ಧಾರವಾಡ: ವಿದ್ಯಾಕಾಶಿ ಎಂದೇ ಹೆಸರು ಪಡೆದಿರುವ ಧಾರವಾಡ ಜಿಲ್ಲೆ ವರ್ಷದಿಂದ ವರ್ಷಕ್ಕೆ ಶೈಕ್ಷಣಿಕ ಸಾಧನೆ ಪಟ್ಟಿಯಲ್ಲಿ ಕುಸಿತ ಕಾಣುತ್ತಿದ್ದು, ಈ ಬಾರಿಯ ದ್ವಿತೀಯ ಪಿಯು ಫಲಿತಾಂಶದಲ್ಲಿ ಮತ್ತೆ 3 ಸ್ಥಾನ ಇಳಿಮುಖವಾಗಿದ್ದು,18ನೇ ಸ್ಥಾನಕ್ಕೆ ಕುಸಿದಿದೆ. 2015ರಲ್ಲಿ 14ನೇ ಸ್ಥಾನದಲ್ಲಿದ್ದ ಜಿಲ್ಲೆ 2016ರಲ್ಲಿ 15ನೇ ಸ್ಥಾನಕ್ಕೆ ಕುಸಿತ ಕಂಡಿತ್ತು.
ಇದೀಗ 2017ರಲ್ಲಿ ಬರೊಬ್ಬರಿ 3 ಸ್ಥಾನ ಒಮ್ಮೆಲೇ ಕುಸಿತ ಕಂಡಿರುವುದು ಶಿಕ್ಷಣ ತಜ್ಞರ ಆತಂಕಕ್ಕೆ ಕಾರಣವಾಗಿದೆ. ಫಲಿತಾಂಶದ ಪ್ರಮಾಣ ಹೆಚ್ಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕೆಲವು ಸ್ವಯಂ ಸೇವಾ ಸಂಸ್ಥೆಗಳು ಪರೀಕ್ಷೆಗೆ ಪೂರ್ವಭಾವಿಯಾಗಿಯೇ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದರೂ ಫಲಿತಾಂಶ ಒಂದೇ ಸಮಯಕ್ಕೆ 3 ಸ್ಥಾನ ಕುಸಿತ ಕಂಡಿರುವುದು ಶಿಕ್ಷಣ ಇಲಾಖೆ ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿದೆ.
ವಿಭಾಗವಾರು ಫಲಿತಾಂಶ: 2016ರಲ್ಲಿ ಶೇ.62.86ರಷ್ಟು ಸಾಧನೆ ಮಾಡಿ ರಾಜ್ಯದಲ್ಲಿಯೇ 15ನೇ ಸ್ಥಾನದಲ್ಲಿದ್ದ ಜಿಲ್ಲೆ, ಈ ವರ್ಷ 55.73ರಷ್ಟು ಸಾಧನೆ ಮಾಡಿ 18ನೇ ಸ್ಥಾನಕ್ಕೆ ಕುಸಿದಿದೆ. ಪರೀಕ್ಷೆಗೆ ಕುಳಿತ ಕಲೆ,ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಒಟ್ಟು 20,622 ವಿದ್ಯಾರ್ಥಿಗಳ ಪೈಕಿ, 11492 ವಿದ್ಯಾರ್ಥಿಗಳು ಪಾಸಾಗಿದ್ದು ಶೇ.55.73ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾದಂತಾಗಿದೆ.
ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 5283 ವಿದ್ಯಾರ್ಥಿಗಳ ಪೈಕಿ 1897 ಮಾತ್ರ ಪಾಸಾಗಿದ್ದು ಶೇ. 35.91ರಷ್ಟು ಅತೀ ಕಳಪೆ ಮಟ್ಟದಲ್ಲಿ ಸಾಧನೆ ಮಾಡಿದೆ. ವಾಣಿಜ್ಯ ವಿಭಾಗದಲ್ಲಿ 6845ರ ಪೈಕಿ 3871 ವಿದ್ಯಾರ್ಥಿಗಳು ಪಾಸಾಗಿದ್ದು ಶೇ.56.55ರಷ್ಟು ಹಾಗೂ ವಿಜ್ಞಾನ ವಿಭಾಗದಲ್ಲಿ 8494 ಪೈಕಿ 5724 ವಿದ್ಯಾರ್ಥಿಗಳು ಪಾಸಾಗಿದ್ದು ಶೇ. 67.39 ರಷ್ಟು ಫಲಿತಾಂಶ ದಾಖಲಾಗಿದೆ.
ಇನ್ನು, ಶೇ.19.73ರಷ್ಟು ಖಾಸಗಿ ವಿದ್ಯಾರ್ಥಿಗಳು, ಶೇ.10.76ರಷ್ಟು ಮರಳಿ ಪರೀಕ್ಷೆ ಬರೆದವರ ಪೈಕಿ ಪಾಸಾಗಿದ್ದಾರೆ. ಶೇ.51.84ರಷ್ಟು ನಗರ ಮತ್ತು ಶೇ. 41.92ರಷ್ಟು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ಪದವಿ ಪೂರ್ವ ಇಲಾಖೆ ಅಧಿಕಾರಿಗಳು ಅಧಿಕೃತವಾಗಿ ದೃಢಪಡಿಸಿದ್ದಾರೆ.
ಸಿಸಿಟಿವಿ ಭಯವೇ ಫಲಿತಾಂಶ ಕುಸಿತ: ಫಲಿತಾಂಶ ತೀವ್ರ ಕುಸಿತ ಕಾಣಲು ಈ ಬಾರಿ ಪರೀûಾ ಕೇಂದ್ರಗಳಲ್ಲಿ ಎಲ್ಲೆಡೆ ಸಿಸಿ ಟಿವಿ ಹಾಕಿಸಿರುವುದು ಕಾರಣ ಎಂದು ಡಿಡಿಪಿಯು ಗಣೇಶ ಪೂಜಾರ ತಿಳಿಸಿದರು. ಉದಯವಾಣಿಯೊಂದಿಗೆ ಮಾತನಾಡಿದ ಅವರು, ಸಿಸಿಟಿವಿಯಿಂದ ವಿದ್ಯಾರ್ಥಿಗಳು ಭಯದಲ್ಲೇ ಪರೀಕ್ಷೆ ಬರೆದಿದ್ದಾರೆ.
ಉತ್ತಮ ಫಲಿತಾಂಶ ಸಿಕ್ಕಲಿಲ್ಲ. ಕುಸಿಯಲು ಅದಕ್ಕಿಂತ ಹೆಚ್ಚಾಗಿ ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರ ತೀವ್ರ ಕೊರತೆ ಇದ್ದು, ಅವರು ಪಠ್ಯಕ್ರಮ ಮುಗಿಸಿಯೇ ಇಲ್ಲ. ಶಿಕ್ಷಣದ ಗುಣಮಟ್ಟ ಕುಸಿದಿದ್ದು ಇರುವ ಉಪನ್ಯಾಸಕರಿಗೆ ಎಷ್ಟು ತರಬೇತಿ ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದರು.