Advertisement

ಮೀಸಲು ಶೇ.70ಕ್ಕೆ ಏರಿಕೆ ಸಿಎಂ ಪೊಳ್ಳು ಭರವಸೆ

11:57 AM Oct 08, 2017 | Team Udayavani |

ಬೆಂಗಳೂರು: ಮೀಸಲು ಪ್ರಮಾಣ ಶೇ.50 ಮೀರಬಾರದೆಂದು ಸುಪ್ರೀಂಕೋರ್ಟ್‌ನ ಆದೇಶವಿದ್ದರೂ ಮೀಸಲಾತಿ ಪ್ರಮಾಣವನ್ನು ಶೇ. 70ಕ್ಕೆ ಹೆಚ್ಚಿಸುವ ಭರವಸೆ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರನ್ನು ಮರುಳು ಮಾಡುವ ಯತ್ನಕ್ಕೆ ಕೈ ಹಾಕಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ .ಯಡಿಯೂರಪ್ಪ ಟೀಕಿಸಿದ್ದಾರೆ.

Advertisement

ಮೀಸಲಾತಿ ಪ್ರಮಾಣ ಹೆಚ್ಚಿಸುವ ನಿಜವಾದ ಬದ್ಧತೆ ಸಿದ್ದರಾಮಯ್ಯನವರಿಗೆ ಇದ್ದಿದ್ದರೆ ಅಧಿಕಾರಕ್ಕೆ ಬಂದದಿನದಿಂದಲೇ ಪ್ರಯತ್ನಿಸಬೇಕಿತ್ತು. ಆದರೆ, ಚುನಾವಣೆ ಸಮಯದಲ್ಲಿ ಮೀಸಲಾತಿ ಪ್ರಮಾಣ ಶೇ.70ಕ್ಕೆ ಹೆಚ್ಚಿಸುವ
ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಶನಿವಾರ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ಮೀಸಲಾತಿ ಪ್ರಮಾಣ ಹೆಚ್ಚಿಸುವ ಪ್ರಯತ್ನವನ್ನು ನಾಲ್ಕು ವರ್ಷಗಳಿಂದ ಏಕೆ ಮಾಡಿಲ್ಲ? ಎಷ್ಟು ದಿನ ಜನರನ್ನು ಮರುಳು ಮಾಡುತ್ತೀರಾ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದ ಯಡಿಯೂರಪ್ಪ, ಸುಪ್ರೀಂ ಆದೇಶಕ್ಕಿಂತಲೂ ಹೆಚ್ಚು ಅಧಿಕಾರವಿದೆ ಎಂಬ ಭ್ರಮೆಯಲ್ಲಿರುವ ಅವರು ಚುನಾವಣೆ ವರ್ಷದಲ್ಲಿ ಇಂತಹ ಸುಳ್ಳು ಭರವಸೆ ಕೊಡುವುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು
ವ್ಯಂಗ್ಯವಾಡಿದರು.

ಶ್ವೇತಪತ್ರಕ್ಕೆ ಆಗ್ರಹ: ಹಿಂದುಳಿದ ವರ್ಗದ ಜನರ ಸರದಾರ ಎಂದು ಜನರನ್ನು ಮರುಳು ಮಾಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ನಾಯಕರು ಕಳೆದ ನಾಲ್ಕು ವರ್ಷಗಳಲ್ಲಿ ಈ ಸಮುದಾಯಕ್ಕಾಗಿ ಏನು ಮಾಡಿದ್ದಾರೆಂಬ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಅವರು ಇದೇ ವೇಳೆ ಆಗ್ರಹಿಸಿದರು. ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಮಾತನಾಡಿ, ಹಿಂದುಳಿದ ವರ್ಗದವರಿಗಾಗಿ ಮೀಸಲಿಟ್ಟ ಅನುದಾನದಲ್ಲಿ ಶೇ.40ರಷ್ಟನ್ನೂ ಖರ್ಚು ಮಾಡದೆ ವಂಚಿಸಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಡಿಯೂರಪ್ಪ ಸರ್ಕಾರ ನೀಡಿದ್ದಕ್ಕಿಂತ ಕಡಿಮೆ ಅನುದಾನ ನೀಡಿದೆ ಎಂದು ಆರೋಪಿಸಿದರು.

ಕೈಹಿಡಿದವರನ್ನೇ ತುಳಿದವರು: ಮೋರ್ಚಾದ ಪ್ರಭಾರಿ ಮತ್ತು ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ
ಮಾತನಾಡಿ, ತಮ್ಮನ್ನು ಕಾಂಗ್ರೆಸ್‌ಗೆ ಕರೆತಂದು ಮುಖ್ಯಮಂತ್ರಿಯನ್ನಾಗಿ ಮಾಡಿದ ಹಿಂದುಳಿದ ಸಮುದಾಯದ ಎಚ್‌.ವಿಶ್ವನಾಥ್‌ರಿಗೆ ಮತ ಹಾಕಬೇಡಿ ಎಂದು ಹಾಗೂ ಕಾಂಗ್ರೆಸ್‌ನ ನೇತೃತ್ವ ವಹಿಸುವಲ್ಲಿ ಸಹಕರಿಸಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸುವಂತೆ ಕುರುಬ ಸಮುದಾಯದವರಿಗೆ ಕರೆ ನೀಡಿದ್ದ ಸಿಎಂ ಸಿದ್ದರಾಮಯ್ಯರಿಂದ ಹಿಂದುಳಿದ ಸಮುದಾಯದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಮೋರ್ಚಾದ ಮುಖಂಡರಾದ ವರ್ತೂರು ಶ್ರೀಧರ್‌, ರಾಮರಾವ್‌ ರಾಯ್ಕರ್‌, ಲಕ್ಷ್ಮಣ್‌, ಮಾಜಿ ಶಾಸಕರಾದ ನೆ.ಲ.ನರೇಂದ್ರಬಾಬು, ಹುಲಿನಾಯ್ಕರ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next