Advertisement

61 ಶಾಲೆ ಬಿಟ್ಟು ಉಳಿದ ಶಾಲೆ ಪುನಾರಂಭ

06:00 AM Aug 23, 2018 | Team Udayavani |

ಬೆಂಗಳೂರು: ಕೊಡಗಿನಲ್ಲಿ ತೀವ್ರ ಹಾನಿಗೊಳಗಾಗಿರುವ 61 ಶಾಲೆಗಳನ್ನು ಹೊರತುಪಡಿಸಿ ಉಳಿದ ಶಾಲೆಗಳನ್ನು ಗುರುವಾರದಿಂದ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಜತೆಗೆ 5,000 ಶಾಲಾ ಪುಸ್ತಕ ವಿತರಣೆಗೂ ಕ್ರಮ ಕೈಗೊಂಡಿದ್ದು, ಪರಿಹಾರ ಕೇಂದ್ರಗಳಲ್ಲೇ ಮಕ್ಕಳಿಗೆ ಶಾಲಾ ಪಠ್ಯ ಚಟುವಟಿಕೆ ಆರಂಭಿಸಲು ಸೂಚಿಸಿದೆ.

Advertisement

ಭಾರೀ ಮಳೆಯಿಂದ ತೀವ್ರ ಹಾನಿಗೆ ಒಳಗಾಗಿರುವ ಕೊಡಗು ಜಿಲ್ಲೆಯಲ್ಲಿ ಸರ್ಕಾರ ಕೈಗೊಂಡಿರುವ ಪರಿಹಾರ ಹಾಗೂ ಪುನರ್‌ನಿರ್ಮಾಣ ಕಾರ್ಯದ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಹಾಗೂ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರಿಂದ ಮಾಹಿತಿ ಪಡೆದರು. ಸರ್ಕಾರ ಕೈಗೊಂಡಿರುವ ಕ್ರಮಗಳ ವಿವರ ಹೀಗಿದೆ.

ಬಿಸಿನೀರು ವ್ಯವಸ್ಥೆ: ಪ್ರಮುಖವಾಗಿ ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಬಿಸಿನೀರಿನ ವ್ಯವಸ್ಥೆ ಕಲ್ಪಿಸಲು ಗ್ಯಾಸ್‌ ಗೀಜರ್‌, ಅಡುಗೆ ಅನಿಲ ಪೂರೈಕೆಗೆ ಕ್ರಮ ಕೈಗೊಂಡಿದೆ. ಜಿಲ್ಲೆಯ 5 ದಾಸ್ತಾನು ಕೇಂದ್ರಗಳ ಮೂಲಕ 100ಕ್ಕೂ ಹೆಚ್ಚು ವಾಹನಗಳಲ್ಲಿ ಗ್ರಾಮ ಪಂಚಾಯ್ತಿ ಹಾಗೂ ಇತರೆ ಪಟ್ಟಣ ಪ್ರದೇಶಗಳ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಸಾಮಗ್ರಿ ವಿತರಣೆಗೆ ಕ್ರಮ, ಇನ್ನಷ್ಟು ಟಾರ್ಪಾಲ್‌, ಪ್ಲಾಸ್ಟಿಕ್‌ ಬ್ಯಾಗ್‌ಗಳ ಅಗತ್ಯವಿರುವುದನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಬಗೆಯ ಪರಿಹಾರ ಸಾಮಗ್ರಿ ದಾಸ್ತಾನು ಕೇಂದ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿರುವುದನ್ನು ಖಾತರಿಪಡಿಸಿಕೊಂಡಿದೆ.

ಜಿಲ್ಲೆಯಲ್ಲಿ ಅಡುಗೆ ಅನಿಲ, ಗ್ಯಾಸ್‌ ಗೀಜರ್‌, ಪೆಟ್ರೋಲ್‌, ಡೀಸೆಲ್‌ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಆಹಾರ ಇಲಾಖೆ ನಿರ್ದೇಶಕರು ನಿಗಾ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಜತೆಗೆ 50,000 ಆಹಾರ ಕಿಟ್‌ಗಳ ಸಮರ್ಪಕ ವಿತರಣೆಗೆ ಕ್ರಮ ಕೈಗೊಳ್ಳಲು ಸೂಚಿಸಿದೆ.

ಬೆಳೆನಷ್ಟ ಸಮೀಕ್ಷೆ: ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಲು ಸೂಕ್ತ ಸರ್ಕಾರಿ ಭೂಮಿ ಗುರುತಿಸುವ ಕಾರ್ಯವನ್ನು ತಕ್ಷಣ ಕೈಗೊಳ್ಳಬೇಕು. ಪ್ರಕೃತಿ ವಿಕೋಪದಿಂದಾಗಿ ಮನೆ ಹಾನಿ, ಕೃಷಿ ಹಾಗೂ ತೋಟಗಾರಿಕೆ ಬೆಳೆ ನಷ್ಟದ ಸಮೀಕ್ಷಾ ವರದಿ ಪಡೆದು ಸಂಬಂಧಪಟ್ಟವರಿಗೆ ತಕ್ಷಣ ಆರ್ಥಿಕ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಆಸ್ತಿಪಾಸ್ತಿಯ ದಾಖಲೆ ಕಳೆದುಕೊಂಡವರಿಗೆ ದಾಖಲೆಗಳನ್ನು ಮತ್ತೆ ಸೃಷ್ಟಿಸಿ ಹಂಚಿಕೆ ಮಾಡುವ ಕಾರ್ಯ ತ್ವರಿತವಾಗಿ ಕೈಗೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಪಂಚಾಯತ್‌ರಾಜ್‌ ಇಲಾಖೆ ಸಹಯೋಗದಲ್ಲಿ ಅಗತ್ಯಕ್ಕನುಗುಣವಾಗಿ ಡ್ರೋಣ್‌ ಕ್ಯಾಮೆರಾ ಬಳಸಿ ಸಮೀಕ್ಷೆ ನಡೆಸುವಂತೆಯೂ ಸೂಚಿಸಿದೆ.

Advertisement

ಭೂಕುಸಿತ ತಡೆಗೆ ಮರಳು ಮೂಟೆ ಬಳಕೆ
ಜಿಲ್ಲೆಯಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆಯ ಪುನರ್‌ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಂಚಾಯತ್‌ ಎಂಜಿನಿಯರಿಂಗ್‌ ವಿಭಾಗ ತ್ವರಿತವಾಗಿ ಕೈಗೊಳ್ಳಬೇಕು. ಮುಂದೆ ಅನಾಹುತ ತಡೆಗೆ ವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳುವ ಸಲುವಾಗಿ ಭೂಕುಸಿತ ತಡೆಗೆ ರಕ್ಷಣಾ ತಡೆಗೋಡೆ ನಿರ್ಮಾಣಕ್ಕಾಗಿ ಮರಳು ಮೂಟೆಗಳನ್ನು ಬಳಸುವಂತೆಯೂ ಸರ್ಕಾರ ಸೂಚಿಸಿದೆ.

ಜಿಲ್ಲೆಯಲ್ಲಿ ಬಸ್‌ ಸಂಚಾರ ಹಾಗೂ ಸಾರಿಗೆ ಸಂಪರ್ಕ ವ್ಯವಸ್ಥೆ ಸುಧಾರಣೆಗಾಗಿ ಕೆಎಸ್‌ಆರ್‌ಟಿಸಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪರಿಹಾರ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಮುಂದೆ ಪ್ರಕೃತಿ ವಿಕೋಪ ತಡೆಗೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ಯೋಜಿತ ರೀತಿಯಲ್ಲಿ ಚರಂಡಿ ನಿರ್ಮಾಣಕ್ಕೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next