ಭಾರತದಲ್ಲಿದ್ದಂತೇ ದಕ್ಷಿಣ ಆಫ್ರಿಕಾದಲ್ಲಿಯೂ ಮುಖ್ಯವಾಗಿ ಡರ್ಬನ್‌ನಲ್ಲಿ ಗಾಂಧಿ ಹೆಸರಿನ ರಸ್ತೆ, ಆಸ್ಪತ್ರೆ, ಸಂಘ ಸಂಸ್ಥೆಗಳು, ಉದ್ಯಾನ ವನಗಳು, ಸ್ಮಾರಕಗಳು, ಮ್ಯೂಸಿಯಂಗಳಿವೆ.
ಇದೆಲ್ಲದರ ಹಿಂದೆ ಜಗತ್ತಿನ ಅರ್ಧಕ್ಕೂ ಹೆಚ್ಚು ಮನಸ್ಸು ಒಪ್ಪುವ ಅಹಿಂಸಾವಾದವಿದೆ. ಗಾಂಧಿ ಮತ್ತು ಅಹಿಂಸೆ ಈ ಎರಡು ಶಬ್ದಗಳು ಒಂದನ್ನೊಂದು ನೂರಕ್ಕೆ ನೂರರಷ್ಟು ಅವಲಂಬಿಸಿಯಾಗಿದೆ.
ದ. ಆಫ್ರಿಕಾ ದೇಶಕ್ಕೊಂದು ವಿಶಿಷ್ಟವೂ ಮತ್ತು ವಿಚಿತ್ರವೂ ಆದ ಹಿನ್ನೆಲೆಯಿದೆ. 16ನೇ ಶತಮಾನದ ಹಿಂದು ಮುಂದೆ ಶುರುವಾದ ಬಿಳಿಯರ ಅತಿಕ್ರಮಣದ ಆಟದಲ್ಲಿ ದ. ಆಫ್ರಿಕಾವು ಅತಿಕ್ರಮಣಕ್ಕೆ ಒಳಗಾಗಿದ್ದು, ಎದ್ದು ಝಾಡಿಸಿ ಮತ್ತೆ ನಿಲ್ಲಹೊರಟಿದ್ದು ಮತ್ತು ಕೊನೆಗೂ ತನ್ನ ಕಾಲಮೇಲೆ ಗಟ್ಟಿಯಾಗಿ ನಿಂತಿತ್ತು. ಇದೆಲ್ಲ ಪ್ರಾಯಶಃ ಬಿಳಿಯರು 1860ರಲ್ಲಿ ಭಾರತೀಯ ಕೂಲಿಗಳನ್ನು ಈ ದೇಶದ ಕಬ್ಬಿನ ಗ¨ªೆಯಲ್ಲಿ ದುಡಿಯಲು ಕರೆತರ ದಿದ್ದರೆ ಸುಲಭಕ್ಕೆ ಸಾಧ್ಯವಿರುತ್ತಿರಲಿಲ್ಲ ವೇನೋ.
ಗಾಂಧಿಯೊಳಗಿನ ಸತ್ಯಾನ್ವೇಷಿಯು ತನ್ನ ಅಲೋಚನೆಗಳಿಗೆ ಮತ್ತು ತನ್ನೊಳಗಿದ್ದ ಸಂಘಟನಾ ಶಕ್ತಿಗೆ ಪೂರಕವಾಗಿ ಆಯ್ದುಕೊಂಡ ಅನೇಕ ಹೆಜ್ಜೆಗಳಲ್ಲಿ ಫುಟ್ಬಾಲ್ ಕೂಡ ಒಂದು. 1896ರಲ್ಲಿ ಸತ್ಯಾಗ್ರಹದ ಚಳವಳಿ ಆಫ್ರಿಕನ್ ಇಂಡಿಯನ್ ಕಾಂಗ್ರೆಸ್ ಮೂಲಕ ನಡೆಯುವಾಗ ಗಾಂಧೀಜಿ ಜೋಹಾನ್ಸ್ ಬರ್ಗ್‌ನ ಟ್ರಾನ್ಸಾಮಲ ಇಂಡಿ ಯನ್ ಫುಟ್ಬಾಲ್ ಅಸೋಸಿಯೇಷನ್ ಸಂಘಟನೆ , ಅಭಿವೃದ್ಧಿಗೆ ಬಹಳ ಕೆಲಸ ಮಾಡಿದ್ದರು.
ಭಾರತೀಯ ಸಮುದಾಯದ ಜನರ ಒಳ್ಳೆಯ ಫುಟ್‌ಬಾಲ್ ತಂಡವೊಂದು ರಾಷ್ಟ್ರೀಯ ಮಟ್ಟದಲ್ಲಿ ಆಡಲು ಶುರುವಿಟ್ಟರೆ ಆಟವನ್ನು ನೋಡಲು ಬರುವ ದೊಡ್ಡ ಸಂಖ್ಯೆಯ ಬಿಳಿಯರಲ್ಲದ ಜನಸಮುದಾಯದತ್ತ ಗಾಂಧೀಜಿಯ ದೃಷ್ಟಿ ಇರುತ್ತಿತ್ತು. ಇಂಥ ಸಂದರ್ಭಗಳನ್ನು ಗಾಂಧೀಜಿ ತಮ್ಮ ಸತ್ಯಾಗ್ರಹ ಮತ್ತು ಸಾಮಾಜಿಕ ಚಳವಳಿಯ ಕುರಿತು ಕರಪತ್ರಗಳನ್ನು ಹಂಚುವ ವ್ಯವಸ್ಥೆ ಮಾಡುತ್ತಿದ್ದರಂತೆ.
ಹಾಗೆ ಬಹಳಷ್ಟು ಭಾರತೀಯರು ಮತ್ತು ಆಫ್ರಿಕನ್ನರು ಸತ್ಯಾಗ್ರಹದ ಚಳವಳಿಯತ್ತ ಆಕರ್ಷಿತರಾಗುತ್ತಿದ್ದರು. ಹೀಗೆ ಮುಖ್ಯವಾಗಿ ತಮ್ಮ ಸಂಘಟನ ಶಕ್ತಿಯ ಮೂಲಕ ಸತ್ಯಾಗ್ರಹದ ಚಳವಳಿಯತ್ತ ಗಾಂಧೀಜಿ ಕೇವಲ ಭಾರತೀಯರನ್ನಷ್ಟೆ ಅಲ್ಲದೆ ಆಫ್ರಿಕನ್ನರನ್ನೂ, ಕಾಲಾಂತರದಲ್ಲಿ ಸಮದರ್ಶೀ ಮನಃಸ್ಥಿತಿಯ ಬಿಳಿಯರನ್ನೂ ಆಕರ್ಷಿಸುವಲ್ಲಿ ಸಫಲರಾದರು.
ಹೀಗೆ ದ. ಆಫ್ರಿಕಾದಲ್ಲಿ ಶುರುವಾದ ಗಾಂಧಿಯ ನೂರಾರು ಕನಸುಗಳಲ್ಲಿ ಫುಟ್ಬಾಲ್ ಮೂಲಕ ನಮ್ಮ ಜನರನ್ನು ಒಗ್ಗೂಡಿಸುವ ಮತ್ತು ವರ್ಣಭೇದ ನೀತಿಯನ್ನು ಮೀರಿ ನಮ್ಮ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕನಸೂ ಚಿಗುರೊಡೆದು ಬಲಿಷ್ಠವಾಗತೊಡಗಿತು. ಇದೆಲ್ಲದರ ಫಲವಾಗಿ ದಕ್ಷಿಣ ಆಫ್ರಿಕಾದ ಕ್ರೀಡಾ ಜಗತ್ತಿನಲ್ಲಿ ಇಂದು ನಾವು ಎಲ್ಲ ಬಣ್ಣದವರನ್ನೂ ನೋಡುತ್ತೇವೆ. ಈ ಸಾಧನೆಯ ಹಿಂದಿನ ಶ್ರಮದ ಮುಕ್ಕಾಲು ಪಾಲು ಗಾಂಧೀಜಿಯವರಿಗೆ ಸಲ್ಲುತ್ತದೆ.