Advertisement

ನದಿಯೇ ಈಗ ಐಸಿಯುನಲ್ಲಿದೆ!

11:26 AM Oct 02, 2017 | |

ನದಿಯ ಎರಡೂ ಪಾರ್ಶ್ವಗಳ ಕಿಲೋ ಮೀಟರ್‌ ಅಗಲಕ್ಕೆ ಮರ ಬೆಳೆಸಬೇಕು. ಅರಣ್ಯ ಸಸ್ಯ, ಹಣ್ಣು ಹಂಪಲು ಬೆಳೆಸಿದರೆ ನದಿಯ ಪುನಶ್ಚೇತನ ಸಾಧ್ಯವೆಂದು ತಿಳಿಸುವ ನದಿ ಸಂರಕ್ಷಣಾ ಆಂದೋಲನದ ಚಿತ್ರ ಗ್ರಾಫಿಕ್‌ ಮೂಲಕ ನಮ್ಮನ್ನು ಬಹಳ ಸೆಳೆಯುತ್ತಿದೆ. ಅಂಕುಡೊಂಕಾಗಿ ಹರಿವ ಹಳ್ಳ, ನದಿಗಳೆಂದರೆ ನೀರು ನೇರಕ್ಕೆ ಹರಿವ ಕಾಲುವೆಯಲ್ಲ. ಅಲ್ಲಿ ಕೊರಕಲು ತಡೆಯುವ ವಾಟೆ ಬಿದಿರು, ನೀರಿನ ಓಟ ತಗ್ಗಿಸುವ ಗಿಡ ಬಳ್ಳಿಗಳು ಬೇಕು. ಕಲ್ಲುಗುಡ್ಡದ ಮುಳ್ಳುಕಂಟಿ, ಜೌಗು ನೆಲೆಯ ಹುಲ್ಲು, ಮರುಭೂಮಿಯ ಕಳ್ಳಿಗಿಡಗಳ ಬಗ್ಗೆ ನಮಗೆಲ್ಲಾ ಗೊತ್ತಿದೆ.  ನದಿ, ಹಳ್ಳದ ದಂಡೆಯ ಮರಗಳನ್ನು  ಈಗ ಪರಿಚಯಿಸಿಕೊಳ್ಳೋಣ.

Advertisement

ಬಳ್ಳಾರಿಜಿಲ್ಲೆಯ  ಹಗರಿ ಹಳ್ಳಿ, ವೇದಾವತಿ ನದಿಯಂಚಿನಲ್ಲಿದೆ. ಇಲ್ಲಿ ನದಿ ಕಿಲೋಮೀಟರ್‌ಗಳಷ್ಟು ಅಗಲವಿದೆ. ನದಿಯಲ್ಲಿ ನೀರಿಲ್ಲ. ಆದರೆ ಎಲ್ಲಿ ನೋಡಿದರಲ್ಲಿ ಮರಳ ದಿಬ್ಬಗಳಿವೆ. ಆಷಾಢದ ಗಾಳಿ ಬೀಸಲು ಆರಂಭವಾದರೆ ಮರಳು ಗಾಳಿಯಲ್ಲಿ ಓಡುತ್ತ ಹಳ್ಳದಿಂದ ನಾಲ್ಕಾರು ಕಿಲೋ ಮೀಟರ್‌ ದೂರದ ಹೊಲದವರೆಗೂ ಸಾಗುತ್ತದೆ. ಮರಳಿನ ಸಮಸ್ಯೆಯಿಂದ ಬೆಳೆ ಬೆಳೆಯಲಾಗುತ್ತಿಲ್ಲ. ಈ ಸಮಸ್ಯೆ ಇಂದಿನದಲ್ಲ. 60-70 ವರ್ಷಗಳ ಹಿಂದೆಯೂ ಮರಳ ಭಯ ಕೃಷಿಗಿತ್ತು. ನಾಗನ ಗೌಡರು ಸಚಿವರಾಗಿದ್ದ ಕಾಲದಲ್ಲಿ ನದಿ ಮರಳಿನ ಓಟಕ್ಕೆ ತಡೆಯೊಡ್ಡಲು ನದಿದಂಡೆಯ ಹಸಿರೀಕರಣ ಯೋಜನೆ ರೂಪಿಸಿದರು.

ಹಳ್ಳದದಂಡೆಯಲ್ಲಿ ಮರಗಳಿದ್ದರೆ ಗಾಳಿಯ ನಿಯಂತ್ರಣವಾಗಿ ಮರಳಿನ ಸಮಸ್ಯೆ ಕಡಿಮೆಯಾಗುತ್ತದೆಂದು ಲೆಕ್ಕಹಾಕಿದರು. ಆನಂತರದಲ್ಲಿಯೇ ಜಾಲಿ ಸಸಿಗಳನ್ನು ನದಿಯಂಚಿನಲ್ಲಿ ಬೆಳೆಸುವ ಕೆಲಸ ಆರಂಭವಾಯ್ತು, ನಾಗನ ಗೌಡರು ನೆಟ್ಟ ಜಾಲಿ ತೋಪು ಇಂದಿಗೂ ಇದೆ. ಬಳ್ಳಾರಿ ಜಾಲಿ, ನಾಗನ ಗೌಡರ ಜಾಲಿ,  ಫೀಕ್‌ ಜಾಲಿ, ಸರಕಾರಿ ಜಾಲಿಯೆಂಬ ಚಿರಪರಿಚಿತ ಮುಳ್ಳುಕಂಟಿಯೇ ಇದು. ದಕ್ಷಿಣ ಹಾಗೂ ಉತ್ತರ ಅಮೇರಿಕಾದ ಈ ಸಸ್ಯ  ಇಂದು ನಮ್ಮ ರಾಜ್ಯದ ಮುಕ್ಕಾಲು ಭಾಗಕ್ಕೂ ಕಳೆ ಗಿಡವಾಗಿ ವ್ಯಾಪಿಸಿದೆ. ಕೆರೆ, ಹಳ್ಳ, ರಸ್ತೆ, ಕಾಲುವೆ, ಹೊಲಗಳನ್ನು ನುಂಗಿದೆ. ಮರಳು ಓಡಿಸಲು ನದಿಯಂಚಿಗೆ ಬಂದ ಸಸ್ಯ ಸಮಸ್ಯೆ  ಮರಳಿಗಿಂತ ದೊಡ್ಡದಾಗಿದೆ.

ಬಳ್ಳಾರಿಯ ಹಗರಿಹಳ್ಳದ ದಂಡೆಯ ನೈಸರ್ಗಿಕ ಸಸ್ಯಗಳು ನಾಶವಾದ ಬಳಿಕ ಭೂಸವಕಳಿ ಹೆಚ್ಚಿದೆ. ಮರಳ ದಿಬ್ಬಗಳು ಬೆಳೆದಿವೆ. ಆಳಕ್ಕೆ ಹರಿಯುವ ಹಳ್ಳಗಳು ಅಗಲವಾಗುತ್ತ ಬೇಸಿಗೆ ಆರಂಭದಲ್ಲಿ ಒಣಗುತ್ತಿವೆ. ಈಗ ಸರಿಯಾಗಿ ಮಳೆಗಾಲದಲ್ಲಿಯೂ ನದಿ ಹರಿಯುತ್ತಿಲ್ಲ. ನದಿ, ಹಳ್ಳದ ದಂಡೆಯಲ್ಲಿ  ಮರಗಳಿದ್ದರೆ ಮಣ್ಣು, ನೀರು ಸಂರಕ್ಷಣೆಯ ಮಹತ್ವದ ಕಾರ್ಯ ನಡೆಯುತ್ತದೆ. ಮರನಾಶದ ಬಳಿಕ ಎಲ್ಲವೂ ಶುರುವಾಗುತ್ತದೆ. ನದಿದಂಡೆಯ ಮರನಾಶ ಮಾಡಿದರೆ ಏನಾಗುತ್ತದೆಂಬ ಅಧ್ಯಯನಕ್ಕೆ ಇಲ್ಲಿ ಪ್ರಾತ್ಯಕ್ಷಿಕೆ ಇದೆ. ಹಳ್ಳದಂಚಿನಲ್ಲಿ ಹುಲ್ಲು, ಗಿಡ ಮರಗಳಿರುತ್ತವೆ. ಇವು ನೆಲಜಲ ಸಂರಕ್ಷಣೆಗೆ ನಿಸರ್ಗ ನೇಮಿಸಿದ ಹಸಿರು ನೌಕರರು!  

ಒಂದು ಸಣ್ಣ ವ್ಯತ್ಯಾಸವಾಗಿ ಸಣ್ಣ ಹುಲ್ಲಿನ ಜಾತಿ  ನಾಶವಾದರೆ ದಂಡೆಯ ಸ್ವರೂಪ ಸಂಪೂರ್ಣ ಬದಲಾಗುತ್ತದೆ. 20 ವರ್ಷ ಹಿಂದಿನ ಘಟನೆ, ಉಡುಪಿ ಜಿಲ್ಲೆಯ ಬೈಂದೂರಿನ ಪಡುವಲೆ ಪ್ರದೇಶದಲ್ಲಿ ರೈತರೊಬ್ಬರು  ದನಕರು ಬರದಂತೆ ಕೃಷಿ ಭೂಮಿಯ ಸುತ್ತ ಮಣ್ಣಿನ ಕಂಟ ಹಾಕುತ್ತಿದ್ದರು. ಮಳೆಯಲ್ಲಿ ಮಣ್ಣು ಸವೆಯದಂತೆ ಹುಲ್ಲಿನ ಜಡ್ಡನ್ನು ಬುಡಸಹಿತ ಗುದ್ದಲಿಯಲ್ಲಿ ಕೆತ್ತಿ ತಂದು ಕಂಟಕ್ಕೆ ಜೋಡಿಸಿದರು. ಕಂಟದಲ್ಲಿ ಹುಲ್ಲು ಬೇರಿಳಿಸಿ ಬೆಳೆಯಿತು. “ಅವಲಕ್ಕಿ ಜಡ್ಡು’ ಎಂಬ ನದಿದಡದ ವಿಶೇಷ ಹುಲ್ಲು ಅದು, ಎಂಥ ಪ್ರವಾಹದಲ್ಲಿಯೂ ಮಣ್ಣನ್ನು ರಕ್ಷಿಸುವ ಅದ್ಭುತ ಶಕ್ತಿ ಅದಕ್ಕಿದೆ.

Advertisement

ಮಳೆಗಾಲಕ್ಕೆ ಮುಂಚೆ ನದಿದಂಡೆಯ ಹುಲ್ಲು ಕೆತ್ತಿ ಕಂಟಕ್ಕೆ ಹಾಕಿದ್ದರಿಂದ ರೈತರ ಮಣ್ಣಿನ ರಚನೆಯೇನೋ ಉಳಿಯಿತು. ಆದರೆ ಹುಲ್ಲು ಕೆತ್ತಿದ  ದಂಡೆಯ ಜಾಗದಲ್ಲಿ ನದಿ ಪ್ರವಾಹದಿಂದ ಭೂ ಕೊರೆತ ಶುರುವಾಯಿತು. ವರ್ಷದಿಂದ ವರ್ಷಕ್ಕೆ ನದಿ ಅಗಲವಾಗುತ್ತ ಕೃಷಿ ಭೂಮಿಯನ್ನು ಕಬಳಿಸಿತು. ಸರಕಾರ ನದಿ ಕೊರೆತ ತಡೆಗಟ್ಟಲು ಕೋಟ್ಯಂತರ ರೂಪಾಯಿ ಖರ್ಚುಮಾಡಿದರೂ ಯಾವ ಪ್ರಯೋಜನವೂ ಆಗಿಲ್ಲ. ನದಿದಂಡೆಯ ಸಣ್ಣ ಹುಲ್ಲು ನಾಶಗೊಳಿಸಿದ ತಪ್ಪಿಗೆ ಕೃಷಿ ಭೂಮಿ ನದಿಯ ಪಾಲಾಯಿತು.  

ನಮಗೆಲ್ಲ ಅಪರಿಚಿತವಾಗಿರುವ ಒಂದು ಹುಲ್ಲಿನ ಕೆಲಸವನ್ನು  ಕೋಟಿ ಖರ್ಚುಮಾಡಿದ ಸರಕಾರದ ಕಲ್ಲು, ಕಾಂಕ್ರೀಟ್‌ನಿಂದ ಮಾಡಲಾಗಲಿಲ್ಲ! ಒಂದು ಹುಲ್ಲಿನ ಬೆಲೆ ಎಷ್ಟು ಅಮೂಲ್ಯವೆಂದು ಇಲ್ಲಿ ಅರ್ಥವಾಗುತ್ತದೆ. ಭೂಸವಕಳಿ ತಡೆಗೆ ಏನು ಮಾಡಬೇಕು? ಯಾರನ್ನು ಕೇಳಿದರೂ ಲಾವಂಚದ ಹುಲ್ಲು ನೆಡಬೇಕೆಂದು ಸಲಹೆ ನೀಡುತ್ತಾರೆ. ಆದರೆ ನಿಸರ್ಗದಲ್ಲಿ ಲಾವಂಚಕ್ಕಿಂತ ಮಹತ್ವ ಪಡೆದ ಎಷ್ಟೋ ಹುಲ್ಲುಗಳಿವೆ. ಅದು ನಮಗೆ ಗೊತ್ತಿಲ್ಲ.

ಮನುಷ್ಯ ತನಗೆ ಗೊತ್ತಿರುವುದನ್ನು  ಮಾತ್ರ ಇತರರಿಗೆ ಸಲಹೆ ಹೇಳಬಹುದು, ಆದರೆ ನಮಗೆ ನದಿಯಂಚಿನ ಹುಲ್ಲಿನ ಅರಿವಿಲ್ಲ. ಬಳ್ಳಾರಿಯ ಹಗರಿ ಹಳ್ಳ ಮರಳ ನೆಲೆಯಾಗಿದ್ದು, ಬೈಂದೂರಿನ ಪಡುವಲೆ ತೀರ ಪ್ರವಾಹದಲ್ಲಿ ಮಾಯವಾಗಿದ್ದಕ್ಕೆ ಸಸ್ಯ, ಹುಲ್ಲು ನಾಶಗೈದ ಕಾರಣವಿದೆ. ಮೂಲದ ಸಸ್ಯವನ್ನು ನಾಶಮಾಡಿ ಪರ್ಯಾಯವಾಗಿ ಕಣ್ಮುಚ್ಚಿ ಇನ್ನೊಂದನ್ನು ತರುವುದು ಎಂಥ ತಪ್ಪಾಗುತ್ತದೆಂದು ಬಳ್ಳಾರಿ ಜಾಲಿ ಪಾಠದಿಂದ ತಿಳಿಯುತ್ತದೆ.

ಕಣಿವೆಯಲ್ಲಿ ಹರಿಯುವ ನದಿ, ಹಳ್ಳ ನಂಬಿಕೊಂಡು ಬೇಸಾಯ ಮಾಡುವ ರೈತರು ನದಿ ಕೊರೆತ ತಡೆಗೆ ಹಲವು ಸಸ್ಯಗಳನ್ನು ಹುಡುಕಿದ್ದಾರೆ. “ನರಿಕಬ್ಬು’ ಎಂಬ ಒಂದು ಹುಲ್ಲಿನ ಜಾತಿಯ ಸಸ್ಯವಿದೆ. ಕಬ್ಬಿನಂತೆ ಬೆಳೆಯುತ್ತದೆ. ಅಕ್ಕಪಕ್ಕದ ಕೃಷಿಗೆ ತೊಂದರೆ ನೀಡದ ಇದನ್ನು ಕಾಲುವೆ, ಹಳ್ಳದಂಚಿನಲ್ಲಿ ಅಬ್ಬರದ ಮಳೆಯ ಮಲೆನಾಡಿನಲ್ಲಿ ನೆಡುತ್ತಾರೆ. ಒಮ್ಮೆ ನಾಟಿ ಮಾಡಿದರೆ ಮುಗಿಯಿತು; ಮುಂದೆ ನಾವು ಕಡಿದು ನಾಶಮಾಡುವವರೆಗೂ ಮಣ್ಣು ಸಂರಕ್ಷಣೆಯ ವೀರಸೈನಿಕನಾಗಿ ಶ್ರಮಿಸುತ್ತದೆ.

ಲಕ್ಕಿ, ಹೊಳೆಲಕ್ಕಿ ಎಂಬ ಇನ್ನೊಂದು ಗಿಡವಿದೆ. ಬೇಲಿಗೆ ನೆರವಾಗುವ ಸಸ್ಯ ಭತ್ತದ ಕೀಟ ನಿಯಂತ್ರಣಕ್ಕೂ ನೆರವಾಗುತ್ತದೆ. ದೊಡ್ಡ ನದಿದಂಡೆಯ ಸಂರಕ್ಷಣೆಗೆ “ಮುಂಡಿಗೆ’ ಸಸ್ಯದ ಕಾರ್ಯ ಮಹತ್ವದ್ದಾಗಿದೆ. ಇದನ್ನು ಕಡಿದು ತಂದು ಕೃಷಿ ಭೂಮಿಯಂಚಿನ ಹಳ್ಳದ ದಂಡೆಯಲ್ಲಿ ನಾಟಿ ಮಾಡಿ ಪ್ರವಾಹದಿಂದ ಭೂಮಿ ಉಳಿಸುವ ವಿದ್ಯೆ ರೈತರಲ್ಲಿದೆ. ಮುಂಡಗೆ ಗರಿಯನ್ನು ಬಳಸಿ ಕರಾವಳಿ ಹಾಲಕ್ಕಿಗರು ಮೃದುವಾದ ಚಾಪೆ ತಯಾರಿಸುತ್ತಾರೆ. ಅಡುಗೆ ಮನೆಯಲ್ಲಿ ಜಿರಲೆ ನಿಯಂತ್ರಣಕ್ಕೆ ಇದರ ಫ‌ಲ ಬಳಸುತ್ತಾರೆ.

ಮಣ್ಣು ಸಂರಕ್ಷಣೆಗೆ ನೆರವಾಗುವ ನದಿ ಸಸ್ಯಗಳ ಬಹುಬಳಕೆ ಹಳ್ಳಿಗರಿಗೆ ತಿಳಿದಿದೆ. ಬಿದಿರು, ವಾಟೆ ಬಿದಿರು, ನಡತೆ ಕೋಲು ಹೀಗೆ ನದಿ ದಂಡೆ ಉಳಿಸುವ ಹಲವು ಕುಲಗಳಿವೆ.  ಕತ್ತರಿಸಿ ನಾಟಿ ಮಾಡಿದರೆ ಬೇರಿಳಿಸಿ ಬದುಕುತ್ತವೆ. ಅತ್ತಿ, ಕಣಗಿಲು, ನೀರತ್ತಿ, ಕುಂಟುನೇರಳೆ, ಬನಾಟೆ, ಸುರಹೊನ್ನೆ, ತೋರಂಗಲು(ತೊರೆ ಹುನಾಲು), ನೀರು ನೇರಳೆ, ಗುಳಮಾವು, ಹೊಳೆ ದಾಸವಾಳ, ಹೊಳೆಮತ್ತಿ( ಅರ್ಜುನ), ಹೊಳೆಗೇರು, ಹೊಳೆ ಹೊನ್ನೆ, ಗಣಪೆ ಬಳ್ಳಿ, ಹೈಗ, ದಡಸಲು, ಬೈನೆ, ಸೀಗೆ ನೂರಾರು ಸಸ್ಯಗಳನ್ನು ನಿಸರ್ಗ ನೀರಂಚಿನಲ್ಲಿ ಬೆಳೆಸಿದೆ.

ಕುದುರೆ ಬಾಲ( ಫ‌ರ್ನ್ಗಳು)ದ ಸಸ್ಯ ನೋಡುತ್ತ ಹೊರಟರೆ ಕಣಿವೆಯ ನದಿಗಳು ಹೊಸಲೋಕಕ್ಕೆ ಕರೆದೊಯ್ಯುತ್ತವೆ. ನಮ್ಮ ಹಳ್ಳದ ದಂಡೆಯ ಒಂದು ಮರಕ್ಕೆ “ಔಲ್‌ವುರ’ ಎಂಬ ಹೆಸರಿದೆ. ಇದು ಸಾಮಾನ್ಯವಾಗಿ ನದಿಗೆ ಬಾಗಿರುತ್ತದೆ. ಇದರ ಹಣ್ಣು ಮಾಗಿದಾಗ ನೀರಿಗೆ ಪಟ್ಟನೆ ಬೀಳುತ್ತದೆ. ಹಣ್ಣು ತಿನ್ನಲು ಇಚ್ಚಿಸುವ ಮೀನಿನ ಜಾತಿಯೊಂದು ಸದಾ ಮರದಡಿಯ ನೀರಿನ ಬೇರಿನ ಜಾಲದಲ್ಲಿರುತ್ತದೆ. ಹಳ್ಳಿಗರು ಈ ಮರದಲ್ಲಿ ಕುಳಿತು ಮೀನಿಗೆ ಗಾಳ ಹಾಕುವರು. ವಿಶೇಷವೆಂದರೆ ಈ ಮೀನಿಗೆ ‘ಔಲ್‌ಮೀನು’ ಎಂಬ ಹೆಸರಿದೆ! ಮರ ಹಾಗೂ ಮೀನು ಒಂದೇ ಹೆಸರಿನಿಂದ ಕರೆಯಲ್ಪಡುತ್ತದೆ.

ಆಮೆಗಳು ಬೇಸಿಗೆಯಲ್ಲಿ ಕಾಡಿನ ಕಣಗಿಲ ಹಣ್ಣನ್ನು ಬಹಳ ಇಷ್ಟಪಡುತ್ತವೆ. ರಾತ್ರಿ ನದಿಯಿಂದ ಮೇಲೆದ್ದು ಮರ ಹುಡುಕಿ ಹೊರಡುತ್ತವೆ. ಕಣಗಿಲ ಹಣ್ಣು ಜಿಂಕೆ, ಮಂಗ, ದನಕರುಗಳಿಗೆಲ್ಲ ಬೇಕು. ಊರಿಗೆ ಬಂದವರು ನೀರಿಗೆ ಬರುತ್ತಾರೆಂಬ ಗಾದೆಯಂತೆ ನದಿದಂಡೆ ಕಣಿವೆಗಳಲ್ಲಿ ಕಣಗಿಲ ಮರಗಳು ಜಾಸ್ತಿ ಇವೆ. ಇದು ಆಮೆಗೆ ಅನುಕೂಲವಾಗಿದೆ.   ನದಿ ನೀರು ಹಾಗೂ ಸಸ್ಯವನ್ನು  ಅರ್ಥಮಾಡಿಕೊಳ್ಳಲು ಇಂಥ ಹಲವು ಆಯಾಮಗಳು ಜನಪದರಲ್ಲಿವೆ.  

ಸ್ವಾತಂತ್ರ್ಯಾ ನಂತರದಲ್ಲಿ ನೈಸರ್ಗಿಕ ಸಂಪನ್ಮೂಲ ಬಳಸಿ ಕೈಗಾರಿಕೆಗಳನ್ನು ಬೆಳೆಸುವ ಕೆಲಸ ಜೋರಾಯಿತು. ಅರಣ್ಯಾಧರಿತ ಕೈಗಾರಿಕೆಗಳು ಮಲೆನಾಡಿನ ನದಿ ಕಣಿವೆಯ ಮರಗಳನ್ನೇ ನಂಬಿ ಜನಿಸಿದವು. ಟನ್ನಿಗೆ ಒಂದು ರೂಪಾಯಿಗೆ ಪ್ಲೆ„ವುಡ್‌ ಕಂಪನಿಗೆ ಮರಗಳು ಮಾರಾಟವಾದವು. ಆಗ ನದಿದಂಡೆಯ ಎಲ್ಲರ ಅಕ್ಕರೆಯ ಅಪ್ಪೆಮಾವಿನ ಮರಗಳೂ ದೊಡ್ಡ ಪ್ರಮಾಣದಲ್ಲಿ ನಾಶವಾದವು. ಮಲೆನಾಡಿನಲ್ಲಿ ಉಪ್ಪಿನಕಾಯಿಗೆ ಪರಿಮಳದ ಅಪ್ಪೆಮಿಡಿ ಬೇಕು.

ಅಪ್ಪೆಮಿಡಿಯ ಆಸೆ ನಮಗೆ ನದಿ ಕಣಿವೆಯ ದರ್ಶನ ಮಾಡಿಸಿದೆ. ಕೆಲವು ವರ್ಷಗಳ ಹಿಂದೆ ನಮ್ಮ ಹೊಳೆಸಾಲುಗಳಲ್ಲಿ ಕಿಲೋ ಮೀಟರ್‌ ದೂರ ನಡೆದರೆ 40-50 ಬೃಹತ್‌ ಗಾತ್ರದ ಅಪ್ಪೆಮರಗಳು ಫ‌ಲತುಂಬಿ ನಿಂತಿರುತ್ತಿದ್ದವು. ಸಂತೆಗೆ ಹೋಗಿ ತರಕಾರಿ ಹುಡುಕುವಂತೆ ಮರದ ಎಳೆಗಾಯಿ ಕೊಯ್ದು ವರ್ಷದ ಉಪ್ಪಿನಕಾಯಿಗೆ ಯೋಗ್ಯ ಮಿಡಿ ಆಯ್ಕೆ ನಡೆಯುತ್ತಿತ್ತು. ಎಷ್ಟು ಕೊಯ್ದರೂ ಮುಗಿಯದ ಸಂಪತ್ತು! ಕಾಯಿ ಹಣ್ಣಾಗಿ ಹೊಳೆಗೆ ಬೀಳುತ್ತಿದ್ದವು. ಹೊಳೆಯ ನೀರೆಲ್ಲ ಹುಳಿಯಾಗುವಷ್ಟು ರಾಶಿ ರಾಶಿ ಹಣ್ಣುಗಳು ಕೊಳೆತು ಮಳೆಪ್ರವಾಹದಲ್ಲಿ ಸಾಗುತ್ತಿದ್ದವು.

ಅಕ್ಕಪಕ್ಕದ ಮರಳ ದಿಬ್ಬಗಳಲ್ಲಿ ಒರಟೆಗಳು ಮರಳಿ ಸಸಿಯಾಗಿ ನೈಸರ್ಗಿಕವಾಗಿ ಬೆಳೆಯುತ್ತಿದ್ದವು. ಮಲೆನಾಡಿನ ಯಾವುದೇ ಕಣಿವೆಗೆ ಇಳಿದರೆ ಅಲ್ಲೊಂದು ಹೊಳೆ ಹಳ್ಳ, ಇಕ್ಕಲೆಗಳಲ್ಲಿ ಸಾವಿರಾರು ಕಾಡು ಮಾವಿನ ಮರಗಳು ಕಾಣುತ್ತಿದ್ದವು. ಇಂದು ನದಿ ಮರಗಳ ನಾಶ ನಡೆದಿದೆ. ನದಿ ದಂಡೆಯ ಸಸ್ಯಗಳ ಹೆಸರು ಹಲವರಿಗೆ ಅಪರಿಚಿತ, ಸಸ್ಯಶಾಸ್ತ್ರೀಯ ಹೆಸರು ಹೇಳಿದರೆ ಪುಸ್ತಕ ಓದಿ ಅರಿಯಬಹುದೆಂದು ಹೇಳಬಹುದು. ಅರಣ್ಯಶಾಸ್ತ್ರ ಅರಿಯದ ತಲೆಮಾರು ಶತಮಾನಗಳಿಂದ ಹೊಳೆಯ ಬದುಕನ್ನು ಓದಿ ಸಸ್ಯಗಳಿಗೆ ಚೆಂದದ ಹೆಸರಿಟ್ಟು  ಬಳಕೆಯ ವಿಶೇಷಗಳನ್ನು ಪರಿಚಯಿಸಿದೆ.

ನೀರು ಹರಿಯುವ ನೆಲೆಯಲ್ಲಿ ಯಾರೆಲ್ಲ ಇರುತ್ತಾರೆಂಬ ಜವಾರಿ ಜಾnನ ಶ್ರೀಮಂತವಾಗಿದೆ.  ಕ್ಷಮಿಸಿ,  ಮಾತು ಕಹಿ ಎನಿಸಬಹುದು. ಇಂದು ನೆಟ್‌( ಸಾಮಾಜಿಕ ಜಾಲ ತಾಣ) ಮೂಲಕ ನದಿ ಉಳಿಸುವ ದೊಡ್ಡ ಮಾತುಕತೆ. ಚರ್ಚೆ ನಡೆಯುತ್ತಿದೆ. ಆಂದೋಲನಗಳು ಉದುಸುತ್ತಿವೆ. ಆದರೆ ಈ ತಲೆಮಾರಿನ ಎಷ್ಟು ಜನ ನದಿ ದಂಡೆಯ ಕಾಡನ್ನು ಓಡಾಡಿ ಕಲಿತವರು? ವಾಟೆ ಬಿದಿರಿನ ಹಿಂಡಿನ ನೀರುಹಕ್ಕಿಗಳ ಸ್ವರವನ್ನು ಹೆಚ್ಚಿನವರು ಆಲಿಸಿಲ್ಲ, ಕಾಜಾಣದ ನೃತ್ಯ,  ಮಿಂಚುಳ್ಳಿ, ಹಾವು-ಕಪ್ಪೆಯ ಬೇಟೆ ಕಂಡಿಲ್ಲ.

ಹೊಳೆ-ಹಳ್ಳಗಳನ್ನು ನೆಲಮೂಲದಲ್ಲಿ ಮಾತಾಡಿಸದೇ ಯಾವತ್ತೂ ನದಿ ಉಳಿಸುವುದು ಸಾಧ್ಯವಿಲ್ಲ. ಸಂರಕ್ಷಣೆಯ ಸೂಕ್ಷ್ಮ ಕೆಲಸಗಳು ನದಿ ತೀರದ  ಹಸಿರಿನ ‘ಅವಲಕ್ಕಿ ಜಡ್ಡು’ ಕಿತ್ತು ಹಣದ ಕಾಂಕ್ರೀಟ್‌ ಕಟ್ಟುವ ನಿರ್ಮಾಣ ಕಾಮಗಾರಿಯಲ್ಲ.  ದಂಡೆಯ ಹಸಿರು ಹೆಣವಾಗಿದ ಬಳಿಕ ಹಳ್ಳ, ನದಿಗಳು ಅಸುನೀಗಿವೆ. ನಮಗೇನೋ ನದಿಗಳ ಪುನರುಜ್ಜೀವನದ ಅವಸರವಿದೆ. ಆದರೆ ತೀವ್ರ ನಿಗಾ ಘಟಕದಲ್ಲಿರುವ ನದಿ ದೇಹ ಸ್ಥಿತಿ ಗಂಭೀರವಾಗಿದೆ. ನದಿಗಳ ನೋವು ಅರಿತ ನಾವು ಮೂಲನೆಲೆಯ ಸಸ್ಯಾಭಿವೃದ್ಧಿಯ ಬಗ್ಗೆ ಯೋಚಿಸಬೇಕು; ಯೋಜಿಸಬೇಕು. 

* ಶಿವಾನಂದ ಕಳವೆ

Advertisement

Udayavani is now on Telegram. Click here to join our channel and stay updated with the latest news.

Next