Advertisement

ಕುಕ್ಕಾವು: ಮತ್ತೆ ನೆರೆ ಮುನ್ಸೂಚನೆ ನೀಡಿದ ನದಿ ಪಾತ್ರ  

01:08 AM Jun 03, 2020 | Sriram |

ಮುಂಡಾಜೆ: ದಿಡುಪೆ ಕಡೆಯಿಂದ ಹರಿಯುವ ನೇತ್ರಾವತಿ ನದಿಯು ಮೊದಲ ಮಳೆಗೇ ಉಕ್ಕಿ ಹರಿದು ದಿಡುಪೆ, ಕೊಲ್ಲಿ, ಮಿತ್ತಬಾಗಿಲು, ಕುಕ್ಕಾವು, ಕಡಿರುದ್ಯಾವರ, ಮುಂಡಾಜೆ, ಕಲ್ಮಂಜ ಮೊದಲಾದ ಗ್ರಾಮಗಳ ಜನರನ್ನು ಭೀತಿಗೆ ತಳ್ಳಿದೆ.

Advertisement

ಕೇವಲ ಎರಡು ಗಂಟೆಯ ಮಳೆ
ರವಿವಾರ ಮಧ್ಯಾಹ್ನದ ಬಳಿಕ ದಿಡುಪೆ ಕುಕ್ಕಾವು ಮೊದಲಾದ ಭಾಗಗಳಲ್ಲಿ ಎರಡು ಗಂಟೆ ಕಾಲ ಭಾರೀ ಮಳೆ ಸುರಿದಿದ್ದು, ನೇತ್ರಾವತಿ ನದಿಗೆ ಭಾರೀ ನೀರು ಬಂದಿದೆ. ಈ ನದಿಯ ಜತೆ ಸೇರುವ ಮಿತ್ತಬಾಗಿಲು ಗ್ರಾಮದ ಕುಕ್ಕಾವು ಹಳ್ಳವೂ ತುಂಬಿ ತುಳುಕಿದೆ. ಒಂದು ಮಳೆಯಲ್ಲೇ ಪರಿಸ್ಥಿತಿ ಈ ರೀತಿಯಾದರೆ ಮಳೆಗಾಲದಲ್ಲಿ ಹೇಗಿದ್ದೀತು ಎಂಬ ಆತಂಕ ಸ್ಥಳೀಯರದ್ದಾಗಿದೆ.

ನದಿಯ ಆಸುಪಾಸಿನ ಕೆಲವು ಕೃಷಿಕರ ತೋಟದ ಪಂಪು, ಪೈಪ್‌ ಹಾಗೂ ಇನ್ನಿತರ ಕೃಷಿ ಸಾಮಗ್ರಿಗಳು ಮೊದಲ ಮಳೆಗೇ ನದಿ ನೀರಲ್ಲಿ ಕೊಚ್ಚಿ ಹೋಗಿವೆ.

ಸೋಲಾರ್‌ ಅಡಿಕೆ ಗೂಡುಗಳು ನೆಲ ಕಚ್ಚಿವೆ. ಕಡಿರುದ್ಯಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಕ್ಕಾವು ಇಂದಬೆಟ್ಟು ಸಂಪರ್ಕದ ಕೊಪ್ಪದಗಂಡಿ ಸೇತುವೆ ಮೇಲೆ ಸಾಕಷ್ಟು ದೊಡ್ಡ ಗಾತ್ರದ ಕಸದ ರಾಶಿ ಬಿದ್ದಿದ್ದು, ಸಂಚಾರಕ್ಕೆ ತೊಡಕುಂಟಾಗಿತ್ತು.

ಕಾರಣವೇನು?
ಸ್ಥಳೀಯರ ಪ್ರಕಾರ ನದಿಯ ಉಗಮ ಸ್ಥಾನಗಳಲ್ಲಿ ಭಾರೀ ಮಳೆಯಾಗಿದೆ. ಕಳೆದ ಪ್ರವಾಹ ಹಾಗೂ ಮಳೆಯ ಸಂದರ್ಭ ಗುಡ್ಡ, ಮರಮಟ್ಟು ಕುಸಿದು ನೀರು ಸರಾಗವಾಗಿ ಹರಿದು ಬರುತ್ತಿದೆ.

Advertisement

ನದಿ ಹರಿಯುವ ಪ್ರದೇಶದಲ್ಲಿ ಹೂಳು ತುಂಬಿದ್ದರಿಂದ ನದಿ ಮತ್ತು ಭೂಪ್ರದೇಶ ಸಮಾನಾಗಿದೆ. ಮೇಲ್ಭಾಗದಲ್ಲಿ ಹರಿಯುವ ನೀರು ದಿಕ್ಕು ಬದಲಾಯಿಸುತ್ತಿದೆ.

ಸ್ಥಳೀಯರು ಹಾಗೂ ಮರಳು ಸಾಗಾಟದವರು ಕಟ್ಟಿರುವ ನೀರಿನ ಕಟ್ಟಗಳು ಬಿಚ್ಚಿರುವುದು ಹಾಗೂ ಇನ್ನಿತರ ಕೆಲವು ಪ್ರಾಕೃತಿಕ ಕಾರಣಗಳಿಂದ ಈ ರೀತಿ ನೀರು ಒಮ್ಮೆಲೇ ಹರಿದು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಕ್ಷಣಾ ತಂಡ ಸನ್ನದ್ಧವಾಗಿದೆ
ಪ್ರವಾಹ, ಭೂ ಕುಸಿತ ಉಂಟಾಗುವ ಪ್ರದೇಶಗಳಲ್ಲಿ ಈಗಾಗಲೇ ಹೆಚ್ಚಿನ ಜಾಗೃತಿ ವಹಿಸಲಾಗಿದೆ. ವಿಪತ್ತಿನ ಸಂದರ್ಭ ಸ್ಥಳೀಯ ಪಂಚಾಯತ್‌ ಗಳ ಸಹಯೋಗದೊಂದಿಗೆ ರಕ್ಷಣಾ ತಂಡ ಸನ್ನದ್ಧವಾಗಿರುತ್ತದೆ.
 - ಕೆ.ಇ.ಜಯರಾಮ್‌, ಪ್ರಾಕೃತಿಕ ವಿಕೋಪಗಳ ನೋಡಲ್‌ ಅಧಿಕಾರಿ, ಬೆಳ್ತಂಗಡಿ.

ಆತಂಕ ಮೂಡಿಸಿದೆ
ನಾನು ಕಳೆದ 50ಕ್ಕಿಂತ ಹೆಚ್ಚಿನ ವರ್ಷಗಳಿಂದ ಈ ಪ್ರದೇಶದಲ್ಲಿ ನೆಲೆಸಿದ್ದು, ಮಳೆಗಾಲ ಆರಂಭದ ಮೊದಲು ಈ ರೀತಿ ನದಿಗೆ ನೀರು ಬಂದಿಲ್ಲ. ಈ ಬಾರಿ ಒಂದು ಮಳೆಗೇ ಪ್ರವಾಹದ ರೀತಿ ನೀರು ಹರಿದಿರುವುದು ಆತಂಕ ಮೂಡಿಸಿದೆ.
 - ಬಾಬು ಗೌಡ,ಕೃಷಿಕ

Advertisement

Udayavani is now on Telegram. Click here to join our channel and stay updated with the latest news.

Next