ಮುದ್ದೇಬಿಹಾಳ: ಕಂದಾಯ ಇಲಾಖೆಯ ಆಡಳಿತ ಸುಧಾರಣೆಗೆ ಹಾರ್ನಳ್ಳಿ ರಾಮಸ್ವಾಮಿ ಅಧ್ಯಕ್ಷತೆಯ ಮೊದಲ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ವರದಿಗಳ ಶಿಫಾರಸನ್ನು ಅನುಷ್ಠಾನಗೊಳಿಸುವುದು ಮತ್ತು ತಮ್ಮ ಬೇಡಿಕೆ ಈಡೇರಿಕೆ ಕುರಿತು ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಮುದ್ದೇಬಿಹಾಳ ತಾಲೂಕು ಘಟಕದ ಸದಸ್ಯರು ತಹಶೀಲ್ದಾರ್ ಬಿ.ಎಸ್. ಕಡಕಭಾವಿ ಅವರಿಗೆ ಮನವಿ ಸಲ್ಲಿಸಿದರು.
ಶಿಫಾರಸು ಕುರಿತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಎಲ್ಲ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ವರದಿ ನೀಡುವಂತೆ ಸೂಚಿಸಿದ್ದಾರೆ. ಈಗಾಗಲೇ ಪ್ರಾದೇಶಿಕ ಆಯುಕ್ತರು ಸಲ್ಲಿಸಿರುವ ವರದಿಯಲ್ಲಿನ ಎಲ್ಲ ಅಂಶಗಳಿಗೂ ಸಂಘವು ಆಕ್ಷೇಪಣೆ ಸಲ್ಲಿಸುತ್ತದೆ ಎಂದು ತಿಳಿಸಿ ಪ್ರತಿಯೊಂದು ಶಿಫಾರಸಿಗೂ ಸಕಾರಣ ಸಹಿತ ಆಕ್ಷೇಪಣೆಯ ವಿವರಗಳನ್ನು ಮನವಿಯಲ್ಲಿ ತಿಳಿಸಲಾಗಿದೆ.
ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಸಂಖ್ಯೆಯನ್ನು ಸೀಮಿತಗೊಳಿಸುವುದು, ಗ್ರಾಮ ಲೆಕ್ಕಾಧಿಕಾರಿಗಳ 3101 ಹುದ್ದೆಗಳನ್ನು ಹೆಚ್ಚುವರಿ ಎಂದು ಪರಿಗಣಿಸಿ ಹಾಗೆ ಹೆಚ್ಚುವರಿಯಾದವರನ್ನು ಗ್ರಾಪಂಗಳಲ್ಲಿ ಖಾಲಿ ಇರುವ ಕಾರ್ಯದರ್ಶಿ ಹುದ್ದೆಗೆ ಮರು ನೇಮಿಸುವುದು, ಗ್ರಾಮ ಲೆಕ್ಕಾಧಿಕಾರಿಗಳನ್ನೂ ಸಹ ಭೂಮಾಪನ ವಿಧಾನಗಳಲ್ಲಿ ತರಬೇತಿಗೊಳಿಸಿ ಅವರು ದ್ವಿತೀಯ ದರ್ಜೆ ಮಾಪಕರಾಗಿ ಕಾರ್ಯನಿರ್ವಹಿಸುವುದು ಹಾಗೂ ಗ್ರಾಮ ಸಹಾಯಕರ ಹುದ್ದೆಗಳನ್ನು ರದ್ದುಪಡಿಸುವುದರ ಬಗ್ಗೆ ಆಡಳಿತ ಸುಧಾರಣಾ ಆಯೋಗ ವರದಿ ಸಲ್ಲಿಸಿದ್ದು ಇದಕ್ಕೆ ಆಕ್ಷೇಪಣೆಯ ವರದಿ ನೀಡುವುದು ಹೀಗೆ ಒಟ್ಟು 4 ಪ್ರಮುಖ ಶಿಫಾರಸುಗಳಿಗೆ ಸಂಘದ ತಕರಾರುಗಳನ್ನು ಮನವಿ ಪತ್ರದಲ್ಲಿ ವಿವರಿಸಲಾಗಿದೆ.
ಕಂದಾಯ ಇಲಾಖೆಯು ಎಲ್ಲ ಇಲಾಖೆಗಳ ಮಾತೃ ಇಲಾಖೆಯಾಗಿದೆ. ಆಯೋಗವು ಕಂದಾಯ ಇಲಾಖೆಯ ಆಡಳಿತ ಯಂತ್ರಕ್ಕೆ ಸಂಬಂಧಿಸಿದಂತೆ ಕೆಲವು ವ್ಯತಿರಿಕ್ತ ವರದಿಗಳನ್ನು ನೀಡಿದ್ದು ಅವುಗಳನ್ನು ಜಾರಿಗೊಳಿಸಬಾರದು ಮತ್ತು ಈ ಬಗ್ಗೆ ಶಿಫಾರಸು ಮಾಡಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಂಘದ ಅಧ್ಯಕ್ಷ ಗಂಗಾಧರ ಜೂಲಗುಡ್ಡ, ಪ್ರಧಾನ ಕಾರ್ಯದರ್ಶಿ ಸಂಜು ಜಾಧವ, ಸದಸ್ಯರಾದ ಎಸ್.ಬಿ.ಗೌಡರ, ಕೆ.ಎಂ. ಆಲಗೂರ, ಆರ್.ಎಸ್.ನಾಯ್ದೊಡಿ, ಎ.ಬಿ.ಬಳವಾಟ, ಎ.ಎನ್.ಪೂಜಾರ, ವಿ.ಸಿ.ವಾಲಿಕಾರ, ಬಿ.ಎಸ್.ಕೊಪ್ಪದ, ಕೆ.ಗಂಗಮ್ಮ, ಸಿ.ಬಿ.ಚವ್ಹಾಣ, ಆರ್.ಎನ್. ಮುಲ್ಲಾ, ಆರ್.ಎಸ್.ಹೊಸೂರ, ವೈ. ಎಂ.ವಾಘೇ, ಎ.ಎಸ್.ಬಾಬಾನಗರ, ಡಿ.ಎಸ್.ಮಠಪತಿ ಇದ್ದರು.