ಕಾಸರಗೋಡು: ಕೆಲವು ಹೆತ್ತವರು ತಮ್ಮ ಮಕ್ಕಳ ಬಗ್ಗೆ ಯಾವುದೇ ಕಾಳಜಿಯೂ ಇಲ್ಲದೆ ಬೇಕಾಬಿಟ್ಟಿ ಬಿಟ್ಟು ಬಿಡುವುದು ಸಾಮಾನ್ಯವಾಗಿದೆ. ಇದು ಎಷ್ಟು ಅಪಾಯಕಾರಿಯಾಗಿರುತ್ತದೆ ಎಂಬ ಬಗ್ಗೆಯೂ ಒಂದಿಷ್ಟು ಚಿಂತೇ ಮಾಡುವುದಿಲ್ಲ. ಮಕ್ಕಳ ಮೇಲಿನ ಅಜಾಗ್ರತೆಯಿಂದ ಎಷ್ಟೆಲ್ಲ ದುರಂತಗಳು ನಡೆದು ಹೋಗಿಲ್ಲ. ಆದರೂ ಮಕ್ಕಳ ಭವಿಷ್ಯದ ಬಗ್ಗೆ ಒಂದಿಷ್ಟು ಕಾಳಜಿಯಿಲ್ಲದೆ ಅದೆಷ್ಟೋ ಹೆತ್ತವರು ಅಪಾಯದ ಕೂಪಕ್ಕೆ ತಳ್ಳುತ್ತಲೇ ಇರುತ್ತಾರೆ ಎಂಬುದಕ್ಕೆ ಈ ಚಿತ್ರ ಸ್ಪಷ್ಟ ಉದಾಹರಣೆಯಾಗಿದೆ.
ಈ ಚಿತ್ರವನ್ನು ನೋಡಿದರೆ ಮಕ್ಕಳ ಪಾಲಿಗೆ ಎಷ್ಟು ಅಪಾಯಕಾರಿ ಎಂಬುದು ಅರಿವಾಗದೇ ಇರದು. ನಿಲ್ಲಿಸಿದ ಲಾರಿಯಡಿಯಲ್ಲಿ ಮಕ್ಕಳನ್ನು ಬಿಟ್ಟ ದೃಶ್ಯ ಕಂಡಾಗ ಈ ಮಕ್ಕಳ ಹೆತ್ತವರಿಗೆ ಒಂದಿಷ್ಟಾದರೂ ಕರುಣೆಯಿಲ್ಲವೆ ಎಂಬ ಪ್ರಶ್ನೆ ಕಾಡಿದ್ದರೆ ಅಚ್ಚರಿಪಡಬೇಕಾಗಿಲ್ಲ.
ಕಾಸರಗೋಡು ನಗರದ ನೆಲ್ಲಿಕುಂಜೆಯ ಗುಜರಿ ಅಂಗಡಿಯ ಮುಂಭಾಗದಲ್ಲಿ ನಿಲ್ಲಿಸಿರುವ ಲಾರಿಯಡಿಯಲ್ಲಿ ಆಟ ಆಡುತ್ತಿರುವ ಮಕ್ಕಳು ಯಾವುದೇ ಕ್ಷಣದಲ್ಲೂ ಅಪಾಯಕ್ಕೆ ತುತ್ತಾಗುವ ಸ್ಥಿತಿಯಿದ್ದರೂ ಈ ಮಕ್ಕಳ ಹೆತ್ತವರು ಒಂದಿಷ್ಟು ಚಿಂತಿಸಿಲ್ಲವೆ. ಎಳೆಯ ಕಂದಮ್ಮಗಳು ಲಾರಿಯ ಅಡಿಯಲ್ಲಿ ಆಟ ಆಡುತ್ತಿರುವ ದೃಶ್ಯವನ್ನು ಒಮ್ಮೆ ನೋಡಿ. ಲಾರಿಯ ಅಡಿಭಾಗದಲ್ಲಿ ಹರಡಿ ಬಿದ್ದಿರುವ ಕುಪ್ಪಿ ಚೂರುಗಳ ಮೇಲೆ ಏನು ಅರಿಯದ ಹಾಲುಗಲ್ಲದ ಮಕ್ಕಳನ್ನು ಆಟ ಆಡಲು ಬಿಟ್ಟಿದ್ದಾರೆಂದರೆ ಏನೆನ್ನಬೇಕು.
ಸಾಮಾನ್ಯವಾಗಿ ಲಾರಿ ಹಿಂದೆ ಸರಿದು ಅಥವಾ ಲಾರಿ ಅಡಿಯಲ್ಲಿ ಯಾರಿದ್ದಾರೆ ಎಂದು ಗಮನಿಸದೆ ಲಾರಿಯನ್ನು ಚಾಲನೆ ಮಾಡಿ ಮುಂದೆ ಸಾಗಿದರೆ ಈ ಮಕ್ಕಳ ಗತಿ ಏನು? ಈ ಮಕ್ಕಳ ಪರಿಸ್ಥಿತಿ ಏನಾಗಬಹುದು? ಹರಡಿ ಬಿದ್ದಿರುವ ಕುಪ್ಪಿ ಚೂರಿನ ಮೇಲೆ ಕೂತುಕೊಂಡು ಆಟ ಆಡುತ್ತಿರುವ ಈ ಮಕ್ಕಳಿಗೆ ಕುಪ್ಪಿ ಚೂರು ಮೈಗೆ ಚುಚ್ಚಿದರೆ ಅಪಾಯ ತಪ್ಪಿದ್ದಲ್ಲ. ಒಂದು ವರ್ಷದ ಕೆಳಗಿನ ಮಗು ಕೂಡಾ ಈ ಮಕ್ಕಳ ಜತೆಯಲ್ಲಿ ಆಟ ಆಡುತ್ತಿದೆ. ಈ ಹಾಲುಗಲ್ಲದ ಮಗುವಿಗೆ ಏನು ಗೊತ್ತು. ಈ ಕುಪ್ಪಿ ಚೂರು ಜೀವಕ್ಕೆ ಅಪಾಯ ತರಬಹುದೆಂದು. ಏನು ತಿಳಿಯದ ಈ ಮಗು ಕುಪ್ಪಿ ಚೂರನ್ನು ಬಾಯಿಗಿಳಿಸಿದರೆ ಹಸುಳೆಯ ಸ್ಥಿತಿ ಏನಾಗಬೇಕು?
ಮಕ್ಕಳ ಬಗ್ಗೆ ಸಾಕಷ್ಟು ಜಾಗೃತೆ ವಹಿಸ ಬೇಕಾದ ಹೆತ್ತ ಕರುಳು ಹೀಗೆ ಬೇಕಾ ಬಿಟ್ಟಿ ಮಕ್ಕಳನ್ನು ಸಿಕ್ಕಸಿಕ್ಕಲ್ಲಿ ಬಿಟ್ಟು ಬಿಡುವುದರಿಂದ ಸಂಭವಿಸ ಬಹುದಾದ ದುರಂತ ವನ್ನು ಮೈಮೇಲೆ ಎಳೆದುಕೊಂಡಂತೆ ಅಲ್ಲವೆ?
ಈಗಾಗಲೇ ಲಾರಿ ಅಡಿ ನಿದ್ದೆ ಮಾಡಿದ್ದು ತಿಳಿಯದೆ ಚಾಲಕ ಲಾರಿಯನ್ನು ಮುಂದಕ್ಕೆ ಸಾಗಿಸಿದ ಘಟನೆಯಿಂದ ಹಲವಾರು ಮಂದಿ ಅಮಾಯಕರು ಜೀವ ತೆತ್ತ ಘಟನೆಗಳು ನಮ್ಮ ಕಣ್ಣ ಮುಂದಿವೆ. ಹೀಗಿದ್ದರೂ ಈ ಹಸುಳೆಗಳನ್ನು ಲಾರಿಯಡಿಯಲ್ಲಿ ಆಟ ಆಡಲು ಬಿಟ್ಟು ತಮ್ಮ ಪಾಡಿಗೆ ತಾವು ಎಂಬಂತೆ ವರ್ತಿಸುತ್ತಿರುವ ಹೆತ್ತವರ ಬಗ್ಗೆ ಕೋಪ ಬಾರದೇ ಇರದು. ಈ ಮಕ್ಕಳ ಬಗ್ಗೆ ಸ್ವಲ್ಪವಾದರೂ ಜಾಗ್ರತೆ ಬೇಡವೇ? ಹೆತ್ತ ಕರಳು ಈ ಮಕ್ಕಳನ್ನು ಹೀಗೆ ಬಿಟ್ಟರೆ ಹೇಗೆ?
ಮಕ್ಕಳನ್ನು ಹೆತ್ತುಬಿಟ್ಟರೆ ಸಾಲದು. ಪ್ರತಿಘಳಿಗೆಯೂ ಅವರ ಸುರಕ್ಷೆಯತ್ತ ಚಿಂತಿಸುವ ಮನೋಭಾವ, ಕಳಕಳಿ ಬೇಕು. ಅವಘಡಗಳಿಂದ ಮಕ್ಕಳನ್ನು ಕಳೆದುಕೊಂಡು ರೋದಿಸುವ ಮೊದಲು ಎಚ್ಚರಿಕೆ ಅತ್ಯಂತ ಅಗತ್ಯ.
– ಪ್ರದೀಪ್ ಬೇಕಲ್