ವಿಟ್ಲ: ದೇವಸ್ಥಾನವು ಪ್ರೀತಿ ಪ್ರೇಮ ಹರಡುವ ಕೇಂದ್ರವಾಗಬೇಕು. ಸನಾತನ ಹಿಂದೂ ಧರ್ಮದ ಸಂಪ್ರದಾಯ ಪಾಲನೆಯಾಗಬೇಕು. ಪ್ರತೀ ಮನೆಯವರು ಹೂವು, ತುಳಸಿಯನ್ನು ಗ್ರಾಮದೇಗುಲಕ್ಕೆ ಸಮರ್ಪಿಸಬೇಕು. ಸ್ಥಳೀಯರು ತಂಡಗಳಾಗಿ ನಿಗದಿತ ದಿನಗಳಂದು ದೇಗುಲ ಶುಚಿತ್ವ ಇತ್ಯಾದಿ ಸೇವೆ ಸಲ್ಲಿಸಿ, ಭಜನೆ ನಡೆಸಿ, ಪ್ರಸಾದ ಪಡೆದು ತೆರಳಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಅವರು ಮಂಗಳವಾರ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮಾಡ ಶಿಬರಿಕಲ್ಲ ಶ್ರೀ ಮಲರಾಯ – ಮೂವರ್ ದೈವಂಗಳ ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ಹೊರನಾಡು ಶ್ರೀ ಆದಿಶಕ್ತಾತ್ಮಕ ಅನ್ನಪೂರ್ಣೇಶ್ವರೀ ದೇವಸ್ಥಾನದ ಧರ್ಮಕರ್ತ ಡಾ| ಭೀಮೇಶ್ವರ ಜೋಷಿ ಧಾರ್ಮಿಕ ಉಪನ್ಯಾಸ ನೀಡಿ, ಬ್ರಹ್ಮಕಲಶದೊಂದಿಗೆ ಪ್ರತಿಯೊಬ್ಬನ ಅಂತರಂಗದ ಶುದ್ಧೀಕರಣ ಆಗಬೇಕಾಗಿದೆ. ಎಲ್ಲರೂ ಸದಾ ಅನ್ಯೋನ್ಯ ಪ್ರೀತಿ, ಸೌಹಾರ್ದದಿಂದ ಬಾಳಬೇಕು ಎಂದರು.
ಮೂಲ್ಕಿ ಸೀಮೆ ಅರಸರಾದ ಎಂ. ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿದ್ದರು. ಮುಂಬಯಿಯ ಉದ್ಯಮಿ ಲೋಕನಾಥ ಶೆಟ್ಟಿ ಮರುವಾಳ, ಮಂಗಳೂರು ಮನಪಾ ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್, ಪುತ್ತೂರು ಮುಳಿಯ ಜುವೆಲರ್ಸ್‌ನ ಮುಳಿಯ ಶ್ಯಾಮ ಭಟ್, ಮಂಗಳೂರು ಮರಾಠಿ ಸಮಾಜ ಸೇವಾಸಂಘದ ಸ್ಥಾಪಕಾಧ್ಯಕ್ಷ ಎಂ.ಎ. ನಾಯಕ್, ಅಳಿಕೆ ನೆಕ್ಕಿತಪುಣಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಂ. ಸೀತಾರಾಮ, ಸುಳ್ಯ ತುಳು ತುಡರ್ ಕೂಟದ ಅಧ್ಯಕ್ಷ ಜೆ.ಕೆ.ರೈ, ನಟ ಪ್ರದೀಪ್ ಬಡೆಕ್ಕಿಲ, ಉದ್ಯಮಿ ದಿವಾಕರ ದಾಸ್ ನೇರ್ಲಾಜೆ, ಜೆಡ್ಡು ಶ್ರೀ ಆದಿಧನ್ವಂತರಿ ಕ್ಷೇತ್ರದ ಧರ್ಮದರ್ಶಿ ಡಾ| ಗಣಪತಿ ಭಟ್ ಜೆಡ್ಡು, ಯೋಗೀಶ್ ಕುಡ್ವ ಉಪಸ್ಥಿತರಿದ್ದರು.
ಸಮ್ಮಾನ
ಜೇನು ಸಾಕಾಣಿಕೆಯ ಪೂವಪ್ಪ ಪೂಜಾರಿ ಪಿಲಿಂಜ, ಮಾಜಿ ಸೈನಿಕ ಗೋಪಾಲಕೃಷ್ಣ ಭಟ್ ಕಾರ್ಯಾಡಿ, ಕರಾಟೆಪಟು ಅನನ್ಯಾ ನಾಟೆಕಲ್ಲು, ದೈವ ನರ್ತಕ ಹೊನ್ನಪ್ಪ ನಲಿಕೆ, ಶಿಕ್ಷಣ ಕ್ಷೇತ್ರದ ನಾರಾಯಣ ಪೂಜಾರಿ ಎಸ್.ಕೆ. ಅವರನ್ನು ಸಮ್ಮಾನಿಸಲಾಯಿತು. ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶದ ರೂವಾರಿ ಕೆ.ಟಿ. ವೆಂಕಟೇಶ್ವರ ನೂಜಿ ಅವರನ್ನು ಗ್ರಾಮಸ್ಥರು ವಿಶೇಷವಾಗಿ ಗೌರವಿಸಿದರು.
ರೇವತಿ ಕೆ. ಸ್ವಾಗತಿಸಿ, ನಾಗೇಶ್ ಪಾದೆ ಪ್ರಸ್ತಾವನೆಗೈದರು. ಯತೀಶ್ ಕೇದಗೆದಡಿ ವಂದಿಸಿದರು. ಶ್ರೀಪತಿ ನಾಯಕ್, ಜತ್ತಪ್ಪ ಅಡ್ಯಾಲು, ಚಿದಾನಂದ ಪೆಲತ್ತಿಂಜ, ಅಶ್ವಿನಿ ಕುಂಡಡ್ಕ ನಿರೂಪಿಸಿದರು.