Advertisement

ಉಪ್ಪು ನೀರಿನ ವರದಿ ಬಹಿರಂಗ ಮಾಡಲು ಗ್ರಾಮಸ್ಥರ ಆಗ್ರಹ

04:16 PM Feb 22, 2017 | Team Udayavani |

ಉಳ್ಳಾಲ: ಉಚ್ಚಿಲ ಪರಿಸರದ ಬಾವಿಗಳಲ್ಲಿ ಉಪ್ಪು ನೀರಿನ ಸಮಸ್ಯೆಯ ಅಧ್ಯಯನ ವರದಿಯ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಬೇಕು ಹಾಗೂ ಗ್ರಾಮ ಸಭೆಯಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗವಹಿಸುವಂತೆ ಪಂಚಾಯತ್‌ನಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಸೋಮವಾರ ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಜರಗಿದ ಸೋಮೇಶ್ವರ ಪಂಚಾಯತ್‌ನ 2016-17ನೇ ಸಾಲಿನ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು  ಆಗ್ರಹಿಸಿದರು.

Advertisement

ಉಚ್ಚಿಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಸಮುದ್ರ ತೀರದ ಬಾವಿಗಳಲ್ಲಿ ಉಪ್ಪಿನಿಂದ ಕೂಡಿದ ನೀರು ಕುಡಿಯಲು ಯೋಗ್ಯವೇ ಎಂಬ ಬಗ್ಗೆ ಆರೋಗ್ಯ ಇಲಾಖೆ ನಡೆಸಿದ ಪರೀಕ್ಷೆಯ ವರದಿ ಇನ್ನೂ ಸ್ಥಳೀಯರಿಗೆ ಸಿಕ್ಕಿಲ್ಲ. ಈ ಬಗ್ಗೆ ಪಂಚಾಯತ್‌ ಅಥವಾ ಆರೋಗ್ಯ ಇಲಾಖೆ ಮಾಹಿತಿ ನೀಡಬೇಕು ಎಂದು ಸ್ಥಳೀಯರಾದ  ಶಂಸುದ್ದೀನ್‌  ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆ ಅಧಿಕಾರಿ,  ಪ್ರತಿ  ಬಾವಿಯ ವರದಿ ಬೇರೆ ಬೇರೆ ರೀತಿಯಲ್ಲಿದ್ದು, ಇದಕ್ಕೆ ಸಂಬಂಧಿಸಿ ನಿಖರ ವರದಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಹೆಚ್ಚು ಜನಸಂಖ್ಯೆ ಮತ್ತು ದೊಡ್ಡ ಪಂಚಾಯತ್‌ ಎನಿಸಿಕೊಂಡಿರುವ   ಸೋಮೇಶ್ವರದ ಗ್ರಾಮಸಭೆಗೆ ಸಾರಿಗೆ ಅಧಿಕಾರಿಗಳು ಗೈರು ಹಾಜರಾಗಿರುವುದು ಸರಿಯಲ್ಲ. ಸಾರಿಗೆಗೆ ಸಂಬಂಧಿಸಿದ ನಮ್ಮ ಪ್ರಶ್ನೆಗೆ ಉತ್ತರಿಸುವವರ್ಯಾರು?  ಸಭೆಯಲ್ಲಿ ಎಲ್ಲ ಅಧಿಕಾರಿಗಳು ಭಾಗವಹಿಸುವಂತೆ ಪಂಚಾಯತ್‌ ನಿರ್ಣಯ ಕೈಗೊಳ್ಳಬೇಕು ಎಂದು ಗ್ರಾಮಸ್ಥ ಸಿದ್ಧಾರ್ಥ್ ಸಲಹೆ ನೀಡಿದರು.

ಪಂಚಾಯತ್‌ ಸದಸ್ಯರು ಕುಳಿತುಕೊಳ್ಳಲು ಬೇರೆ ವ್ಯವಸ್ಥೆ ಮಾಡಬೇಕು. ಇದರಿಂದ ಆಯಾಯ ವಾರ್ಡುಗಳ ಸಮಸ್ಯೆಯೂ ಅವರಿಗೆ ಮನವರಿಕೆ ಆಗುತ್ತದೆ,  ಅವರ ಉಪಸ್ಥಿತಿಯೂ  ಸ್ಪಷ್ಟವಾಗುತ್ತದೆ ಎಂಬ  ಗ್ರಾಮಸ್ಥ  ಶೇಖರ್‌ ಸಲಹೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ರಾಜೇಶ್‌ ಉಚ್ಚಿಲ್‌, ಸದಸ್ಯರ ಸಂಖ್ಯೆ ಹೆಚ್ಚಿರುವುದರಿಂದ ಎಲ್ಲರೂ ವೇದಿಕೆಯಲ್ಲಿರುವುದು ಅಸಾಧ್ಯ. ಹಿಂದಿನ ಗ್ರಾಮಸಭೆಯಲ್ಲಿ ಮಾಹಿತಿ ನೀಡುವವರು ಮಾತ್ರ ವೇದಿಕೆಯಲ್ಲಿದ್ದರೆ ಸಾಕು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ ಎಂದರು.

ಪಂಚಾಯತ್‌ ವ್ಯಾಪ್ತಿಯಲ್ಲಿ ತ್ಯಾಜ್ಯ ಹಾಗೂ ಚರಂಡಿ ವ್ಯವಸ್ಥೆಯನ್ನು  ಕಲ್ಪಿಸಬೇಕು ಎಂಬ ಆಗ್ರಹವೂ ಕೇಳಿ ಬಂತು.
ಬಿಪಿಎಲ್‌ ಕಾರ್ಡು ಹೊಂದಿದವರಿಗೆ ಸದ್ಯ ಗೋಧಿ ಇಲ್ಲ, ಅಕ್ಕಿ ಮಾತ್ರ ಪೂರೈಕೆಯಾಗುತ್ತಿದೆ. ತಲಾ ವ್ಯಕ್ತಿಗೆ 5 ಕೆ.ಜಿ.ಯಷ್ಟು ಉಚಿತ ಅಕ್ಕಿ ವಿತರಿಸುತ್ತಿದ್ದು, ಜನಸಂಖ್ಯೆ ಆಧಾರದಡಿ ಆರು ಜನರಿರುವ ಕುಟುಂಬಕ್ಕೆ  ಮಾತ್ರ ಬಿಪಿಎಲ್‌ ಕಾರ್ಡಿನ ಸವಲತ್ತುಗಳನ್ನು ಒದಗಿಸಬಹುದು. ಇದರ ಜತೆಗೆ ಸೂರ್ಯಕಾಂತಿ ಎಣ್ಣೆ ಹಾಗೂ ಒಂದು ಕೆ.ಜಿ. ಉಪ್ಪು ಮತ್ತು ಸೀಮೆಎಣ್ಣೆಯನ್ನು ವಿತರಿಸಲಾಗುತ್ತಿದೆ. ಸೀಮೆಎಣ್ಣೆಯನ್ನು ಕಡಿಮೆ ಬಳಸಿ ಎಲ್‌ಪಿಜಿಯನ್ನು ಹೆಚ್ಚು ಬಳಸಬೇಕೆಂಬ ಸರಕಾರದ ಆದೇಶವನ್ನು ಆಹಾರ ಇಲಾಖೆ ಅಧಿಕಾರಿ  ತಿಳಿಸಿದರು.

Advertisement

ರಸ್ತೆ ಸುರಕ್ಷತೆ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಯ ದಯಾನಂದ  ಮಾಹಿತಿ ನೀಡಿ,  ಬ್ಯಾರಿಕೇಡ್‌ಗಳ ಸಂಖ್ಯೆಯೂ ಕಡಿಮೆಯಿದೆ, ಕೆಲವು ಹಾನಿಗೀಡಾಗುತ್ತಿವೆ.  ಹೆಚ್ಚುವರಿ ಬ್ಯಾರಿಕೇಡ್‌ ಪೂರೈಕೆಯಾಗುತ್ತಿಲ್ಲ. ಅಮಿತ ವೇಗದಲ್ಲಿ ಸಂಚರಿಸುವ ವಾಹನಗಳ ಬಗ್ಗೆ ಮಾಹಿತಿ ನೀಡಬೇಕಲ್ಲದೆ, ಹೆತ್ತವರು ಮಕ್ಕಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಸೋಮೇಶ್ವರ ಸಮುದ್ರ ತೀರದಲ್ಲಿ   ವಾರದಲ್ಲಿ ಮೂರು ದಿನಗಳ ಕಾಲ  ಪೊಲೀಸ್‌ ಗಸ್ತು ಮತ್ತು ದಿನಕ್ಕೆ ಎರಡು ಸಾಗರ ರûಾ ವಾಹನಗಳು ಗಸ್ತು ತಿರುಗುತ್ತಿವೆ  ಎಂದರು.

ಅಕ್ಷರದಾಸೋಹದ  ಸಹಾಯಕ ನಿರ್ದೇಶಕ  ಯಶೋಧರ್‌ ನೋಡಲ್‌ ಅಧಿಕಾರಿಯಾಗಿದ್ದರು. 
ಉಪಾಧ್ಯಕ್ಷೆ ಸುಶೀಲಾ ಎಸ್‌. ನಾಯಕ್‌, ತಾ.ಪಂ. ಸದಸ್ಯರಾದ ರಾಮಚಂದ್ರ  ಕುಂಪಲ, ರವಿಶಂಕರ್‌ ಸೋಮೇಶ್ವರ, ಪಿಡಿಒ ಮನೋಹರ್‌  ಎನ್‌. ಗೌಡ, ಪಶು ಇಲಾಖೆಯ ವೈದ್ಯಾಧಿಕಾರಿ ಎಸ್‌. ನಾಗರಾಜ್‌,  ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಾರದಾ, ಶಿಕ್ಷಣ ಇಲಾಖೆಯಿಂದ ಪಿಲಾರು ಕ್ಲಸ್ಟರಿನ ಸಿಆರ್‌ಪಿ ಕವಿತಾ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಂಜೀವ, ಸಿಆರ್‌ಝಡ್‌ ಇಲಾಖೆಯ ನಾಗರಾಜ್‌, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ವಿಜಯಲಕ್ಷಿ, ಕೋಟೆಕಾರು  ಮೆಸ್ಕಾಂನ ಜೆ.ಇ. ಪ್ರವೀಣ್‌, ಆರೋಗ್ಯ ಇಲಾಖೆ ಆರೋಗ್ಯ ನಿರೀಕ್ಷಕ ಮಂಚೇಗೌಡ, ಪೊಲೀಸ್‌ ಇಲಾಖೆಯ ದಯಾನಂದ್‌, ಕಂದಾಯ ಅಧಿಕಾರಿ ಲಾವಣ್ಯಾ,  ಕೆನರಾ ಬ್ಯಾಂಕ್‌ ಪ್ರಬಂಧಕಿ ರೇಖಾ ಉಪಸ್ಥಿತರಿದ್ದರು. ಪಂಚಾಯತ್‌ ಸಿಬಂದಿ ರೂಪಾ ನಿರ್ವಹಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next