ಬೆಂಗಳೂರು:ಲೋಕಸಭೆ ಚುನಾವಣೆಯ ಫಲಿತಾಂಶ ನೋಡಿ ದಿಗ್ಭ್ರಮೆ ಆಗಿದೆ. ನನಗೆ ನಂಬಲಿಕ್ಕೂ ಸಾಧ್ಯವಾಗುತ್ತಿಲ್ಲ. ಎಲ್ಲಿ ತಪ್ಪಾಗಿದೆ ಅಂತ ಗೊತ್ತಾಗುತ್ತಿಲ್ಲ.ಈ ಬಗ್ಗೆ ವಿಮರ್ಶೆ ನಡೆಸಬೇಕಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ವಿದೇಶದಿಂದ ವಾಪಸ್ ಆದ ಬಳಿಕ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಹೋದರ ಸುರೇಶ್ ಗೆದ್ದ ಬಗ್ಗೆಯೂ ಸಂತಸ ಇಲ್ಲ. ಸುರೇಶ್ ಒಬ್ಬ ಲೋಕಸಭೆಯಲ್ಲಿ ಏನು ಮಾತನಾಡಲು ಸಾಧ್ಯ? ಖರ್ಗೆ, ದೇವೇಗೌಡರು, ವೀರಪ್ಪ ಮೊಯ್ಲಿ, ಮುನಿಯಪ್ಪನಂತಹವರು ಸೋತಿದ್ದು ಆತಂಕ ಮೂಡಿಸಿದೆ. ಇಂತಹ ಫಲಿತಾಂಶ ರಾಜ್ಯಕ್ಕೆ ಆಗಬಾರದಿತ್ತು ಎಂದರು.
ಮೈತ್ರಿ ಧರ್ಮ ಪಾಲನೆ ಬಗ್ಗೆ ಈಗಲೂ ಮಾತನಾಡಬಾರದು. ನಾಯಕರು ನನ್ನ ಬಾಯಿಗೆ ಬೀಗ ಹಾಕಿಕೊಳ್ಳಲು ಹೇಳಿದ್ದಾರೆ. ನಾನು ಯಾರ ವಿರುದ್ಧವೂ ಈಗ ಮಾತನಾಡುವುದಿಲ್ಲ. ಬಿಎಸ್ ಯಡಿಯೂರಪ್ಪನವರ ಕೈಯಲ್ಲೇ ಎಲ್ಲವೂ ಇದೆ ಎಂದು ಪ್ರತಿಕ್ರಿಯೆ ನೀಡಿದರು.
ಜಿಂದಾಲ್ ಗೆ ಜಮೀನು ಮಾರಾಟ ಸರಿ: ಡಿಕೆಶಿ
ಜಿಂದಾಲ್ ಕಂಪನಿಗೆ ಜಮೀನು ಮಾರಾಟ ಮಾಡಿದ್ದು ಸರಿ ಎಂದು ಸಚಿವ ಡಿಕೆ ಶಿವಕುಮಾರ್ ಮೈತ್ರಿ ಸರ್ಕಾರದ ನಿರ್ಣಾಯವನ್ನು ಸಮರ್ಥಿಸಿಕೊಂಡರು. ಇನ್ಫೋಸಿಸ್ ಗೆ ಭೂಮಿ ಕೊಟ್ಟಾಗಲೂ ಆಕ್ಷೇಪವಿತ್ತು. ಉದ್ಯೋಗ ಸೃಷ್ಟಿ, ಬಂಡವಾಳ ಹೂಡಿಕೆ, ಅಭಿವೃದ್ಧಿಗಾಗಿ ಇಂತಹ ನಿರ್ಣಯಗಳನ್ನು ಕೈಗೊಳ್ಳಬೇಕಾಗುತ್ತದೆ. ಹಿಂದಿನ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು, ಇದೀಗ ಮೈತ್ರಿ ಸರ್ಕಾರದ ಸಂಪುಟ ಅನುಮೋದನೆ ನೀಡಿದೆ ಎಂದರು.