Advertisement

“ಬಿಜೆಪಿ ಯಿಂದ ಅಹಿಂದ ವರ್ಗಗಳ ಹಕ್ಕು ಅಧಿಕಾರ ಕಸಿಯುವ ಹುನ್ನಾರ’

12:56 PM Dec 28, 2017 | Team Udayavani |

ದೊಡ್ಡಬಳ್ಳಾಪುರ: ಪ್ರಪಂಚದ ನೂರಕ್ಕೂ ಹೆಚ್ಚು ದೇಶಗಳು ನಮ್ಮ ಸಂವಿಧಾನ ಒಪ್ಪಿ ಅದನ್ನು ಅನುಸರಿಸುತ್ತಿರುವ ಈ ಕಾಲಘಟ್ಟದಲ್ಲಿ ಸಂವಿಧಾನ ಒಪ್ಪಲು ಸಾಧ್ಯವಿಲ್ಲ, ಅದನ್ನು ಬದಲಾಯಿಸಬೇಕು ಎಂಬ ಹೇಳಿಕೆಗಳ ಹಿಂದೆ ಈ ದೇಶದ ಅಹಿಂದ ವರ್ಗಗಳ ಹಕ್ಕು ಅಧಿಕಾರಗಳನ್ನು ಕಸಿಯುವ ಹುನ್ನಾರ ಅಡಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ
ಸಂಚಾಲಕ ರಾಜು ಸಣ್ಣಕ್ಕಿ ಹೇಳಿದರು.

Advertisement

ನಗರದ ಅಂಬೇಡ್ಕರ್‌ ಪ್ರತಿಮೆ ಮುಂದೆ ಕನ್ನಡ ಪಕ್ಷ ಮತ್ತು ದಲಿತ ಸಂಘಟನೆಗಳು ಅನಂತಕುಮಾರ್‌ ಹೆಗಡೆ ಹೇಳಿಕೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. 

ಜಾತ್ಯತೀತ ರಕ್ತ ಪರೀಕ್ಷೆ ಮಾಡಬೇಕು ಎಂದು ಹೇಳುವ ಹೆಗಡೆ ಈ ದೇಶದ ಸಂವಿಧಾನದ ಅಡಿಯಲ್ಲಿ ಆಯ್ಕೆಯಾದ ಜನ ಪ್ರತಿನಿಧಿಯಾಗಿ ಮಂತ್ರಿಯಾಗಿದ್ದರೂ ಕ್ರಿಮಿನಲ್‌ ರೀತಿ ಹೇಳಿಕೆಗಳು ನೀಡುವುದು ದೇಶ ದ್ರೋಹದ ಮುಂದುವರಿದ ಭಾಗವಾಗಿದೆ. ನಮ್ಮ ಸಂವಿಧಾನ ಮಹಿಳೆಯರು, ಪುರುಷರು ಮತ್ತು ಧರ್ಮಗಳ ನಡುವೆ ತಾರತಮ್ಯ ಮಾಡದೇ ಎಲ್ಲರನ್ನೂ ಸಮಾನವಾಗಿ ನೋಡಿದೆ. ಜಾತ್ಯತೀತತೆ ಎಂಬುದು ಸಂವಿಧಾನದ ಮೂಲ ಆಶಯವಾಗಿದ್ದು ಅದನ್ನು ಪ್ರಶ್ನೆ ಮಾಡುವ ಮೂಲಕ ಪ್ರಗತಿಪರರನ್ನು ಅವಹೇಳನ ಮಾಡಿದ್ದಾರೆ. ಕೇಂದ್ರ ಸರ್ಕಾರ ಈ ಕೂಡಲೇ ಅವರನ್ನು ಸಚಿವ ಸ್ಥಾನದಿಂದ ಹೊರಗಿಟ್ಟು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ತಾಲೂಕು ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ ನಾಯಕ್‌ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದ್ಯಾಂತ ದಲಿತರು, ಹಿಂದುಳಿದವರು ಸೇರಿದಂತೆ ಅಲ್ಪ ಸಂಖ್ಯಾತರ ಮೇಲೆ ಗೋವಿನ ವಿಚಾರದಲ್ಲಿ ನಿರಂತರ ಹಲ್ಲೆಗಳು, ಕೊಲೆಗಳು ನಡೆಯುತ್ತಿವೆ. ಪ್ರಶ್ನೆ ಮಾಡುವವರನ್ನು ದೇಶ ದ್ರೋಹಿಗಳೆಂದು ಹೇಳಲಾಗುತ್ತಿದೆ. ಅಧಿಕಾರದ ಆಸೆಗಾಗಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಅಹಿಂದ ವರ್ಗಗಳು ಈ ಕೂಡಲೇ ಹೊರಗೆ ಬರಬೇಕು ಎಂದರು.

ಕನ್ನಡ ಪಕ್ಷದ ಕಾರ್ಯದರ್ಶಿ ಡಿ.ಪಿ.ಆಂಜಿನೇಯ ಮಾತನಾಡಿ, ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷದ ಮುಖಂಡರಿಗೆ ಕೇವಲ ಅಧಿಕಾರ ಬೇಕು. ಅವರಿಗೆ ಯಾವುದೇ ಮೂಲ ಹಕ್ಕುಗಳ ರಕ್ಷಣೆ ಬಗ್ಗೆ ಕಾಳಜಿ ಇಲ್ಲ ಎಂದರು. ಪ್ರತಿಭಟನೆಯಲ್ಲಿ ಪಿವಿಸಿ ತಾಲೂಕು ಅಧ್ಯಕ್ಷ ಚನ್ನಮರಿಯಪ್ಪ, ಗೂಳ್ಯ ಹನುಮಣ್ಣ, ಬಹುಜನ ಸಮಾಜ ಪಕ್ಷದ ರಮೇಶ, ದಲಿತ ಮುಖಂಡರಾದ ಶಂಕರ್‌, ವೆಂಕಟೇಶ ಭಾಗವಹಿಸಿದ್ದರು.

Advertisement

“130 ಕೋಟಿ ಪ್ರಜೆಗಳಿಗೆ ಇರುವುದು ಒಂದೇ ಸಂವಿಧಾನ’
ದೊಡ್ಡಬಳ್ಳಾಪುರ: ಎಲ್ಲಾ ಧರ್ಮದವರಿಗೂ ಧರ್ಮ ಗ್ರಂಥಗಳಿರುವಂತೆ ದೇಶದ 130 ಕೋಟಿ ಪ್ರಜೆಗಳಿಗೆ ಇರುವುದು ಸಂವಿಧಾನ. ಈ ಸಂವಿಧಾನವನ್ನು ಗೌರವಿಸಿದೇ ಬಿಜೆಪಿ ಮನುಸೃತಿ ಹೇರ ಹೊರಟಿರುವುದು ಆತಂಕಕಾರಿ ಬೆಳವಣಿಗೆ ಎಂದು ಸಿಪಿಎಂ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಎ.ಪ್ರಕಾಶ್‌ ಹೇಳಿದರು.

ನಗರದ ಸಿಪಿಎಂ ಕಾರ್ಯಾಲಯದಲ್ಲಿ ನಡೆದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾರತದ ಸಂವಿಧಾನ ವಿಷಯ ಕುರಿತು ಅವರು ಮಾತನಾಡಿ, ಹಿಂದೂಗಳು ಭಗವದ್ಗೀತೆ, ಮುಸ್ಲಿಮರು ಕುರಾನ್‌ ಹಾಗೂ ಕ್ರೆ„ಸ್ತರು ಬೈಬಲ್‌ ಆರಾಧಿಸುತ್ತಾರೆ. ಆದರೆ 130ಕೋಟಿ ಜನರೂ ಗೌರವಿಸಬೇಕಾಗಿರುವುದು ಪಾಲಿಸಬೇಕಾಗಿರುವುದು ಡಾ.ಬಿ.ಆರ್‌.ಅಂಬೇಡ್ಕರ್‌ರವರು ಬರೆದಿರುವ ಭಾರತದ ಸಂವಿಧಾನವನ್ನು. ಇದಕ್ಕೆ ವಿರುದ್ಧವಾಗಿ ಬಿಜೆಪಿ ನಡೆಯುತ್ತಿರುವುದು ತಪ್ಪು. 1946 ರಲ್ಲಿ ಅಂಬೇಡ್ಕರ್‌ರಿಗೆ ಸಂವಿಧಾನದ ರಚನೆ ಜವಾಬ್ದಾರಿ ವಹಿಸಲಾಯಿತು. ಸ್ವಾತಂತ್ರ್ಯ ನಂತರ ಸಂವಿಧಾನದ ಸಭೆ ಸರ್ವಸ್ವತಂತ್ರ ಸಾರ್ವಭೌಮ ಸಭೆಯಾಯಿತು. ಸಂವಿಧಾನದ ಸಭೆಯು 2ವರ್ಷ 11ತಿಂಗಳು 18ದಿನಗಳು ಅವಧಿಯಲ್ಲಿ 166 ದಿನಗಳ ಕಾಲ ಸಭೆ ಸೇರಿತ್ತು. 

ಅಲ್ಲಿಯ ಚರ್ಚೆಗಳಲ್ಲಿ ಪತ್ರಕರ್ತರಿಗೆ ಹಾಗೂ ಜನತೆಗೆ ಮುಕ್ತ ಪ್ರವೇಶಾವಕಾಶವಿತ್ತು. ಸಭೆಯು ಸಂವಿಧಾನದ ರಚನೆಯನ್ನು ಪೂರ್ಣಗೂಳಿಸಿ 1949ರ ನವೆಂಬರ್‌ನಲ್ಲಿ ರಾಷ್ಟ್ರಕ್ಕೆ ಸಮರ್ಪಿಸಿತು. 1950 ಜನವರಿ 26 ರಂದು ಜಾರಿಗೆ ಬಂತು. ಇದು ವಿಶ್ವದಲ್ಲಿಯೇ ಅತ್ಯಧಿಕ ಹಕ್ಕುಗಳನ್ನಾಧರಿಸಿ ರಚನೆಯಾದ ಸಂವಿಧಾನ ಎಂದು ಭಾರತದ ಸಂವಿಧಾನ ಕರೆಯಲ್ಪಟ್ಟಿತು ಎಂದು ಸಂವಿಧಾನದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್‌. ಚಂದ್ರತೇಜಸ್ವಿ, ಸಿಪಿಎಂ ತಾಲೂಕು ಕಾರ್ಯದರ್ಶಿ ಪಿ.ಎ.ವೆಂಕಟೇಶ್‌, ಚಿಂತನ ಮಂಥನ ಸಂಚಾಲಕ ಚೌಡಯ್ಯ, ತಾಲೂಕು ಸಮಿತಿ ಸದಸ್ಯರಾದ ರುದ್ರಾರಾಧ್ಯ, ರೇಣುಕಾರಾಧ್ಯ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next