಂಗದಳ ಮುಖಂಡ ಗುರುರಾಜ್ ಸಂಗಮ್.
ಅಪಘಾತದ ಭೀತಿ
ರಸ್ತೆಯಲ್ಲಿಯೇ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು, ಸಾರ್ವಜನಿಕರು ನಡೆಯಬೇಕಾದ ಅನಿವಾರ್ಯ ಇರುವ ಕಾರಣ ಇಲ್ಲಿ ನಡೆದು ಹೋಗುವಾಗ ಅಪಘಾತ ಭೀತಿಯೂ ಇದೆ. ರಸ್ತೆಯ ಎರಡು ಬದಿಗಳಲ್ಲಿ ಇಂಟರ್ ಲಾಕ್ ಅಳವಡಿಕೆ ಅಥವಾ ಕಾಂಕ್ರೀಟ್ ಹಾಕುವ ಮೂಲಕವಾದರೂ ಸುವ್ಯವಸ್ಥೆ ಮಾಡಬೇಕಿದೆ.
ಚರ್ಚಿಸಲಾಗಿದೆ: ಚಿಕ್ಕನ್‌ಸಾಲ್ ರಸ್ತೆಯ ಹಿಂದೂ ಶ್ಮಶಾನಕ್ಕೆ ತೆರಳುವ ರಸ್ತೆಯ ಬದಿಗಳಿಗೆ ಇಂಟರ್ ಲಾಕ್ ಅಳವಡಿಸುವ ಕುರಿತು ಪುರಸಭೆಯ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದೇನೆ. –
ಕೆ.ಜೆ.ನಿತ್ಯಾನಂದ, ಪುರಸಭೆ ಸದಸ್ಯ
ಗಮನಿಸಲಾಗುವುದು: ಕುಂದಾಪುರದ ಚಿಕ್ಕನ್‌ಸಾಲ್ ರಸ್ತೆಯಲ್ಲಿ ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ತೊಡಕಾಗಿರುವ ರಸ್ತೆಯ ಬದಿಗಳು ಸರಿಯಾಗಬೇಕು. ಜತೆಯಲ್ಲಿ ಹಿಂದೂ ಶ್ಮಶಾನಕ್ಕೆ ತೆರಳುವ ರಸ್ತೆಯ ಬದಿಗಳಿಗೆ ಇಂಟರ್‌ಲಾಕ್ ಅಳವಡಿಸಬೇಕು ಎನ್ನುವ ಸ್ಥಳೀಯರ ಬೇಡಿಕೆಯ ಕುರಿತು ಗಮನ ಹರಿಸಲಾಗುವುದು. –
ಗೋಪಾಲಕೃಷ್ಣ ಶೆಟ್ಟಿ ಪುರಸಭೆ ಮುಖ್ಯಾಧಿಕಾರಿ