ಅಂದು ಸವಿತಾ, ದೆಹಲಿಯಲ್ಲಿ ಓ ನನ್ನ ಚೇತನ ಎಂದು ಹಾಡಿದಾಗ, ಕುವೆಂಪು ಅವರ ಆಶಯಗಳೆಲ್ಲ ಪರಭಾಷಿಕರ ಹೃದಯದಲ್ಲಿ ಗೂಡು ಕಟ್ಟಿದವು. ಡಿ. 29ಕ್ಕೆ ಕುವೆಂಪು ಅವರ ಜನ್ಮದಿನ. ಕಾಲೇಜಿನಲ್ಲಿ ನಡೆದ ಈ ಹೆಮ್ಮೆಯ ಪ್ರಸಂಗ ನೆನಪಿಗೆ ಬಂತು…
ಸವಿತಾ ದೆಹಲಿಗೆ ಹೋಗುತ್ತಾಳೆ ಅಂತ ಕಾಲೇಜಿನಲ್ಲಿ ಎಲ್ಲೆಡೆ ಸಂಭ್ರಮ. ಕಾರಣ ಇಷ್ಟೇ; ಜಿಲ್ಲಾ ಮಟ್ಟದಲ್ಲಿ ಮೊದಲ ಬಹುಮಾನ ಪಡೆದು ರಾಜ್ಯಮಟ್ಟದ ಗಾಯನ ಸ್ಪರ್ಧೆಗೆ ನಮ್ಮ ಕಾಲೇಜಿನಿಂದ ಆಯ್ಕೆಯಾಗಿದ್ದ ವಿದ್ಯಾರ್ಥಿನಿ ಆಕೆ. ರಾಜ್ಯಮಟ್ಟದಲ್ಲೂ ಎರಡನೇ ಬಹುಮಾನ ಪಡೆದು, ಕಡೆಯ ಸುತ್ತಿಗೆ ಆಯ್ಕೆಯಾಗಿದ್ದಳು. ದೇಶದ ನಾನಾ ಭಾಗಗಳಿಂದ ವಿವಿಧ ಕಾಲೇಜುಗಳ ಮಕ್ಕಳು ಭಾಗವಹಿಸುತ್ತಿದ್ದ ದೆಹಲಿಯಲ್ಲಿ ನಡೆಯುವ ಪ್ರತಿಷ್ಠಿತ ಸ್ಪರ್ಧೆ ಅದು. ಬಹುಮಾನದ ಮೊತ್ತವೂ ದೊಡ್ಡದು. ಅದೇ ಮೊದಲ ಬಾರಿಗೆ ನಮ್ಮ ಕಾಲೇಜಿನ ಹುಡುಗಿಯೊಬ್ಬಳು ಅಂತಿಮ ಸುತ್ತಿಗೆ ತಲುಪಿದ್ದಳು. ಈ ವಿಷಯ ತಿಳಿದಾಗ ಎಲ್ಲರೂ ಖುಷಿಪಟ್ಟಿದ್ದೆವು.
ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದಿದ್ದ ಸವಿತಾಳಿಗೆ ಸುಮಧುರ ಕಂಠ ದೈವದತ್ತವಾಗಿ ಬಂದ ವರ. ಯಾವುದೇ ಹಾಡನ್ನು ಅರ್ಥೈಸಿಕೊಂಡು, ಅನುಭವಿಸಿ ಹಾಡುತ್ತಿದ್ದುದರಿಂದ ಆಕೆಯ ಹಾಡು ಕೇಳಲು ಹಿತವೆನಿಸುವುದರ ಜತೆ ಮನಸ್ಸಿಗೂ ತಲುಪುತ್ತಿತ್ತು. ಈಗಾಗಲೇ ಅನೇಕ ಸ್ಪರ್ಧೆಗಳಲ್ಲಿ ವಿಜೇತಳಾಗಿದ್ದಳು ನಿಜ. ಆದರೆ, ರಾಷ್ಟ್ರಮಟ್ಟದ ಈ ಸ್ಪರ್ಧೆ ಅವಳಿಗೂ ಹೊಸದು. ಹಾಗಾಗಿ ಪರಿಶ್ರಮದಿಂದ ತಯಾರಿ ನಡೆಸಿದ್ದಳು.
ಅವಳ ತಯಾರಿಯ ಬಗ್ಗೆ ನಮಗೆಲ್ಲರಿಗೂ ಸಹಜವಾಗಿಯೇ ಕುತೂಹಲ. ಅದರೊಂದಿಗೆ ತಲೆಗೊಂದು ಸಲಹೆ ಕೊಡುವವರೂ ಹೆಚ್ಚಾಗಿದ್ದರು. ಲಂಗ/ ಸಲ್ವಾರ್, ಮಧ್ಯ/ ಓರೆ ಬೈತಲೆ, ಕಿವಿಗೆ ಓಲೆ / ರಿಂಗ್, ಮಲ್ಲಿಗೆ/ ಗುಲಾಬಿ… ಹೀಗೆ ಉಡುಗೆ- ತೊಡುಗೆಯ ಜತೆಗೆ, ಹೇಗೆ ನಿಲ್ಲಬೇಕು- ಕೂರಬೇಕು ಎನ್ನುವುದರ ಬಗ್ಗೆಯೂ ಪುಕ್ಕಟೆ ಸಲಹೆಗಳು ದಂಡಿಯಾಗಿದ್ದವು. ಆದರೆ, ಆಕೆಗೆ ನಿಜಕ್ಕೂ ಸಲಹೆ ಬೇಕಾಗಿದ್ದುದು ಹಾಡಿನ ವಿಷಯದಲ್ಲಾಗಿತ್ತು. ರಾಗ, ತಾಳ, ಶ್ರುತಿ ಎಲ್ಲಾ ಸರಿ, ಆದರೆ ಹಾಡು ಯಾವುದು? ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಸಿಕ್ಕಾಗ, ತೀರ್ಪುಗಾರರು “ಸೂಕ್ತವಾದ ಹಾಡನ್ನು ಆಯ್ಕೆ ಮಾಡಿಕೊಂಡಿರಲಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಹೋಗುವಾಗ ಎಚ್ಚರ ವಹಿಸಬೇಕಿತ್ತು. ಹೆಚ್ಚಿನವರು, ದೆಹಲಿ ನಮ್ಮ ರಾಜಧಾನಿ; ತೀರ್ಪುಗಾರರು ಅಲ್ಲಿಯವರೇ ಇರುತ್ತಾರೆ. ಹಾಗಾಗಿ, ಅವರಿಗೆ ತಿಳಿಯುವ ಹಾಗೆ ಹಿಂದಿ ಹಾಡನ್ನು ಹಾಡುವುದು ಸೂಕ್ತ ಎಂದು ಹೇಳಿದ್ದರು. ಮತ್ತೆ ಕೆಲವರು, ಸಿನಿಮಾ ಹಾಡಾದರೆ ಟ್ಯೂನ್ ಪರಿಚಿತವಿರುತ್ತದೆ. ಅದೇ ಒಳ್ಳೆಯದು ಎಂದು ವಾದಿಸಿದ್ದರು. ಎಲ್ಲರ ಮಾತು ಕೇಳಿ ಪಾಪ ಸವಿತಾಳಿಗೆ ಗೊಂದಲ ಹೆಚ್ಚಿತ್ತು. ದಿನವೂ ಬೇರೆ ಬೇರೆ ಹಾಡಿನತ್ತ ಮನಸ್ಸು ವಾಲುತ್ತಿತ್ತು. ದೆಹಲಿಗೆ ಹೋಗುವ ಸಮಯ ಹತ್ತಿರವಾದರೂ ಹಾಡೇ ಆಯ್ಕೆ ಆಗಿರಲಿಲ್ಲ. ಎಲ್ಲರೂ ವಿಚಾರಿಸಿ ವಿಚಾರಿಸಿ ಅವಳಿಗೆ ಒಳಗೊಳಗೇ ಹೆದರಿಕೆ ಬೇರೆ ಶುರುವಾಗಿತ್ತು.
ಅಂತೂ ಹೊರಡಲು ವಾರವಿದೆ ಅನ್ನುವಾಗ ಸಣ್ಣ ಮುಖದಿಂದಲೇ ಸವಿತಾ, “ನಂ ಅಮ್ಮ ಹೇಳಿದ್ರು, ಕರ್ನಾಟಕದಿಂದ ಆಯ್ಕೆ ಆಗಿರೋ ನೀನು ಕನ್ನಡದ ಹಾಡೇ ಹಾಡು ಅಂತ. ನನಗೆ ಯಾವುದನ್ನು ಹಾಡಬೇಕು ಗೊತ್ತಿಲ್ಲ ಅಂದಿದ್ದಕ್ಕೆ, ಕುವೆಂಪು ಅವರ ಓ ನನ್ನ ಚೇತನ ಹಾಡು ಅಂದಿದ್ದಾರೆ. ತೀರ್ಪುಗಾರರಿಗೆ ಅರ್ಥವಾಗುತ್ತದಾ ಅಂತ ಕೇಳಿದರೆ, ಮೊದಲು ಅದರ ಅರ್ಥವನ್ನು ಹೇಳಿ, ನಂತರ ಹಾಡು. ಬಹುಮಾನ ಬಂದರೂ, ಬರದಿದ್ದರೂ ಪರವಾಗಿಲ್ಲ ಅಂದುಬಿಟ್ರಾ. ಎಲ್ಲೆಲ್ಲಿಂದಲೋ ಎಷ್ಟೋ ಚೆನ್ನಾಗಿ ಹಾಡೋರು ಬರ್ತಾರೆ; ನಾನು ಈ ಹಾಡು ಹಾಡಿದ್ರೆ ಬಹುಮಾನ ಸಿಕ್ಕುತ್ತಾ ಅಂದ್ರೆ ಅಮ್ಮ ಕೇಳಲೇ ಇಲ್ಲ. ಯಾವಾಗಲೂ ಕನ್ನಡ ಕನ್ನಡ ಅಂತಾಳೆ ನಮ್ಮಮ್ಮ’ ಎಂದು ಬೇಸರಪಟ್ಟುಕೊಂಡಳು. ಎಷ್ಟೊಳ್ಳೆ ಹಿಂದಿ ಹಾಡು ಹಾಡಿ ಬಹುಮಾನ ಗೆಲ್ಲುವ ಅವಕಾಶವನ್ನು ತಪ್ಪಿಸುತ್ತಿರುವ ಆಕೆಯ ಕನ್ನಡಾಭಿಮಾನಿ ಅಮ್ಮ ಅವತ್ತು ನಮಗೂ ಖಳನಾಯಕಿಯಂತೆ ಅನಿಸಿದ್ದು ಸುಳ್ಳಲ್ಲ. ಆದರೂ ಬಾಯ್ತುದಿಗೆ “ನಿಮ್ಮಮ್ಮ ಹೇಳಿದ ಹಾಗೆ ಮಾಡು’ ಎಂದು ಹೇಳಿದರೂ ಮನಸ್ಸಿನಲ್ಲಿ, ಇನ್ನು ಬಹುಮಾನ ಬಂದಂತೆಯೇ ಎಂದು ಪೇಚಾಡಿಕೊಂಡೆವು.
ಆದರೆ, ನಡೆದಿದ್ದು ಬೇರೆಯೇ! ಸವಿತಾ ಜತೆಗೆ ದೆಹಲಿಗೆ ಹೋಗಿದ್ದ ಮೇಡಂ ಅದನ್ನು ನಮಗೆ ವಿವರಿಸಿದರು. “ಸವಿತಾ ಕಿಕ್ಕಿರಿದು ನೆರೆದಿದ್ದ ಸಭೆಯಲ್ಲಿ ಹಾಡಿದಳು. ಅವರಮ್ಮ ಹೇಳಿದಂತೆ ಮೊದಲು ಹಾಡಿನ ಭಾವಾರ್ಥ ವಿವರಿಸಿದಳು. ನಂತರ ತನ್ಮಯತೆಯಿಂದ ರಾಗ-ತಾಳ-ಶ್ರುತಿಬದ್ಧವಾಗಿ ಹಾಡಿದಳು. ಬೇರೆ ರಾಜ್ಯದವರೂ ಹಿಂದಿ ಸಿನಿಮಾ ಹಾಡುಗಳನ್ನು ಚೆನ್ನಾಗಿಯೇ ಹಾಡಿದರು. ಫಲಿತಾಂಶಕ್ಕೆ ಮುನ್ನ ಮಾತನಾಡಿದ ತೀರ್ಪುಗಾರರು, ಇಂದು ಪ್ರಸ್ತುತಪಡಿಸಿದ ಕನ್ನಡದ ಹಾಡು ಅದ್ಭುತವಾಗಿತ್ತು. ಮನುಜ ಮತ, ವಿಶ್ವಪಥದ ಬಗ್ಗೆ ಹೇಳುತ್ತದೆ. ವಿಶ್ವಮಾನವ ಸಂದೇಶ ಎಲ್ಲರಿಗೂ, ವಿಶೇಷವಾಗಿ ಯುವಜನರಿಗೆ ಮುಖ್ಯ. ಸರ್ವಕಾಲಕ್ಕೂ ಸರ್ವಜನರಿಗೂ ಅನ್ವಯವಾಗುವ ಇಂಥ ಅರ್ಥಪೂರ್ಣಗೀತೆಯನ್ನು ಅಷ್ಟೇ ಸುಂದರವಾಗಿ ಪ್ರಸ್ತುತಪಡಿಸಿದ ಕರ್ನಾಟಕದ ಹುಡುಗಿಗೆ ಮೊದಲ ಸ್ಥಾನ ಎಂದು ಪ್ರಕಟಿಸಿದರು. ಆ ಸಭೆಯಲ್ಲಿ ಸವಿತಾ ಹೀರೋಯಿನ್ ಆಗಿಬಿಟ್ಟಳು’. ಎಲ್ಲರಿಗೂ ಈ ಘಟನೆ ಕೇಳಿ ಬೆರಗು, ಖುಷಿ ಮತ್ತು ಹೆಮ್ಮೆ!
– ಡಾ.ಕೆ.ಎಸ್. ಚೈತ್ರಾ