ಬೆಂಗಳೂರು: ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದ್ದ ಮೆಟ್ರೋ ಮುಷ್ಕರ ಮರುಜೀವ ಪಡೆದುಕೊಂಡಿದೆ. ಸಂಘದ ಮಾನ್ಯತೆ, ಬಡ್ತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪೂರಕ ಸ್ಪಂದನೆ ದೊರಕಿಲ್ಲ. ಈ ಮೂಲಕ ಹೈಕೊರ್ಟ್ ಆದೇಶ ಪಾಲಿಸಿಲ್ಲ ಎಂದು ಆರೋಪಿಸಿ ಬಿಎಂಆರ್‌ಸಿ ನೌಕರರ ಸಂಘವು ಮತ್ತೆ ಮುಷ್ಕರಕ್ಕೆ ಮುಂದಾಗಿದೆ.
ಹೈಕೋರ್ಟ್ ಆದೇಶ ಪಾಲಿಸದೆ, ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ದ ಆಡಳಿತ ಮಂಡಳಿಯು ನ್ಯಾಯಾಂಗ ನಿಂದನೆ ಮಾಡಿದೆ. ಈ ಸಂಬಂಧ ಕೋರ್ಟ್‌ಗೆ ದೂರು ಸಲ್ಲಿಸಲಾಗುವುದು. ಜತೆಗೆ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದು, ದಿನಾಂಕ ಶೀಘ್ರ ಅಂತಿಮಗೊಳಿಸಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.
ನೌಕರರ ಸಮಸ್ಯೆಗಳನ್ನು ಪರಸ್ಪರ ಕುಳಿತು ಬಗೆಹರಿಸಿಕೊಳ್ಳುವಂತೆ ಹೈಕೋರ್ಟ್ ಈ ಹಿಂದೆ ಸೂಚಿಸಿತ್ತು. ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ನಿಗಮದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯು ವಾರದಲ್ಲಿ ಎರಡು ಬಾರಿ ಸಭೆ ನಡೆಸಿ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಿ, 30 ದಿನಗಳ ಗಡುವು ವಿಧಿಸಿತ್ತು. ಆದರೆ, ಇದುವರೆಗೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಮತ್ತೆ ಮುಷ್ಕರಕ್ಕೆ ಇಳಿಯಲು ನೌಕರರ ಸಂಘ ನಿರ್ಧರಿಸಿದೆ.
ಆಡಳಿತ ಮಂಡಳಿ ಧೋರಣೆ ಖಂಡಿಸಿ ಮತ್ತು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸುವುದು ಖಚಿತ. ಆದರೆ, ದಿನಾಂಕ ಇನ್ನೂ ಅಂತಿಗೊಂಡಿಲ್ಲ. ಶೀಘ್ರದಲ್ಲೇ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಪ್ರಕಟಿಸಲಾಗುವುದು ಎಂದು ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಸ್ಪಷ್ಟಪಡಿಸಿದರು.
ಸಮಸ್ಯೆ ಪರಿಹಾರದ ಪ್ರಯತ್ನವಾಗಿಲ್ಲ: ಕಳೆದ 30 ದಿನಗಳಲ್ಲಿ ನಿಗಮದ ಆಡಳಿತ ಮಂಡಳಿಯು ಯಾವುದೇ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿಲ್ಲ. ಬರೀ ಒಂದು ಬದಿಯ ಚರ್ಚೆ ನಡೆಯುತ್ತಿದೆ. ಬೇಡಿಕೆ ಈಡೇರಿಸುವ ಬಗ್ಗೆ ಲಿಖೀತವಾಗಿ ಭರವಸೆ ನೀಡುವಂತೆ ಕೇಳಿಕೊಳ್ಳಲಾಗಿದೆ. ಅದಕ್ಕೂ ಸ್ಪಂದನೆ ದೊರಕಿಲ್ಲ. ಈ ಮೂಲಕ ನ್ಯಾಯಾಲಯದ ಆದೇಶವನ್ನೂ ಪಾಲಿಸಿಲ್ಲ. ಇದೆಲ್ಲದರ ಪರಿಣಾಮ ಸಮಸ್ಯೆಗಳು ಹಾಗೇ ಉಳಿದಿವೆ ಎಂದು ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಆರೋಪಿಸಿದರು.