Advertisement

ನಿರ್ಬಂಧದಿಂದ ಹಲವರ ಪ್ರಾಣ ಉಳಿದಿದೆ:ಮಲಿಕ್‌

10:15 AM Aug 27, 2019 | Team Udayavani |

ಶ್ರೀನಗರ/ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಔಷಧಗಳು ಹಾಗೂ ಅವಶ್ಯಕ ವಸ್ತುಗಳ ಅಭಾವ ಉಂಟಾಗಿದೆ ಎಂಬ ಆರೋಪಗಳನ್ನು ರಾಜ್ಯಪಾಲ ಸತ್ಯಪಾಲ್ ಮಲಿಕ್‌ ಭಾನುವಾರ ತಳ್ಳಿಹಾಕಿದ್ದು, ರಾಜ್ಯದಲ್ಲಿ ಸಂವಹನಕ್ಕೆ ಹೇರಿರುವ ನಿರ್ಬಂಧವು ಹಲವು ಪ್ರಾಣಗಳನ್ನು ಉಳಿಸಿದೆ ಎಂದು ಹೇಳಿದ್ದಾರೆ.

Advertisement

ಶ್ರೀನಗರದಲ್ಲಿರುವ 1,666 ಔಷಧ ಮಳಿಗೆಗಳ ಪೈಕಿ ಭಾನುವಾರ 1,165 ಅಂಗಡಿಗಳು ತೆರೆದಿವೆ. ರಾಜ್ಯದಲ್ಲಿ ಎಲ್ಲೂ ಅಗತ್ಯವಸ್ತುಗಳು ಅಥವಾ ಔಷಧಗಳ ಕೊರತೆ ಉಂಟಾಗಿಲ್ಲ. ಕಳೆದ 20 ದಿನಗಳಲ್ಲಿ 23.81 ಕೋಟಿ ರೂ. ಮೌಲ್ಯದ ಔಷಧಗಳನ್ನು ಪೂರೈಸಲಾಗಿದೆ ಎಂದೂ ಮಲಿಕ್‌ ತಿಳಿಸಿದ್ದಾರೆ. ಅಲ್ಲದೆ, 10 ದಿನಗಳಲ್ಲಿ ರಾಜ್ಯದಲ್ಲಿ ಯಾವುದೇ ಜೀವಹಾನಿಯಾಗಿಲ್ಲ. ಸಂವಹನದ ಮೇಲಿನ ನಿರ್ಬಂಧವು ಜನರ ಪ್ರಾಣ ಉಳಿಸುತ್ತದೆ ಎಂದರೆ, ನಿರ್ಬಂಧ ಹೇರುವುದರಲ್ಲಿ ತಪ್ಪೇನು ಎಂದೂ ಅವರು ಪ್ರಶ್ನಿಸಿದ್ದಾರೆ.

ಬೇಬಿ ಫ‌ುಡ್‌ ಕೊರತೆ: ಔಷಧಗಳ ಕೊರತೆ ಇಲ್ಲ ಎಂದು ಕೇಂದ್ರ ಗೃಹ ಇಲಾಖೆಯೂ ಭಾನುವಾರ ಸ್ಪಷ್ಟನೆ ನೀಡಿದೆ. ಆದರೆ, ಕಳೆದ 2 ದಿನಗಳಿಂದ ಶಿಶು ಆಹಾರದ ಅಭಾವ ಉಂಟಾಗಿದೆ ಎಂಬುದನ್ನು ಒಪ್ಪಿಕೊಂಡಿದೆ. ಹೊಸ ಸ್ಟಾಕ್‌ಗಳನ್ನು ಸ್ವೀಕರಿಸಿದ್ದು, ಕೂಡಲೇ ಅವುಗಳನ್ನು ಸರಬರಾಜು ಮಾಡಲಾಗುವುದು ಎಂದೂ ಹೇಳಿದೆ.

ಜನ ಸಾಯುತ್ತಿದ್ದಾರೆ ಎಂದಿದ್ದ ವೈದ್ಯರು: ಇದಕ್ಕೂ ಮುನ್ನ, ಕಣಿವೆ ರಾಜ್ಯದಲ್ಲಿ ಔಷಧಗಳಿಗೆ ತೀವ್ರ ಕೊರತೆ ಉಂಟಾಗಿದ್ದು, ಜನರು ಸಾಯುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಜಮ್ಮು-ಕಾಶ್ಮೀರದ ವೈದ್ಯರ ಹೇಳಿಕೆ ಆಧರಿಸಿ ನ್ಯೂಸ್‌ 18 ವರದಿ ಮಾಡಿತ್ತು. ನಿರ್ಬಂಧದಿಂದಾಗಿ ಜೀವರಕ್ಷಕ ಔಷಧಗಳ ತೀವ್ರ ಅಭಾವವಿದ್ದು, ಜನತೆ ಸಂಕಷ್ಟಕ್ಕೀಡಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಇದಾದ ಬೆನ್ನಲ್ಲೇ ರಾಜ್ಯಪಾಲರು ಹಾಗೂ ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ ನೀಡಿ, ಅಂಥ ಯಾವುದೇ ಕೊರತೆ ಇಲ್ಲ ಎಂದಿದೆ.

ಐಎಎಸ್‌ ಅಧಿಕಾರಿ ರಾಜೀನಾಮೆ: ಕಣಿವೆ ರಾಜ್ಯದ ನಿರ್ಬಂಧ ಖಂಡಿಸಿ ಕೇರಳ ಮೂಲದ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ‘ಜನರಿಗೆ ಧ್ವನಿಯಾಗಬೇಕು ಎಂಬ ಭಾವನೆ ಯಿಂದ ನಾವು ಸೇವೆಗೆ ಸೇರುತ್ತೇವೆ. ಆದರೆ ನಮ್ಮದೇ ಧ್ವನಿಯನ್ನು ಕಿತ್ತುಕೊಳ್ಳಲಾಗುತ್ತದೆ. ಒಂದು ಪ್ರದೇಶದ ಜನರ ಮೂಲಭೂತ ಹಕ್ಕುಗಳನ್ನೇ ಕಸಿದುಕೊಳ್ಳಲಾಗಿದೆ’ ಎಂದು ಕಣ್ಣನ್‌ ಹೇಳಿದ್ದಾರೆ.

Advertisement

ಎಲ್ಲವೂ ಸರಿ ಇಲ್ಲ: ಭಾನುವಾರ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದು, ಶ್ರೀನಗರಕ್ಕೆ ಭೇಟಿ ನೀಡಿದಾಗ ಅಲ್ಲಿನ ಕಠಿಣ ಆಡಳಿತ ಮತ್ತು ದಬ್ಟಾಳಿಕೆಗೆ ಪ್ರತಿಪಕ್ಷಗಳ ನಾಯಕರು ಮತ್ತು ಮಾಧ್ಯಮಗಳು ಸಾಕ್ಷಿಯಾದವು. ಜಮ್ಮು-ಕಾಶ್ಮೀರದ ಜನರು ಮೂಲಭೂತ ಹಕ್ಕುಗಳನ್ನು ಕಳೆದುಕೊಂಡು 20 ದಿನಗಳೇ ಕಳೆದವು ಎಂದು ಹೇಳಿದ್ದಾರೆ.

ನಾಳೆಯಿಂದ ಪ್ರವಾಸ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ತಂಡವೊಂದು 27 ಮತ್ತು 28ರಂದು ರಾಜ್ಯಕ್ಕೆ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳಿಗೆ ಸ್ಥಳ ಗುರುತಿಸುವ ಕೆಲಸ ಮಾಡಲಿದೆ ಎಂದು ಸಚಿವ ಮುಖ್ತಾರ್‌ ಅಬ್ಟಾಸ್‌ ನಖ್ವೀ ಹೇಳಿದ್ದಾರೆ.

ನವೆಂಬರ್‌ನಲ್ಲೇ ಉದ್ಘಾಟನೆ: ಇದೇ ವೇಳೆ, ಕರ್ತಾರ್ಪುರ ಕಾರಿಡಾರ್‌ ಉದ್ಘಾಟನೆಯು ಈ ಹಿಂದೆ ನಿಗದಿಪಡಿಸಿದಂತೆ ನವೆಂಬರ್‌ನಲ್ಲೇ ನಡೆಯಲಿದೆ. ಭಾರತ ಮತ್ತು ಪಾಕ್‌ ನಡುವಿನ ಬಿಗುವಿನ ಸ್ಥಿತಿ ಹಿನ್ನೆಲೆಯಲ್ಲಿ ಈ ಯೋಜನೆಯ ಉದ್ಘಾಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪಾಕಿಸ್ತಾನ ಭಾನುವಾರು ಪುನರುಚ್ಚರಿಸಿದೆ.

ರಾರಾಜಿಸಿದ ತ್ರಿವರ್ಣ ಧ್ವಜ
370ನೇ ವಿಧಿ ರದ್ದಾದ ಬಳಿಕ ಜಮ್ಮು-ಕಾಶ್ಮೀರದ ಸಿವಿಲ್ ಸೆಕ್ರೆಟರಿಯೇಟ್ ಕಟ್ಟಡದಲ್ಲಿದ್ದ ರಾಜ್ಯದ ಪ್ರತ್ಯೇಕ ಧ್ವಜವನ್ನು ಕೆಳಗಿಳಿಸಲಾಗಿದ್ದು, ಈಗ ಈ ಕಟ್ಟಡದಲ್ಲಿ ತ್ರಿವರ್ಣ ಧ್ವಜ ಹಾರುತ್ತಿವೆ. ಇದಕ್ಕೂ ಮುನ್ನ ರಾಜ್ಯಕ್ಕೆ ಎರಡು ಧ್ವಜಗಳನ್ನು ಹಾರಿಸಲು ಅವಕಾಶವಿತ್ತು. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ 3 ವಾರಗಳ ಬಳಿಕ ತ್ರಿವರ್ಣ ಧ್ವಜವನ್ನು ಇಲ್ಲಿ ಹಾರಿಸಲಾಗಿದೆ. ಜತೆಗೆ, ಇತರೆ ಸರ್ಕಾರಿ ಕಟ್ಟಡಗಳ ಮೇಲೆ ಹಾರಿಸಲಾಗಿದ್ದ ರಾಜ್ಯದ ಪ್ರತ್ಯೇಕ ಧ್ವಜಗಳನ್ನೂ ಕೆಳಗಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next