ಗದಗ: ಅಂಗವಿಕಲತೆ ಶಾಪವಲ್ಲ, ಅದನ್ನು ಮೀರಿ ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡಬೇಕು. ಅವರಿಗೆ ಅಗತ್ಯ ಸೌಲಭ್ಯ ಒದಗಿಸುವುದು ಪ್ರತಿಯೊಂದು ಇಲಾಖೆಯ ಜವಾಬ್ದಾರಿ ಎಂದು ರಾಜ್ಯ ಅಂಗವಿಕಲ ಅಧಿನಿಯಮದ ಆಯುಕ್ತ ವಿ.ಎಸ್. ಬಸವರಾಜು ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳ, ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಆರೋಗ್ಯ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಶೇ. 40ಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರ ಪ್ರದೇಶಗಳಲ್ಲಿ ಅಂಗವಿಕಲರ ಸಂಖ್ಯೆ ಹೆಚ್ಚಿದ್ದು, ಅವರಿಗೆ ವಾಹನ ಸೌಲಭ್ಯ ಒದಗಿಸುವುದೇ ಮುಖ್ಯವಲ್ಲ. ಬದಲಾಗಿ ಪುನಚ್ಚೇತನ, ಸಬಲೀಕರಣದ ಮೂಲಕ ಅವರನ್ನು ಮುಖ್ಯವಾಹಿನಿಗೆ ಕರೆತರಬೇಕು. ಅದಕ್ಕಾಗಿ 1993ರ ಹಾಗೂ 2016ರ ಅಂಗವಿಕಲ ಕಾಯ್ದೆ ಯಥಾವತ್ತಾಗಿ ಅನುಷ್ಠಾನಗೊಳಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಸೂಚಿಸಿದರು.
ಎಲ್ಲ ಇಲಾಖೆಗಳು, ಸ್ಥಳೀಯ ನಗರಾಡಳಿತ ಸಂಸ್ಥೆಗಳು ತಮ್ಮ ಒಟ್ಟಾರೆ ಬಜೆಟ್‌ನಲ್ಲಿ ಶೇ. 5ರಷ್ಟು ಅನುದಾನ ಅಂಗವಿಕಲರಿಗಾಗಿ ಮೀಸಲಿಟ್ಟು ಅದನ್ನು ಬಳಸಬೇಕು. ಅದನ್ನು ಉಲ್ಲಂಘಿಸುವವರ ವಿರುದ್ಧ ಕಾನೂನಾತ್ಮಕ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಅಂಗವಿಕಲರಿಗಾಗಿ ಮೀಸಲಿರುವ ಶೇ. 5ರ ಅನುದಾನ ಬಳಕೆಯೊಂದಿಗೆ ಅವರಲ್ಲಿ ಮಾನಸಿಕ ಹಾಗೂ ಭೌತಿಕ ಬೆಳವಣಿಗೆಗೆ ಪ್ರಯತ್ನಿಸಬೇಕು. 0-6 ವಯಸ್ಸಿನಲ್ಲಿರುವ ಮಕ್ಕಳನ್ನು ಗುರುತಿಸಿ ಅಗತ್ಯ ತರಬೇತಿ, ಮಾರ್ಗದರ್ಶನ ನೀಡಬೇಕು ಎಂದರು.
ಲಕ್ಷ್ಮೇಶ್ವರ ನಗರದಲ್ಲಿ ನಡೆಸಿದ ಸಮೀಕ್ಷೆಯಲ್ಲಿ 728 ಅಂಗವಿಕಲರನ್ನು ಗುರುತಿಸಲಾಗಿದ್ದು, ಮಕ್ಕಳು ಹಾಗೂ ವಯೋವೃದ್ಧರಿಗೆ ಶಿಕ್ಷಣ, ಅಗತ್ಯ ಉಪಕರಣ ಸೌಲಭ್ಯ ನೀಡಲಾಗಿದೆ ಎಂದು ವಿವರಿಸಿದರು. ಇದೇ ವೇಳೆ ಸಮರ್ಪಕವಾಗಿ ಅಂಗವಿಕಲ ಸಮೀಕ್ಷೆ ನಡೆಸದ ಗದಗ- ಬೆಟಗೇರಿ ನಗರಸಭೆಯ ಕಾರ್ಯವೈಖರಿ ಕುರಿತು ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿ, ಶೀಘ್ರ ಸರಿಯಾದ ಕ್ರಮಕ್ಕೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಅಂಗವಿಕಲ ಅಧಿನಿಯಮದ ಉಪಾಯುಕ್ತ ಎಸ್.ಕೆ.ಪದ್ಮನಾಭ, ಅಂಗವಿಕಲ ಶಿಕ್ಷಣಸಂಸ್ಥೆಯ ಹಂಪಣ್ಣ, ಸೋಮನಾಥ ಮಹಾಜನ ಶೆಟ್ಟರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.