ದಾವಣಗೆರೆ: ಕಳೆದ ಎರಡು ವರ್ಷದಿಂದ ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಪುಟಾಣಿ ರೈಲು ಸೋಮವಾರದಿಂದ ಜೆ.ಎಚ್. ಪಟೇಲ್ ಬಡಾವಣೆ ಪಾರ್ಕ್-1ನಲ್ಲಿ ಸಂಚರಿಸಲಿದೆ. ಜೆ.ಎಚ್. ಪಟೇಲ್ ಬಡಾವಣೆಯ ಪಾರ್ಕ್-1 ರಲ್ಲಿ ಪುಟಾಣಿ ರೈಲು ಯೋಜನೆ ಸಿದ್ಧವಾಗಿ ಎರಡು ವರ್ಷವೇ ಆಗಿತ್ತು. 1.5 ಕೋಟಿ ಅನುದಾನದ ಮಹತ್ವಾಕಾಂಕ್ಷಿ ಯೋಜನೆಯ ಪುಟಾಣಿ ರೈಲಿಗೆ ಸಂಸದ ಜಿ.ಎಂ. ಸಿದ್ದೇಶ್ವರ್, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್, ತಾಲೂಕು ಪಂಚಾಯತ್ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಚಾಲನೆ ನೀಡಿದರು.
ಪುಟಾಣಿ ರೈಲು… ಕುರಿತಂತೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯ್ಕುಮಾರ್, ಮಹತ್ವಾಕಾಂಕ್ಷಿ ಯೋಜನೆಯ ಪುಟಾಣಿ ರೈಲಿಗೆ 1.5 ಕೋಟಿ ಅನುದಾನ ನೀಡಲಾಗಿದೆ. ಮೈಸೂರಿನ ನೈರುತ್ಯ ರೈಲ್ವೆಯವರೇ ಅಧಿಕ ಸಾಮರ್ಥ್ಯದ ಇಂಜಿನ್ನ ರೈಲು ಸಿದ್ಧಪಡಿಸಿದ್ದಾರಲ್ಲದೆ ನಿರ್ವಹಣಾ ಜವಾಬ್ದಾರಿ ಹೊತ್ತಿದ್ದಾರೆ. ಪ್ರತಿ 15 ದಿನಕ್ಕೊಮ್ಮೆ ಬಂದು ಪರಿಶೀಲನೆ ನಡೆಸುವರು.
70 ಆಸನ ಸಾಮರ್ಥ್ಯದ ಪುಟಾಣಿ ರೈಲಿನಲ್ಲಿ ಚಿಕ್ಕ ಮಕ್ಕಳೊಂದಿಗೆ ಹಿರಿಯರು ಸಹ ಸಂಚರಿಸಬಹುದು. 10 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ ಎಂದರು. ಜೆ.ಎಚ್. ಪಟೇಲ್ ಬಡಾವಣೆ ಪಾರ್ಕ್-1ನಲ್ಲಿ 4.5 ಎಕರೆ ಜಾಗದಲ್ಲಿ ಬಾಲಭವನ ನಿರ್ಮಾಣ ಮಾಡಲಾಗಿದೆ. ಆಟಿಕೆ ಸಾಮಾನುಗಳಿಗೆ 15 ಲಕ್ಷ ಅನುದಾನದ ಇ-ಟೆಂಡರ್ ಶೀಘ್ರದಲ್ಲೇ ಕರೆಯಲಾಗುವುದು.
ಬಾಲಭವನದಲ್ಲಿ ಸಂಗೀತಾಭ್ಯಾಸ, ಒಳಾಂಗಣ ಆಟೋಟ ವ್ಯವಸ್ಥೆ ಇದೆ. ಸಣ್ಣ ಪುಟ್ಟ ಕಾರ್ಯಕ್ರಮಗಳಿಗಾಗಿಯೇ ಸುಸಜ್ಜಿತ ವೇದಿಕೆ ಸಹ ಇದೆ. ಬಾಲಭವನದಲ್ಲೇ ಈ ಬಾರಿ 100 ಮಕ್ಕಳ ಬೇಸಿಗೆ ಶಿಬಿರ ನಡೆಸಲಾಗುವುದು ಎಂದು ತಿಳಿಸಿದರು.
ಸದ್ಯಕ್ಕೆ ಬಾಲಭವನದಲ್ಲಿ ನೀರಿನ ಸಮಸ್ಯೆ ಇದೆ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಾಗನೂರು ಬಹು ಗ್ರಾಮ ಯೋಜನೆಯಡಿ 2 ಇಂಚು ಪೈಪ್ ಮೂಲಕ ನೀರು ಪಡೆಯಲು ಪ್ರಯತ್ನಿಸಲಾಗುತ್ತಿದೆ. ನೀರಿನ ಸೌಲಭ್ಯದ ನಂತರ 24 ಗಂಟೆ ನಿರಂತರವಾಗಿ ನೀರು ಪೂರೈಕೆ, ಬೃಂದಾವನ ಮಾದರಿಯಲ್ಲಿ ಪಾರ್ಕ್ ಅಭಿವೃದ್ದಿ ಮಾಡಲಾಗುವುದು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ನಗರ ಸಾರಿಗೆ ಬಸ್ ಸೌಲಭ್ಯದ ಭರವಸೆ ನೀಡಿದ್ದಾರೆ ಎಂದರು.