ನವದೆಹಲಿ: ಆರ್ಥಿಕ ಅಪರಾಧಿಗಳ ಹಿಡಿದು ತರುವ ನಿಟ್ಟಿನಲ್ಲಿ ಜಿ20 ಶೃಂಗ ಸಭೆಯಲ್ಲಿ ಮಂಡಿಸಲಾಗಿರುವ ನವ ಸೂತ್ರಗಳಿಗೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೈನಿಕ್ ಜಾಗರಣ್ ಮೀಡಿಯಾ ಗ್ರೂಪ್‌ನ ಸಮಾವೇಶದಲ್ಲಿ ಶುಕ್ರವಾರ ಮಾತನಾಡಿದ ಮೋದಿ ಅವರು, ಯಾವುದೇ ದೇಶದಲ್ಲೂ ಆರ್ಥಿಕ ಅಪರಾಧಿಗಳಿಗೆ ಆಶ್ರಯ ಕೊಡಬೇಡಿ ಎಂದು ವಾದ ಮಂಡಿಸಿದ್ದೇನೆ. ಯಾರು ಆರ್ಥಿಕ ಅಪರಾಧ ಎಸಗಿರುತ್ತಾರೋ, ಅಂಥವರಿಗೆ ಯಾವುದೇ ದೇಶದಲ್ಲೂ ಸಂರಕ್ಷಣೆ ಸಿಗದು ಎಂದು ಹೇಳಿದ್ದಾರೆ. ನಿಜವಾಗಿಯೂ ನಮ್ಮ ಆಂದೋಲನಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದೂ ಹೇಳಿದ್ದಾರೆ.
ಸದ್ಯ ಆರ್ಥಿಕ ಅಪರಾಧಿಗಳಾದ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಸ್ಕಿ ಅವರು ವಿದೇಶಗಳಲ್ಲಿ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಇವ ರನ್ನು ಹಿಡಿದುತರುವಲ್ಲಿ ಭಾರತ ಪ್ರಯತ್ನ ನಡೆಸುತ್ತಿದೆ. ಹೀಗಾಗಿಯೇ ಜಿ20ಯ ಅಂತಾರಾಷ್ಟ್ರೀಯ ವ್ಯಾಪಾರ ಸಮ್ಮೇಳನದಲ್ಲಿ ಆರ್ಥಿಕ ಅಪರಾಧಿಗಳ ಬಗ್ಗೆ ಪ್ರಧಾನಿ ಮೋದಿ ವಾದ ಮಂಡಿಸಿದ್ದರು.
ದೊಡ್ಡ ಹೆಸರುಗಳಿಂದ ಅಭಿವೃದ್ಧಿ ಯಾಗಲಿಲ್ಲ: ಇದೇ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧವೂ ಕಿಡಿಕಾರಿದ ಅವರು, ಹಿಂದಿನಿಂದಲೂ ದೇಶದಲ್ಲಿ ದೊಡ್ಡ ದೊಡ್ಡ ಉಪನಾಮಗಳಿರುವ ಮಂದಿ ಬಂದರು, ಹೋದರು. ಆದರೆ, ದೇಶವಂತೂ ಅಭಿವೃದ್ಧಿಯಾಗಲಿಲ್ಲ ಎಂದು ಗಾಂಧಿ ಕುಟುಂಬವನ್ನು ಗುರಿಯಾಗಿಸಿ ಟೀಕೆ ಮಾಡಿದರು. ವೋಟ್ ಬ್ಯಾಂಕ್‌ನ ದೃಷ್ಟಿಯಿಂದಲೇ ಕಾಂಗ್ರೆಸ್ ಬಡತನವನ್ನು ಪೋಷಿಸಿ ಕೊಂಡು ಬಂತು ಎಂದೂ ಆರೋಪಿಸಿದರು.
ಸುಳ್ಳು ಹೇಳದಿರಿ ಎಂದ ಕಾಂಗ್ರೆಸ್: ಉಪ ನಾಮಗಳಿರುವ ಮಂದಿಯಿಂದ ಅಭಿವೃದ್ಧಿ ಆಗಿಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. “ನಿಮ್ಮ ನಿಜ ಬಣ್ಣ ಈಗಾಗಲೇ ಬಯಲಾಗಿದೆ. ಹೀಗಿರುವಾಗ ಸುಳ್ಳುಗಳನ್ನು ಹೇಳುತ್ತಾ, ಜನರ ಹಾದಿ ತಪ್ಪಿಸಬೇಡಿ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇವಾಲಾ ಹೇಳಿದ್ದಾರೆ.