Advertisement

ಆಧುನಿಕ ಶಿಕ್ಷಣ ಮಾತನಾಡುವ ಹಕ್ಕು ಕಸಿದಿದೆ

04:03 PM Sep 07, 2017 | Team Udayavani |

ಚಿತ್ರದುರ್ಗ: ಮಾನವೀಯ ಮೌಲ್ಯ, ಸಂಸ್ಕಾರ ಕಲಿಸದ ಶಿಕ್ಷಣ, ಶಿಕ್ಷಣವೇ ಅಲ್ಲ. ಆಧುನಿಕ ಶಿಕ್ಷಣ ಮಕ್ಕಳು ಮಾತನಾಡುವ ಹಕ್ಕನ್ನು ಕಿತ್ತುಕೊಂಡಿದೆ ಎಂದು ಸಾಹಿತಿ ಡಾ| ಕುಂ. ವೀರಭದ್ರಪ್ಪ ಹೇಳಿದರು. 

Advertisement

ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ 2017-18ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್‌, ಎನ್‌ಸಿಸಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಾಗೂ ಯುವ ರೆಡ್‌ ಕ್ರಾಸ್‌ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು. ಇಂದಿನ ಶಿಕ್ಷಣ ಮಾತುಕತೆ ಇಲ್ಲದ ಯಂತ್ರ ಮಾನವರನ್ನು  ಸೃಷ್ಠಿ ಮಾಡುತ್ತಿದೆ. ಮಾತನಾಡುವ ಅವಕಾಶ ಇಲ್ಲ ಎಂದ ಮೇಲೆ ಶಿಕ್ಷಣವೇ ಅಲ್ಲ. ಅಪಾಯಕಾರಿ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿದೆ. ಪಠ್ಯದಲ್ಲಿನ ಶಿಕ್ಷಣ ಕಲಿಸುವುದು ಶಿಕ್ಷಕರ ಗುರಿಯಾಗಬಾರದು. ಶಿಕ್ಷಣ ಸಂಸ್ಥೆಗಳು ಪಠ್ಯೇತರ ವಿಷಯಗಳನ್ನು ಮಕ್ಕಳಿಗೆ ಕಲಿಸುವ ಕೇಂದ್ರಗಳಾಗಬೇಕು. ಮಾನವೀಯ ಸಂಬಂಧಗಳಿಗೆ ಬೆಲೆ ಇಲ್ಲ. ಯಂತ್ರ ಮಾನವರ ಪ್ರಪಂಚ ತ್ಯಾಜ್ಯ ವಸ್ತುಗಳಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂಗ್ಲಿಷ್‌ ಅನಿರ್ವಾಯ ಎನ್ನುತ್ತ ಕೃತಕ ಸಮಾಜ ನಿರ್ಮಾಣ ಮಾಡಲಾಗುತ್ತಿದೆ. ಇಂಗ್ಲಿಷ್‌ ಕಲಿಕೆ ಮಾನವ ಸಂಬಂಧಗಳನ್ನು ಗುರುತಿಸುವುದಿಲ್ಲ. ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ತಳ್ಳುತ್ತದೆ. ಇಂಗ್ಲಿಷ್‌ ಭಾಷೆ ನಗುವುದು, ಅಳುವುದನ್ನು ಕಲಿಸುವುದೇ ಇಲ್ಲ. ಇಂಗ್ಲಿಷ್‌ ಕಲಿತವರು ಸುದೀರ್ಘ‌ ಸಂಸಾರ ಮಾಡುತ್ತಿಲ್ಲ. ಮಾನವ ಸಂದಂಭಗಳನ್ನು ಇಂಗ್ಲಿಷ್‌ ಗಟ್ಟಿಗೊಳಿಸುವುದಿಲ್ಲ. ತಂದೆ, ತಾಯಿ ಪ್ರೀತಿಸಿ, ಗೌರವಿಸುವುದನ್ನು ಕಲಿಸದ ವಿದ್ಯೆ ವಿದ್ಯೆಯೇ ಅಲ್ಲ. ಮೊಬೈಲ್‌ ಪ್ರಪಂಚ ಚೆನ್ನಾಗಿದೆ. ಮೊಬೈಲ್‌ ನಮ್ಮ ಭಾಷೆ ಬೆಳವಣಿಗೆಗೆ ಕಂಟಕವಾಗಿದೆ. ಭಾಷೆಯನ್ನು ಕೊಲೆ ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆ, ಕಾಲೇಜಿನಲ್ಲಿ ಓದುವ ಮಕ್ಕಳಿಗೆ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬಿತ್ತಲಾಗುತ್ತಿದೆ. ಈ ಶಾಲೆಯ ಮಕ್ಕಳು ತಮ್ಮ ತಂದೆ, ತಾಯಿಗಳನ್ನು ಎಂದೂ ವೃದ್ಧಾಶ್ರಮಕ್ಕೆ ಕಳುಹಿಸುವುದಿಲ್ಲ ಎಂದು ಹೇಳಿದರು. ಪ್ರತಿನಿತ್ಯದ ಜೀವನದಲ್ಲಿ ಜನ ಸಾಮಾನ್ಯರಿಗೆ ಜೋತಿಷ್ಯ-ವಾಸ್ತು ಎನ್ನುವುದು ಭಯೋತ್ಪಾದನೆ ಉಂಟು ಮಾಡುವ ದೊಡ್ಡ ಆಪತ್ತು ತಂದಾಕುವ ಕೇಂದ್ರವಾಗಿದೆ. ಜೋತಿಷ್ಯ-ವಾಸ್ತುಗಳನ್ನು ಹೆಣ್ಣು ಮಕ್ಕಳು ಹೆಚ್ಚು ನಂಬಿ ಅವನತಿಯತ್ತ ಸಾಗುತ್ತಿದ್ದಾರೆಂದು ಆತಂಕ ವ್ಯಕ್ತ ಪಡಿಸಿದರು.

ಹಾಲಿನ ಸ್ನಾನ, ಮಡೆ ಸ್ನಾನ, ಎಂಜಲು ಎಲೆ ಮೇಲೆ ಹೊರಳಾಡಿದರೆ ಚರ್ಮ ರೋಗ ನಿವಾರಣೆಯಾಗಲಿದೆ ಎನ್ನುವುದು ಮೂಢನಂಬಿಕೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳಸಬೇಕು. ಇಲ್ಲವಾದರೆ ದೆವ್ವ, ದೇವ ಮಾನವರ ಸೃಷ್ಠಿಯಾಗಿ ದೇಶ ಅವನತಿಯತ್ತ ಸಾಗಲಿದೆ ಎಂದು ಎಚ್ಚರಿಸಿದರು.

Advertisement

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ಮಾತನಾಡಿ, ಎನ್‌ಎಸ್‌ಎಸ್‌, ಎನ್‌ಸಿಸಿ, ಕ್ರೀಡೆ ಮತ್ತಿತರ ಪಠ್ಯೇತರ ಚಟುವಟಿಕೆಗಳು ಭವಿಷ್ಯ ರೂಪಿಸಿಕೊಳ್ಳುವ ರಹದಾರಿಗಳಾಗಿವೆ. ಆದರೆ, ಹೆಚ್ಚಿನ ಅಂಕ ಪಡೆದವರಿಗೆ ಎಲ್ಲ ರೀತಿಯ ಸೌಲಭ್ಯ ದೊರೆಯುವುದರಿಂದ
ಇಂಥಹ ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳು ದೂರ ಉಳಿಯುತ್ತಾರೆ. ಉದ್ಘಾಟನೆ ಮಾಡಿದ ದಿನಕ್ಕೆ ಸೀಮಿತವಾಗಲಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡವರಿಗೆ ಪದವಿ ಸ್ಥಾನಮಾನ ನೀಡುವ ವ್ಯವಸ್ಥೆ ಆಗಬೇಕು ಎಂದರು.

ಪ್ರಾಂಶುಪಾಲೆ ಪ್ರೊ| ಟಿ.ವಿ. ಸಣ್ಣಮ್ಮ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ಪ್ರೊ| ಕೆ.ಕೆ. ಕಾಮಾನಿ, ಸ್ನಾತಕೋತ್ತರ ವಿಭಾಗದ ಸಾಂಸ್ಕೃತಿಕ ಸಂಚಾಲಕ ಡಾ| ಪಿ.ಟಿ. ಮಂಜುನಾಥ್‌, ಸ್ನಾತಕ ವಿಭಾಗದ ಸಾಂಸ್ಕೃತಿಕ ಸಂಚಾಲಕ ಪ್ರೊ| ಸರ್ದಾರ್‌ ಹುಸೇನ್‌ ಇದ್ದರು.

ಸಂತಾಪ: ಹಂತಕರ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್‌, ಡೆಂಘೀ ಜ್ವರಕ್ಕೆ ಬಲಿಯಾದ ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಸಂಜನಾ ಘೋರ್ಪಡೆ ಅವರ ಅಕಾಲಿಕ ನಿಧಾನಕ್ಕೆ ಸಂತಾಪ ಸೂಚಿಸಲಾಯಿತು.   

Advertisement

Udayavani is now on Telegram. Click here to join our channel and stay updated with the latest news.

Next