Advertisement

ಕಂದಾಯ ಇಲಾಖೆ ಇನ್ನಷ್ಟು  ಕ್ರಿಯಾಶೀಲ: ಕಾಗೋಡು

02:45 PM Feb 15, 2018 | Harsha Rao |

ಬ್ರಹ್ಮಾವರ: ಹೊಸ ತಾಲೂಕು ರಚನೆಯಿಂದ ಹೊಸ ಹುಮ್ಮಸ್ಸು, ಆಲೋಚನೆ, ವಿಚಾರಗಳು ಮೂಡಬೇಕು. ತ್ವರಿತ ಗತಿಯಲ್ಲಿ ಕಾರ್ಯನಿರ್ವಹಣೆ ಮೂಲಕ ಕಂದಾಯ ಇಲಾಖೆ ಇನ್ನಷ್ಟು ಕ್ರಿಯಾಶೀಲವಾಗಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

Advertisement

ಅವರು ಬುಧವಾರ ಬ್ರಹ್ಮಾವರ ತಹ ಶೀಲ್ದಾರ್‌ ಕಚೇರಿಯಲ್ಲಿ ಬ್ರಹ್ಮಾವರ ತಾಲೂಕು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಜಾಗದ ಹಕ್ಕು ಪತ್ರ ನೀಡುವ ಕೆಲಸ ಹೋರಾಟ ರೂಪದಲ್ಲಿ ನಡೆಯಬೇಕು ಎಂದರು. ಪರಂಬೋಕು, ಗೋಮಾಳ, ಮೂಲಗೇಣಿ ಇತ್ಯಾದಿ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಲಾಗುವುದು, ಧಾರ್ಮಿಕ ಕೇಂದ್ರಗಳ ಹಕ್ಕುಪತ್ರ ಕುರಿತು ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

ಜನಸೇವೆಯೇ ಪುಣ್ಯದ ಕೆಲಸ
ಸರಕಾರಿ ಅಧಿಕಾರಿಗಳು ಪುಣ್ಯ ಸಂಪಾದನೆಗಾಗಿ ಯಾವ ಕ್ಷೇತ್ರಕ್ಕೂ ಹೋಗಬೇಕಿಲ್ಲ. ಕಚೇರಿಗೆ ಬಂದ ಜನಸಾಮಾನ್ಯರಿಗೆ ಉತ್ತಮ ಸೇವೆ ನೀಡುವುದೇ ಪುಣ್ಯದ ಕೆಲಸ ಎಂದು ಕಾಗೋಡು ಹೇಳಿದರು.

ಮಿನಿ ವಿಧಾನಸೌಧ
ತಾಲೂಕು ಕೇಂದ್ರ ಬ್ರಹ್ಮಾವರಕ್ಕೆ 10 ಕೋ.ರೂ. ಅನುದಾನದ ಮಿನಿವಿಧಾನ ಸೌಧ ಮಂಜೂರು ಮಾಡಬೇಕೆಂದು ಮನವಿ ಮಾಡಿದ ಸಚಿವ ಪ್ರಮೋದ್‌ ಅವರು ಜಿಲ್ಲೆಯ ಕಂದಾಯ ಸಂಬಂಧಿ ಸಮಸ್ಯೆಗಳನ್ನು ಪ್ರಸ್ತಾವನೆಯಲ್ಲಿ ತಿಳಿಸಿದರು.

ಅತಿಥಿಗಳಾಗಿ ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸದಸ್ಯರಾದ ಜನಾರ್ದನ ತೋನ್ಸೆ, ಮೈರ್ಮಾಡಿ ಸುಧಾಕರ ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಮಾಜಿ ಶಾಸಕ ಬಸವ ರಾಜ್‌, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮೈರ್ಮಾಡಿ ಅಶೋಕ್‌ ಕುಮಾರ್‌ ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಅಧ್ಯಕ್ಷೆ ರತ್ನಾ ನಾಗರಾಜ ಗಾಣಿಗ, ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಕುಂದಾಪುರ ಉಪವಿಭಾಗ ಸಹಾಯಕ ಆಯುಕ್ತ ಭೂಬಾಲನ್‌ ಮೊದಲಾದವರು ಉಪಸ್ಥಿತರಿದ್ದರು. ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
ತಹಶೀಲ್ದಾರ್‌ ಪ್ರದೀಪ್‌ ಎಸ್‌. ಕುಡೇìಕರ್‌ ಸ್ವಾಗತಿಸಿ, ಪ್ರಶಾಂತ್‌ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

Advertisement

ವಿವಿಧ ಭಾಗ್ಯಗಳ ಸವಲತ್ತು ವಿತರಣೆ
ಪಶು ಭಾಗ್ಯ ಯೋಜನೆ-3, ಹಾಲು ಉತ್ಪಾದಕರ ಪ್ರೋತ್ಸಾಹ ಧನ-20, ಬಿದಾಯಿ ಯೋಜನೆ-3, ಸಮುದಾಯ ಭವನ ನಿರ್ಮಾಣಕ್ಕೆ ಸಹಾಯಧನ ವಿತರಣೆ, ಧಾರ್ಮಿಕ ದತ್ತಿ ಇಲಾಖೆಯ ಅನುದಾನ ವಿತರಣೆ, ಉದ್ಯೋಗಿನಿ ಯೋಜನೆ-6, ವಸತಿ ಯೋಜನೆ ಮನೆ ಮಂಜೂರಾತಿ-20, ಸಂಧ್ಯಾ ಸುರಕ್ಷಾ-76, ವಿಧವಾ ವೇತನ-35, ಅಂಗವಿಕಲ ವೇತನ-6, ಮನಸ್ವಿನಿ- 5, ವೃದ್ಧಾಪ್ಯ ವೇತನ-6, 94ಸಿ ಮತ್ತು 94ಸಿಸಿ ಹಕ್ಕುಪತ್ರ-67, ಮುಖ್ಯ ಮಂತ್ರಿ ಪರಿಹಾರ ನಿಧಿ ಚೆಕ್‌-3, ಪ್ರಾಕೃತಿಕ ವಿಕೋಪ ನಿಧಿ-1 ಸಹಿತ ನೂರಾರು ಮಂದಿ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next