Advertisement

ರೆಸಾರ್ಟ್‌ ರಾಜಕಾರಣ ನೈತಿಕ ಅಧಃಪತನದ ಸಂಕೇತ ಕರ್ನಾಟಕ ಕುಖ್ಯಾತ

06:45 AM Jul 31, 2017 | |

ರೆಸಾರ್ಟ್‌ ರಾಜಕಾರಣಕ್ಕೆ ಅತ್ಯಂತ ಕುಖ್ಯತವಾಗಿರುವುದು ಮತ್ತು ರೆಸಾರ್ಟ್‌ ರಾಜಕಾರಣ ಮಾಡುವವರು ಅಚ್ಚುಮೆಚ್ಚಿನ ತಾಣ ಕರ್ನಾಟಕ ಎನ್ನುವುದು ದುರದೃಷ್ಟಕರ ವಿಚಾರ. 

Advertisement

ಗುಜರಾತ್‌ನ  ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕರ ಕುದುರೆ ವ್ಯಾಪಾರ ತಪ್ಪಿಸುವ ಸಲುವಾಗಿ 44 ಕಾಂಗ್ರೆಸ್‌ ಶಾಸಕರನ್ನು ತಂದು ಕರ್ನಾಟಕದ ಭವ್ಯ ರೆಸಾರ್ಟ್‌ನಲ್ಲಿಟ್ಟಿರುವ ಬೆಳವಣಿಗೆ ರೆಸಾರ್ಟ್‌ ರಾಜಕಾರಣವನ್ನು ಮತ್ತೂಮ್ಮೆ ಮುನ್ನೆಲೆಗೆ ತಂದಿದೆ. ಸದ್ಯದಲ್ಲೇ ಗುಜರಾತಿನಿಂದ ಮೂವರು ರಾಜ್ಯಸಭೆಗೆ ಆಯ್ಕೆಯಾಗಿ ಹೋಗಲಿದ್ದಾರೆ. ಸದ್ಯದ ಸಂಖ್ಯಾಬಲದ ಪ್ರಕಾರ ಬಿಜೆಪಿಯ ಇಬ್ಬರು ಮತ್ತು ಕಾಂಗ್ರೆಸ್‌ನ ಒಬ್ಬರಿಗೆ ರಾಜ್ಯಸಭೆ ಪ್ರವೇಶಿಸಲು ಅವಕಾಶವಿದೆ. ಬಿಜೆಪಿಯಿಂದ ಅಮಿತ್‌ ಶಾ ಮತ್ತು ಸ್ಮತಿ ಇರಾನಿ ಆಯ್ಕೆಯಾಗುವುದು ಬಹುತೇಕ ಖಚಿತಗೊಂಡಿದೆ. ಕಾಂಗ್ರೆಸ್‌ ಸೋನಿಯಾ ಗಾಂಧಿಯ ಪರಮಾಪ್ತ ಮತ್ತು ಕಾಂಗ್ರೆಸ್‌ನ ಪ್ರಭಾವಿ ನಾಯಕ ಅಹ್ಮದ್‌ ಪಟೇಲ್‌ ಅವರನ್ನು ಮರಳಿ ಕಣಕ್ಕಿಳಿಸಿದೆ. ಆದರೆ ಪಟೇಲರನ್ನು ಸೋಲಿಸಿ ಕಾಂಗ್ರೆಸ್‌ಗೆ ಆ ಮೂಲಕ ಸೋನಿಯಾಗೆ ಮುಖಭಂಗ ಉಂಟು ಮಾಡಬೇಕೆಂದು ಬಯಸಿರುವ ಬಿಜೆಪಿ ಇದಕ್ಕಾಗಿ ಕಾಂಗ್ರೆಸ್‌ ಶಾಸಕರನ್ನು ಸೆಳೆಯುವ ಕೆಲಸದಲ್ಲಿ ತೊಡಗಿದೆ. ಈಗಾಗಲೇ ಆರು ಶಾಸಕರು ಕಾಂಗ್ರೆಸ್‌ ಪಾಳಯ ತ್ಯಜಿಸಿ ಆಗಿದೆ. ಚುನಾವಣೆ ಆಗುವಾಗ ಇನ್ನಷ್ಟು ಶಾಸಕರು ನಿಷ್ಠೆ ಬದಲಾಯಿಸುವುದನ್ನು ತಪ್ಪಿಸುವ ಸಲುವಾಗಿ ಹೈಕಮಾಂಡ್‌ ಉಳಿದಿರುವ 44 ಶಾಸಕರನ್ನು ಕರ್ನಾಟಕಕ್ಕೆ ರವಾನಿಸಿ ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವ ಹೊಣೆಯನ್ನು ಕರ್ನಾಟಕ ಕಾಂಗ್ರೆಸ್‌ಗೆ ವಹಿಸಿದೆ. 

ದೇಶಕ್ಕೆ ರೆಸಾರ್ಟ್‌ ರಾಜಕೀಯ ವನ್ನು ಪರಿಚಯಿಸಿದ ಅಪಕೀರ್ತಿ  ಆಂಧ್ರದ ಶೋಮ್ಯಾನ್‌ ರಾಜಕಾರಣಿ ಎನ್‌. ಟಿ. ರಾಮರಾವ್‌ಗೆ ಸಲ್ಲುತ್ತದೆ. 33 ವರ್ಷಗಳ ಹಿಂದೆ ರಾಮರಾವ್‌ ತನ್ನ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ತನಗೆ ನಿಷ್ಠರಾಗಿದ್ದ ಶಾಸಕರನ್ನು ಕರೆದುಕೊಂಡು ಕರ್ನಾಟಕಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆಯವರ ಸರಕಾರವಿತ್ತು. ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ತಮಿಳುನಾಡು, ಜಾಖಂìಡ್‌ ಸೇರಿ ಹಲವು ರಾಜ್ಯಗಳಲ್ಲಿ ಕಾಲಕಾಲಕ್ಕೆ ರೆಸಾರ್ಟ್‌ ರಾಜಕಾರಣ ನಡೆದಿದೆ. ಆದರೆ ರೆಸಾರ್ಟ್‌ ರಾಜಕಾರಣಕ್ಕೆ ಅತ್ಯಂತ ಕುಖ್ಯತವಾಗಿರುವುದು ಮತ್ತು ರೆಸಾರ್ಟ್‌ ರಾಜಕಾರಣ ಮಾಡುವವರು ಅಚ್ಚುಮೆಚ್ಚಿನ ತಾಣ ಕರ್ನಾಟಕ ಎನ್ನುವುದು ದುರದೃಷ್ಟಕರ ವಿಚಾರ. 

ರಾಜ್ಯದ ಮೂರು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿ(ಎಸ್‌) ರೆಸಾರ್ಟ್‌ ರಾಜಕೀಯದಲ್ಲಿ ನಿಷ್ಣಾತ ಎನಿಸಿಕೊಂಡಿವೆ. ಇಲ್ಲಿ ರಾಜ್ಯ ರಾಜಕಾರಣ ಮಾತ್ರವಲ್ಲದೆ ಎಪಿಎಂಸಿ ಚುನಾವಣೆಗೂ ರೆಸಾರ್ಟ್‌ ರಾಜಕಾರಣ ಮಾಡಲಾಗಿದೆ ಎನ್ನುವುದು ಕನ್ನಡಿಗರು ತಲೆತಗ್ಗಿಸುವ ವಿಷಯ. 2004, 2006, 2009, 2010 ಹಾಗೂ 2011ರಲ್ಲಿ ಕರ್ನಾಟಕದಲ್ಲಿ ರೆಸಾರ್ಟ್‌ ರಾಜಕಾರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ವಿಶೇಷ ಎಂದರೆ ಒಂದೇ ಪಕ್ಷದ ವಿವಿಧ ನಾಯಕರು ತಮ್ಮ ಪರವಾಗಿರುವ ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಿ ಗೃಹ ಬಂಧನದಲ್ಲಿರಿಸಿದ ವಿದ್ಯಮಾನಕ್ಕೂ ಈ ರಾಜ್ಯ ಸಾಕ್ಷಿಯಾಗಿದೆ. ಇಂತಹ ಒಂದು ರೆಸಾರ್ಟ್‌ ರಾಜಕಾರಣ ನಡೆದಿರುವುದು ಬಿಜೆಪಿಯಲ್ಲಿ. ಮುಖ್ಯಂತ್ರಿಯಾಗಿದ್ದ ಯಡಿಯೂರಪ್ಪನವರನ್ನು ಕೆಳಗಿಳಿಸಲು ಜನಾರ್ದನ ರೆಡ್ಡಿ ಒಂದಷ್ಟು ಶಾಸಕರನ್ನು ರೆಸಾರ್ಟ್‌ಗೆ ಸಾಗಿಸಿದ್ದು ಒಂದು ಘಟನೆಯಾದರೆ ಇನ್ನೊಮ್ಮೆ ಸ್ವತಃ ಯಡಿಯೂರಪ್ಪನವರೇ ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಯಬೇಕಾಗಿ ಬಂದಾಗ ತನ್ನ ಬೆಂಬಲಿಗರಾಗಿದ್ದ ಸುಮಾರು 60 ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಿದ್ದರು.

ಇದೇ ರೆಸಾರ್ಟ್‌ಗೆ ಈಶ್ವರಪ್ಪ ತನ್ನ ಬೆಂಬಲಿಗ ಶಾಸಕರೊಂದಿಗೆ ಹೋಗಿ ಪರಸ್ಪರ ಮುಖಾಮುಖೀಯಾದದ್ದು ಇನ್ನೊಂದು ರಾಜಕೀಯ ಪ್ರಹಸನ.  ಜನಪ್ರತಿನಿಧಿಗಳನ್ನು ರೆಸಾರ್ಟ್‌ ಮತ್ತು ಹೋಟೆಲ್‌ಗ‌ಳಲ್ಲಿ ಕೂಡಿಡುವುದು ರಾಜಕೀಯ ನೈತಿಕತೆಯ ಅಧಃಪತನದ ಪರಮಾವಧಿ. ಒಂದು ಪಕ್ಷದ ಟಿಕೇಟಿನಲ್ಲಿ ಸ್ಪರ್ಧಿಸಿ ಗೆದ್ದು ಬಂದಿರುವ ಶಾಸಕರು ಹಣ, ಹುದ್ದೆ ಮತ್ತಿತರ ಆಮಿಷಗಳಿಗೆ ಬಲಿಯಾಗಿ ಇನ್ನೊಂದು ಪಕ್ಷಕ್ಕೆ ನಿಷ್ಠೆ ಬದಲಾಯಿಸುವುದು ಮತ ಹಾಕಿ ಕಳುಹಿಸಿದ ಜನರಿಗೆ ಮಾಡುವ ಮೋಸ ಎಂದು ಅವರಿಗೆ ಅನ್ನಿಸುವುದಿಲ್ಲ. ಬದ್ಧತೆ, ನೀತಿ ನಿಷ್ಠೆ ಮತ್ತು ಪಕ್ಷದ ಸಿದ್ಧಾಂತಗಳ ಮೇಲೆ ಕಿಂಚಿತ್‌ ಗೌರವವೂ ಇಲ್ಲದ ನಾಯಕರನ್ನು ಗೆಲ್ಲಿಸಿದ ತಪ್ಪಿಗೆ ದೇಶದ ಜನರು ಈ ಕೊಳಕು ಪ್ರಹಸನವನ್ನು ಸಹಿಸಿಕೊಳ್ಳಬೇಕಾಗಿ ಬಂದಿರುವುದು ಪ್ರಜಾಪ್ರಭುತ್ವದ ದುರಂತ.

Advertisement
Advertisement

Udayavani is now on Telegram. Click here to join our channel and stay updated with the latest news.

Next