ಮಡಿಕೇರಿ: ಕೊಡಗು ಜಿಲ್ಲೆಯ ಆದಿವಾಸಿಗಳಿಗೆ ನಿವೇಶನ ಹಾಗೂ ಭೂಮಿಯ ಹಕ್ಕನ್ನು ತಕ್ಷಣ ಮಂಜೂರು ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ನಗರದ ಫೀ|ಮಾ| ಕಾರ್ಯಪ್ಪ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮಿತಿಯ ಪ್ರಮುಖರು ಸರಕಾರದ ನಿರ್ಲಕ್ಷ್ಯದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿಯ ಜಿಲ್ಲಾ ಸಂಚಾಲಕ ವೈ.ಕೆ.ಗಣೇಶ್ ಜಿಲ್ಲೆಯ ಮೂಲ ನಿವಾಸಿಗಳಾಗಿರುವ ಆದಿವಾಸಿಗಳು ತಲೆತಲಾಂತರದಿಂದ ಇಲ್ಲೇ ಹುಟ್ಟಿ ಬೆಳೆದು ಬಂದಿದ್ದರೂ, ವಾಸಿಸಲು ಸೂರಿಲ್ಲದೆ ಪರದಾಡುತ್ತಿದ್ದಾರೆ. ಹೋರಾಟಗಳಿಂದ ಮಾತ್ರ ಸರಕಾರದ ಗಮನ ಸೆಳೆಯಬೇಕಾದ ಪರಿಸ್ಥಿತಿ ಬಂದೊದಗಿದ್ದು, ಜಿಲ್ಲೆಯಲ್ಲಿರುವ ಹೆಚ್ಚಿನ ಬುಡಕಟ್ಟು ಜನರಿಗೆ ಅಧಿಕೃತ ದಾಖಲೆಗಳು ಇಲ್ಲದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೆಚ್ಚಿನವರು ತೋಟಗಳ ಲೈನ್‌ಮನೆಗಳಲ್ಲಿ ವಾಸಿಸುತ್ತಿದ್ದು, ಪಡಿತರ ಚೀಟಿ, ಗುರುತಿನ ಚೀಟಿ, ಆಧಾರ್‌ಕಾರ್ಡ್, ಬ್ಯಾಂಕ್ ಖಾತೆ, ಜಾತಿ ಸರ್ಟಿಫಿಕೇಟ್‌ಗಳು ದೊರಕುತ್ತಿಲ್ಲ. ಇದೇ ಕಾರಣದಿಂದ ವಸತಿ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು. ಸರಕಾರ ತಕ್ಷಣ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಸಾಲದಿಂದ ಸಂಕಷ್ಟದಲ್ಲಿರುವ ಆದಿವಾಸಿಗಳನ್ನು ಜೀತಮುಕ್ತಗೊಳಿಸಬೇಕು ಎಂದು ಗಣೇಶ್ ಒತ್ತಾಯಿಸಿದರು.
ಬೇಡಿಕೆಗಳು: ನಿವೇಶನ ಮತ್ತು ಭೂಮಿ ಹಕ್ಕನ್ನು ಕೂಡಲೇ ಮಂಜೂರು ಮಾಡಬೇಕು, ಮೂಲ ಆದಿವಾಸಿಗಳು ನೆಲೆ ನಿಂತಿರುವ ಮತ್ತು ಕೃಷಿ ಭೂಮಿಗೆ ಹಕ್ಕುಪತ್ರ ನೀಡಬೇಕು, ಆದಿವಾಸಿಗಳು ವಾಸಿಸುತ್ತಿರುವ ಹಾಡಿಗಳು ಅಥವಾ ಕಾಲೊನಿಗಳಿಗೆ ಕುಡಿಯುವ ನೀರು, ಶೌಚಾಲಯ, ವಿದ್ಯುತ್, ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ಅರಣ್ಯ ಇಲಾಖೆಯ ಹುದ್ದೆಗಳಿಗೆ ಆದಿವಾಸಿಗಳನ್ನು ನೇಮಿಸಿಕೊಳ್ಳಬೇಕು, ವಿದ್ಯಾವಂತ ಆದಿವಾಸಿ ಯುವ ಜನರಿಗೆ ಸರಕಾರಿ ಮತ್ತು ಖಾಸಗಿ ವಲಯದಲ್ಲೂ ಉದ್ಯೋಗ ಮೀಸಲಾತಿ ನೀಡಬೇಕು ಮತ್ತು ಈ ಜವಾಬ್ದಾರಿಯನ್ನು ಸರಕಾರ ಮತ್ತು ಜಿಲ್ಲಾಡಳಿತವೇ ನಿಭಾಯಿಸಬೇಕು, ಆದಿವಾಸಿಗಳಿಗೆ ಸೇರಬೇಕಾದ ಭೂಮಿಯನ್ನು ಪ್ರಭಾವಿಗಳು ಸ್ವಾಧೀನಪಡಿಸಿಕೊಂಡಿದ್ದು, ಅದನ್ನು ಮರಳಿ ಆದಿವಾಸಿಗಳಿಗೆ ನೀಡಲು ಕ್ರಮ ಕೈಗೊಳ್ಳಬೇಕು, ಆದಿವಾಸಿಗಳನ್ನು ವಂಚಿಸಿ ಭೂಮಿ ಕಸಿದುಕೊಂಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಆದಿವಾಸಿಗಳು ಮತ್ತು ದಲಿತರ ಶ್ಮಶಾನ ಒತ್ತುವರಿಯಾಗಿದ್ದರೆ ಅದನ್ನು ವಶಪಡಿಸಿಕೊಂಡು ಮರಳಿ ಆಯಾ ಸಮುದಾಯಗಳಿಗೆ ನೀಡಬೇಕು. ಸ್ಮಶಾನ ಇಲ್ಲದವರಿಗೆ ಶ್ಮಶಾನ ಜಾಗ ಗುರುತಿಸಿ ನೀಡಬೇಕು, ಪಾಲೆಮಾಡುವಿನಲ್ಲಿ ಬಡ ಕುಟುಂಬಗಳು ಶವ ಸಂಸ್ಕಾರ ಮಾಡುತ್ತಿದ್ದ ಭೂಮಿಯನ್ನೇ ಸ್ಥಳೀಯ ನಿವಾಸಿಗಳಿಗೆ ಸ್ಮಶಾನಕ್ಕಾಗಿ ಬಿಟ್ಟುಕೊಡಬೇಕು.
ಪ್ರತಿಭಟನೆಯಲ್ಲಿ ಸಿಪಿಐಎಂ ರಾಜ್ಯ ಸಮಿತಿ ಸದಸ್ಯರಾದ ಎಸ್.ವೈ. ಗುರುಶಾಂತ್, ಸಮಿತಿಯ ಪ್ರಮುಖರಾದ ವೈ.ಕೆ.ರವಿ, ಜೆ.ಕೆ.ಮಿಲನ್, ವೈ.ಜಿ. ಪ್ರೇಮಾ, ಮಂಜುಳಾ, ಜೆ.ಪಿ. ಕಮಲಾಕ್ಷಿ, ವೈ.ಕೆ. ತಮ್ಮು ಮತ್ತಿತರರು ಪಾಲ್ಗೊಂಡಿದ್ದರು. ಪ್ರತಿಭಟನಕಾರರು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.