Advertisement

84 ಕೆರೆಗಳಿಗೆ ಪುನಶ್ಚೇತನ ಭಾಗ್ಯ, ಅವಲಂಬಿತರಿಗೆ “ಜಲ ಪ್ರಸಾದ’

02:12 PM Jun 20, 2017 | Team Udayavani |

ಹುಬ್ಬಳ್ಳಿ: ರಾಜ್ಯಾದ್ಯಂತ ಕೆರೆಗಳ ಪುನಶ್ಚೇತನಕ್ಕೆ ಕಂಕಣ ತೊಟ್ಟಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 2016-17ನೇ ಸಾಲಿನಲ್ಲಿ ಸುಮಾರು 84 ಕೆರೆಗಳ ಹೂಳೆತ್ತಿ ಅಭಿವೃದ್ಧಿ ಮಾಡುವ ಮೂಲಕ ಸುಮಾರು 6.60 ಲಕ್ಷ ಕೆರೆ ನೀರು ಅವಲಂಬಿತರಿಗೆ “ಜಲ ಪ್ರಸಾದ’ ವ್ಯವಸ್ಥೆ ಮಾಡಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮತ್ತೆ 126 ಕೆರೆಗಳ ಪುನಶ್ಚೇತನಕ್ಕೆ ಮುಂದಡಿ ಇರಿಸಿದೆ.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರ ಆಶಯದೊಂದಿಗೆ ಗ್ರಾಮಾಭಿವೃದ್ಧಿ ಯೋಜನೆ
ತನ್ನ ಕಾರ್ಯಕ್ಷೇತ್ರ ವ್ಯಾಪ್ತಿಯ ಪ್ರದೇಶಗಳಲ್ಲಿ ತಾಲೂಕಿಗೆ ಒಂದು-ಎರಡರಂತೆ ನಮ್ಮೂರು ನಮ್ಮ ಕೆರೆ ಯೋಜನೆಯಡಿ 2016-17ನೇ ಸಾಲಿನಲ್ಲಿ ಅಂದಾಜು 30 ಕೋಟಿ ರೂ. ವೆಚ್ಚದಲ್ಲಿ ಸುಮಾರು 100 ಕೆರೆಗಳ ಪುನಶ್ಚೇತನಕ್ಕೆ ಮುಂದಾಗಿದ್ದು, ಇದರಲ್ಲಿ ಪ್ರಸ್ತುತ ಸುಮಾರು 84 ಕೆರೆಗಳಲ್ಲಿ ಬಹುತೇಕ ಪೂರ್ಣಗೊಂಡಿವೆ.

ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ರಾಜ್ಯದಲ್ಲಿ ಒಟ್ಟು ಆರು ಪ್ರಾದೇಶಿಕ ವ್ಯಾಪ್ತಿಯಲ್ಲಿ ಕೆರೆಗಳ ಅಭಿವೃದ್ಧಿ ಕಾರ್ಯ ನಡೆದಿದ್ದು, ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ ಅತಿ ಹೆಚ್ಚು 24 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

ಕೆರೆಗಳ ಆಯ್ಕೆ ಹೇಗೆ?: ಕೆರೆಗಳ ಅಭಿವೃದ್ಧಿ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರತಿ ತಾಲೂಕಿಗೆ 1- 2 ಕೆರೆಗಳ ಪುನಶ್ಚೇತನ ಕೈಗೆತ್ತಿಕೊಳ್ಳುತ್ತಿದೆ. ಕುಡಿಯುವ ನೀರಿನ ತೊಂದರೆಯಿರುವ, ಕೆರೆಯ ಮೇಲೆಯೇ ಅವಲಂಬಿತವಾದ ಗ್ರಾಮ ಹಾಗೂ ಜನರ ಸಕ್ರಿಯ ಸಹಭಾಗಿತ್ವ ಇನ್ನಿತರ ಮಾಹಿತಿಯ ಸಮೀಕ್ಷೆ ನಡೆಸಿ ಕೆರೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದಕ್ಕಾಗಿ ಕೆರೆ ಪುನಶ್ಚೇತನ ಸ್ಥಳೀಯ ಸಮಿತಿ ರಚಿಸಲಾಗುತ್ತದೆ.

ಕೆರೆ ಹೂಳೆತ್ತಲು ಜೆಸಿಬಿ ಹಾಗೂ ಅಗತ್ಯ ವೆಚ್ಚವನ್ನು ಗ್ರಾಮಾಭಿವೃದ್ಧಿ ಯೋಜನೆ ಭರಿಸುತ್ತಿದೆ. ಕೆರೆಯ ಹೂಳು ಪಡೆಯಲು ಮುಂದಾಗುವ ರೈತರಿಗೆ ಶುಲ್ಕ ವಿಧಿಸುತ್ತಿದ್ದು, ಇದರಿಂದ ಸಂಗ್ರಹವಾಗುವ ಹಣವನ್ನು ಇದೇ ಕೆರೆಯ ಪುನಶ್ಚೇತನಕ್ಕೆ ಬಳಕೆ ಮಾಡುತ್ತದೆ. ಜತೆಗೆ ಗ್ರಾಮಸ್ಥರಿಂದ ಕಡಿಮೆ ಬಾಡಿಗೆಗೆ ಅಥವಾ ಉಚಿತವಾಗಿ ಟ್ರ್ಯಾಕ್ಟರ್‌ ಸೇವೆ ಪಡೆದು ಹೂಳೆತ್ತುವ ಕಾರ್ಯ ಕೈಗೊಳ್ಳಲಾಗುತ್ತದೆ.

Advertisement

84 ಕೆರೆಗಳಿಗೆ ಪುನಶ್ಚೇತನ ಭಾಗ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 2016- 17ನೇ ಸಾಲಿಗೆ ಒಟ್ಟು 100 ಕೆರೆಗಳಲ್ಲಿ 84 ಕೆರೆಗಳ ಕಾಮಗಾರಿ ಕೈಗೊಂಡಿದ್ದು, ಇದರಲ್ಲಿ 76 ಕೆರೆಗಳು ಪೂರ್ಣಗೊಂಡಿದ್ದು, ಇನ್ನು 8 ಕೆರೆಗಳ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ.

ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯಲ್ಲಿ ಗದಗ ಜಿಲ್ಲೆಯಲ್ಲಿ 3, ಬಾಗಲಕೋಟೆ 1, ಕೊಪ್ಪಳದಲ್ಲಿ 2, ಧಾರವಾಡ ಪ್ರಾದೇಶಿಕ ವ್ಯಾಪ್ತಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 1, ಹಾವೇರಿ-3, ಚಿತ್ರದುರ್ಗ-2, ಧಾರವಾಡ-4, ಬೆಳಗಾವಿ-5, ಕಲಬುರಗಿ ಪ್ರಾದೇಶಿಕ ವ್ಯಾಪ್ತಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ 8, ಬೀದರ-7, ವಿಜಯಪುರ-4 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ.
ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ತಲಾ
5, ತುಮಕೂರು-10, ಚಿಕ್ಕಬಳ್ಳಾಪುರ-4. ಮೈಸೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ ಚಾಮರಾಜನಗರ, ಮೈಸೂರು, ಹಾಸನ
ಜಿಲ್ಲೆಗಳಲ್ಲಿ ತಲಾ 1, ಮಂಡ್ಯ-2, ಉಡುಪಿ ಪ್ರಾದೇಶಿಕ ವ್ಯಾಪ್ತಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 8, ಚಿಕ್ಕಮಗಳೂರು-3, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ 2, ಕೊಡಗು ಜಿಲ್ಲೆಯಲ್ಲಿ 1 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ.

ಐತಿಹಾಸಿಕ ಕೆರೆಗಳಿಗೆ ಮತ್ತೆ ಗತವೈಭವ
ಕೆರೆಗಳ ಪುನಶ್ಚೇತನದೊಂದಿಗೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಆಸರೆ ಜತೆಗೆ ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಮಹತ್ವದ ಕೊಡುಗೆ ನೀಡಲಾಗುತ್ತದೆ. ಒಂದು ಕೆರೆ ಅಭಿವೃದ್ಧಿಗೊಂಡರೆ ಸುತ್ತಮುತ್ತಲಿನ ಒಂದೆರಡು ಕಿ.ಮೀ.ವ್ಯಾಪ್ತಿಯ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 2017-18ನೇ ಸಾಲಿನಲ್ಲಿ ರಾಜ್ಯದಲ್ಲಿ ಸುಮಾರು 126 ಕೆರೆಗಳ ಹೂಳೆತ್ತುವ ಯೋಜನೆಗೆ ಮುಂದಾಗಿದ್ದು, ಅನೇಕ ಐತಿಹಾಸಿಕ ಹಿನ್ನೆಲೆಯ ಕೆರೆಗಳು ಸೇರಿ ಸಣ್ಣ, ಮಧ್ಯಮ ಹಾಗೂ ಬೃಹತ್‌ ಕೆರೆಗಳು ಮತ್ತೆ ತಮ್ಮ ಗತವೈಭವಕ್ಕೆ ಮರಳತೊಡಗಿವೆ.

Advertisement

Udayavani is now on Telegram. Click here to join our channel and stay updated with the latest news.

Next