Advertisement

ಪರಿಷ್ಕೃತ ಪಠ್ಯವನ್ನು ಸಾರ್ವಜನಿಕರ ಮುಂದಿಡಿ

11:45 AM Jan 20, 2017 | |

ಬೆಂಗಳೂರು: ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಪರಿಷ್ಕರಿಸಿರುವ 1ರಿಂದ 10ನೇ ತರಗತಿ ವರೆಗಿನ ಪಠ್ಯಪುಸ್ತಕಗಳನ್ನು ಮುದ್ರಣ ಮಾಡುವ ಮೊದಲು ರಾಜ್ಯ ಸರ್ಕಾರ ಸಾರ್ವಜನಿಕರ ಮುಂದಿಟ್ಟು ಸಮಗ್ರ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯರು, ಶಿಕ್ಷಣ ತಜ್ಞರು, ಚಿಂತಕರು ಒತ್ತಾಯಿಸಿದ್ದಾರೆ. 

Advertisement

ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ಕುರಿತು “ಶಿಕ್ಷಾ ಬಚಾವೋ ಆಂದೋಲನ ಸಮಿತಿ’ಯು ಗುರುವಾರ ನಗರದ ಮಿಥಿಕ್‌ ಸೊಸೈಟಿಯಲ್ಲಿ ಆಯೋಜಿಸಿದ್ದ “ದುಂಡು ಮೇಜಿನ ಸಭೆ’ಯಲ್ಲಿ ಈ ಸಂಬಂಧ ಒಕ್ಕೊರಲ ಆಗ್ರಹ ವ್ಯಕ್ತವಾಯಿತು.

ವಿಧಾನ ಪರಿಷತ್‌ ಸದಸ್ಯ ಅರುಣ್‌ ಶಹಾಪುರ ಮಾತನಾಡಿ, ಪಠ್ಯ ಪುಸ್ತಕ ಪರಿಷ್ಕರಣೆಗೆ ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ), ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಯಂತಹ ಕಾನೂನು ಬದ್ಧ ಸಂಸ್ಥೆಗಳಿರುವಾಗ ಅವುಗಳನ್ನು ಕತ್ತಲಲ್ಲಿಟ್ಟು ಸರ್ಕಾರ ಪ್ರತ್ಯೇಕ ಸಮಿತಿ ರಚನೆ ಮಾಡಿರುವುದೇ ಕಾನೂನು ಬಾಹಿರ ಎಂದರು.

ಪಠ್ಯದಲ್ಲಿರುವ ಲೋಪಗಳೇನು? ಯಾವ್ಯಾವ ವಿಷಯಗ ಳನ್ನು ಯಾವ ಕಾರಣಕ್ಕಾಗಿ ಕೈಬಿಡಬೇಕು ಅಥವಾ ಬದಲಾವಣೆ ಮಾಡಬೇಕು? ಎಂಬುದನ್ನು ಈ ಸಮಿತಿ ಸಾರ್ವಜನಿಕವಾಗಿ ಚರ್ಚಿಸಿ, ಸಲಹೆಗಳನ್ನು ಪಡೆದಿದ್ದರೆ ಒಪ್ಪಬಹುದಿತ್ತು. ಅದೂ ಆಗಿಲ್ಲ. ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸಿ ಗೌಪ್ಯವಾಗಿ 1ರಿಂದ 10ನೇ ತರಗತಿವರೆಗಿನ ಪಠ್ಯಪುಸ್ತಕ ಪರಿಷ್ಕರಿಸಿ 2017-18ನೇ ಸಾಲಿನಿಂದಲೇ ಜಾರಿ ಮಾಡಲು ಹೊರಟಿರುವುದು ಪ್ರಜಾಪ್ರಭುತ್ವ ವಿರೋಧಿ ನೀತಿ.

ಪರಿಷ್ಕೃತ ಪಠ್ಯ ಮುದ್ರಣವಾಗುವ ಮೊದಲು ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ವಿಧಾನ ಪರಿಷತ್‌ ಮಾಜಿ ಸದಸ್ಯೆ ಎಸ್‌.ಆರ್‌.ಲೀಲಾ ಮಾತನಾಡಿ, ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಈಗಿನ ಪಠ್ಯಪುಸ್ತಕದಲ್ಲಿ ಕೇಸರೀಕರಣವಾಗಿದೆ ಎಂದು ಟೀಕಿಸಿದ್ದಾರೆ. ವೈಚಾರಿಕ, ಸೈದ್ಧಾಂತಿಕವಾಗಿ ಮಾತನಾಡುವ ಅವರು ಮೊದಲು “ಕೇಸರೀಕರಣ’ ಎಂದರೇನು ಎಂಬುದನ್ನು ತಿಳಿಸಲಿ ಎಂದು ಒತ್ತಾಯಿಸಿದರು.
 
ಕಾನೂನಾತ್ಮಕ ಹೋರಾಟ: ಪರಿಷ್ಕೃತ ಪಠ್ಯ ಸಾರ್ವಜನಿಕ ಚರ್ಚೆಯಾಗುವವರೆಗೆ ಜಾರಿಯಾಗಬಾರದು. ಕಾನೂನಾತ್ಮಕ ಸಂಸ್ಥೆಗಳನ್ನು ಬಿಟ್ಟು ಸಮಿತಿ ಮೂಲಕ ಪಠ್ಯ ಪರಿಷ್ಕರಿಸಿರುವುದು ಕಾನೂನು ಬಾಹಿರ. ಹಾಗಾಗಿ ಕಾನೂನು ಹೋರಾಟದ ಅಗತ್ಯವಿದೆ. ಮಕ್ಕಳ ಹಿತದೃಷ್ಟಿಯಿಂದ ಪರಿಷ್ಕೃತ ಪಠ್ಯ ಜಾರಿಯಾಗದಂತೆ ತಡೆಯಾಜ್ಞೆ ತರುವ ಪ್ರಯತ್ನವಾಗಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಪಿ.ವಿ.ಕೃಷ್ಣಭಟ್‌ ಹೇಳಿದರು.

Advertisement

ಸಭೆಯಲ್ಲಿ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್‌ ಬಿದರೆ, ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರಳಾಪುರ, ಬೆಂಗಳೂರು ವಿವಿ ಸಿಂಡಿಕೇಟ್‌ ಸದಸ್ಯ ವಸಂತ ಕುಮಾರ್‌, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸಿಂಡಿಕೇಟ್‌ ಸದಸ್ಯರಾದ ಸಂಜೀವ್‌ ಕುಬಕಡ್ಡಿ, ಕೃಷ್ಣಾ ವೆಂಕಟೇಶ್‌, ಮಾಧ್ಯಮಿಕ ಶಿಕ್ಷಕ್‌ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ಸಿಂದನಕೇರಾ, ವಕೀಲರಾದ ಜಗದೀಶ್‌ ಪ್ರಸಾದ್‌, ಡಾ.ಶ್ಯಾಮ್‌ ಭಟ್‌ ಮತ್ತಿತರರು ಪರಿಷತ ಪಠ್ಯವನ್ನು ಸಾರ್ವಜನಿಕ ಚರ್ಚೆಗೆ ನೀಡಬೇಕೆಂದು ಆಗ್ರಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next