Advertisement

ಮರು ಆರಂಭಗೊಂಡ ವಾರ್ಡ್‌ ಸಮಿತಿ ಸಭೆ ಪರಿಣಾಮಕಾರಿ ಸಭೆ ಅಗತ್ಯ

01:48 PM Jun 20, 2023 | Team Udayavani |

ಮಹಾನಗರ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದ ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ ಸಮಿತಿ ಸಭೆಯು ಮತ್ತೆ ಆರಂಭಗೊಳ್ಳುತ್ತಿದೆ.

Advertisement

ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸುಮಾರು ಮೂರ್‍ನಾಲ್ಕು ತಿಂಗಳು ಗಳಿಂದ ಸಭೆ ರದ್ದುಗೊಂಡಿತ್ತು. ಮರು ಆರಂಭಕ್ಕೆ ಸಾರ್ವಜನಿಕರಿಂದ ಆಗ್ರಹವೂ ಕೇಳಿಬಂದಿತ್ತು. ಈ ಕುರಿತು “ಉದಯವಾಣಿ ಸುದಿನ’ ವರದಿ ಪ್ರಕಟಿಸಿತ್ತು. ಮಂಗಳೂರು ವಾರ್ಡ್‌ ಸಮಿತಿ ಬಳಗವು ಪಾಲಿಕೆ ಆಯುಕ್ತರಾಗಿದ್ದ ಚನ್ನಬಸಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಇದೀಗ ಜೂನ್‌ ತಿಂಗಳ ಸಭೆ ನಡೆಸಲು ವಾರ್ಡ್‌ ಸಮಿತಿ ಕಾರ್ಯದರ್ಶಿಗಳಿಂದ ಅಧ್ಯಕ್ಷರು, ಸದಸ್ಯರಿಗೆ ನೋಟಿಸ್‌ ನೀಡಲಾಗಿದೆ.

ವಾರ್ಡ್‌ ಸಮಿತಿ ಸಭೆಯನ್ನು ಮತ್ತಷ್ಟು ಪರಿಣಾಮ ಕಾರಿಯಾಗಿ ನಡೆಸಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿದೆ. ಸದ್ಯ ವಾರ್ಡ್‌ ಸಮಿತಿ ಸಭೆಗಳು ಕಾಟಾಚಾರದಂತೆ ನಡೆಯುತ್ತಿದೆ. ಹಲವು ಸಭೆಗಳಿಗೆ ಸದಸ್ಯರೇ ಬರುತ್ತಿಲ್ಲ. ಇದರಿಂದ ಕೋರಂ ಕೂಡ ಭರ್ತಿಯಾಗುತ್ತಿಲ್ಲ. ವಾರ್ಡ್‌ ಸಮಿತಿ ಸಭೆಯಲ್ಲಿ ಚರ್ಚಿಸಿದ ವಿಷಯಗಳು ಕೂಡ ಪರಿಹಾರವಾಗುತ್ತಿಲ್ಲ. ನಿಯಮದಂತೆ ಪ್ರತೀ ಸಭೆಯ ನಡವಳಿಯನ್ನು ಆಧಿರಿಸಿ ಕೈಗೊಂಡ ಕ್ರಮದ ಬಗ್ಗೆ ಕಾರ್ಯದರ್ಶಿಗಳು ಸಭೆಯ ಮುಂದಿಡಬೇಕು. ಅದು ಆಗುತ್ತಿಲ್ಲ. ಇದರಿಂದಾಗಿ ವಾರ್ಡ್‌ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ಮಳೆಗಾಲ ಸಮಸ್ಯೆ ಪರಿಹಾರ ಅಗತ್ಯ
ಪಾಲಿಕೆಯಲ್ಲಿ ಪ್ರತೀ ತಿಂಗಳು ನಡೆ ಯುವ ಸಾಮಾನ್ಯ ಸಭೆಯಲ್ಲಿ ವಾರ್ಡ್‌ ವಾರು ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಬೆಂಗಳೂರು ಹೊರತುಪಡಿಸಿ ಮಂಗಳೂರಿನಲ್ಲಿ ಮೊಲದ ಬಾರಿಗೆ ವಾರ್ಡ್‌ ಸಮಿತಿ ಸಭೆ ಕಳೆದ ವರ್ಷ ದಿಂದ ಆರಂಭಗೊಂಡಿದೆ. ಇನ್ನೇನು ಮಳೆಗಾಲ ಆರಂಭಗೊಂಡಿದ್ದು, ವಾರ್ಡ್‌ವಾರು ಸಮಸ್ಯೆ ಬಗೆಹರಿಸಲು ವಾರ್ಡ್‌ ಸಮಿತಿ ಸಭೆ ಅತೀ ಮುಖ್ಯ ಎನ್ನುತ್ತಾರೆ ಸಾರ್ವಜನಿಕರು.

49 ವಾರ್ಡ್‌; 102 ಸದಸ್ಯ ಹುದ್ದೆ ಖಾಲಿ
ವಾರ್ಡ್‌ ಕಮಿಟಿ ಹುದ್ದೆ ಭರ್ತಿಗೆ ಪಾಲಿಕೆಯು ಎರಡು ಬಾರಿ ಅರ್ಜಿ ಆಹ್ವಾನಿಸಿತ್ತು. ಪ್ರತ್ಯೇಕ ಪಂಗಡದಂತೆ ಮೂರು ಮಂದಿ ಸಾಮಾನ್ಯ ವರ್ಗ, ಮೂರು ಮಂದಿ ಮಹಿಳೆಯರು, ಇಬ್ಬರು ಸಂಘ ಸಂಸ್ಥೆ ಪ್ರಮುಖರು, ತಲಾ ಒಬ್ಬರು ಎಸ್‌.ಸಿ. ಮತ್ತು ಎಸ್‌.ಟಿ. ಪಂಗಡ ಇರಬೇಕು. ಒಟ್ಟಾರೆ 10 ಮಂದಿ ಸದಸ್ಯರು, ಒಬ್ಬರು ವಾರ್ಡ್‌ ಕಾರ್ಯದರ್ಶಿ, ಒಬ್ಬರು ವಾರ್ಡ್‌ ಅಧ್ಯಕ್ಷರು (ಆಯಾ ವಾರ್ಡ್‌ ಮನಪಾ ಸದಸ್ಯರು) ಇರುತ್ತಾರೆ. ಆದರೆ ಅರ್ಜಿ ಸಲ್ಲಿಕೆ ವೇಳೆ ಹೆಚ್ಚಿನ ಸಾರ್ವಜನಿಕರಿಗೆ ಮಾಹಿತಿ ಕೊರತೆ ಕಾರಣ, ಸುಮಾರು 49 ವಾರ್ಡ್‌ಗಳಲ್ಲಿ ವಾರ್ಡ್‌ ಕಮಿಟಿ ಸದಸ್ಯರು ಪೂರ್ಣ ಸಂಖ್ಯೆಯಲ್ಲಿ ಇಲ್ಲ. ಸದ್ಯ 102 ಹುದ್ದೆ ಖಾಲಿ ಇದೆ.

Advertisement

ಚರ್ಚಿತ ವಿಷಯಗಳು ಪರಿಹಾರ ಕಾಣಲಿ
ಚುನಾವಣೆ ನೀತಿ ಸಂಹಿತೆಯ ಬಳಿಕ ಜೂನ್‌ ತಿಂಗಳಿನಿಂದ ಮತ್ತೆ ವಾರ್ಡ್‌ ಸಮಿತಿ ಸಭೆಗಳು ಆರಂಭಗೊಳ್ಳುತ್ತಿದೆ. ಪ್ರತೀ ಸಭೆಗಳು ಪರಿಣಾಮಕಾರಿಯಾಗಿ ಜಾರಿಗೊಳ್ಳಬೇಕು. ಸಭೆಗಳಲ್ಲಿ ಚರ್ಚಿಸಿದ ವಿಷಯಗಳು ಪರಿಹಾರ ಕಾಣಬೇಕು. ಪ್ರತೀ ವಾರ್ಡ್‌ ಕಮಿಟಿಯಲ್ಲಿ 10 ಮಂದಿ ಸದಸ್ಯರು ಇರಬೇಕು. ಆದರೆ, 49 ವಾರ್ಡ್‌ಗಳಲ್ಲಿ ಸದಸ್ಯ ಹುದ್ದೆ ಖಾಲಿ ಇದೆ. ಸದ್ಯ 102 ಸದಸ್ಯ ಹುದ್ದೆ ಭರ್ತಿಯಾಗಬೇಕು.
-ನೈಜೆಲ್‌ ಅಲುºಕರ್ಕ್‌,
ಮಂಗಳೂರು ಸಿವಿಕ್‌ ಗ್ರೂಫ್‌ನ ಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next