Advertisement

ಕೋವಿ ಪರವಾನಿಗೆ ನವೀಕರಣ ಶುಲ್ಕ ಕೈ ಬಿಡಲು

01:40 PM Dec 21, 2017 | |

ಪುತ್ತೂರು: ರೈತರು ಕೃಷಿ ಸಂರಕ್ಷಣೆಯ ಉದ್ದೇಶದಿಂದ ಪಡೆದು ಕೊಂಡಿರುವ ಕೋವಿಗೆ ಈ ಬಾರಿ ಪರವಾನಿಗೆ ನವೀಕರಣ ಶುಲ್ಕ ವಿಧಿಸುತ್ತಿರುವ ಕ್ರಮವನ್ನು ಕೈಬಿಡುವಂತೆ ರಾಜ್ಯ ಸರಕಾರಕ್ಕೆ ಪತ್ರ ಬರೆಯಲು ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.
ಎಪಿಎಂಸಿ ಸಾಮಾನ್ಯ ಸಭೆಯು ಅಧ್ಯಕ್ಷ ಬೂಡಿಯಾರ್‌ ರಾಧಾಕೃಷ್ಣ ರೈ ಅವರ ಅಧ್ಯಕ್ಷತೆಯಲ್ಲಿ ಸಾಲ್ಮರ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಭವನದಲ್ಲಿ ನಡೆಯಿತು.

Advertisement

ವಿಷಯ ಪ್ರಸ್ತಾಪಿಸಿದ ಸದಸ್ಯ ಜಿ. ಕೃಷ್ಣಕುಮಾರ್‌ ರೈ, ಕಳೆದ ವರ್ಷ ಶುಲ್ಕ ವಿಧಿಸದೇ ಕೋವಿ ಪರವಾನಿಗೆ ನವೀಕರಣ ಮಾಡಲಾಗುತ್ತಿತ್ತು. ಈ ಬಾರಿ 1,500 ರೂ. ಶುಲ್ಕ ವಿಧಿಸಲಾಗಿದೆ.ಇದರಿಂದ ರೈತರಿಗೆ ತೊಂದರೆ ಆಗಿದೆ ಎಂದು ವಿವರಿಸಿದರು. ಬಳಿಕ ಈ ಕುರಿತು ಚರ್ಚೆ ನಡೆದು ಉತ್ತರಿಸಿದ ಎಪಿಎಂಸಿ ಅಧ್ಯಕ್ಷ ಬೂಡಿಯಾರ್‌ ರಾಧಾಕೃಷ್ಣ ರೈ, ಇದೊಂದು ಗಂಭೀರ ಸಮಸ್ಯೆ ಆಗಿದ್ದು, ಪುತ್ತೂರಿಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಪಿಎಂಸಿ ವತಿಯಿಂದ ಮನವಿ ನೀಡೋಣ. ಶುಲ್ಕವನ್ನು ಕೈಬಿಡುವಂತೆ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ರವಾನಿಸುವ ಪ್ರಸ್ತಾಪಕ್ಕೆ ಸಭೆ ಒಪ್ಪಿಗೆ ಸೂಚಿಸಿತ್ತು.

ಕಡಬಕ್ಕೆ ಎಪಿಎಂಸಿ
ಕಡಬ ಪ್ರತ್ಯೇಕ ತಾಲೂಕು ಆಗಿರುವುದರಿಂದ ಪುತ್ತೂರಿನಿಂದ ವಿಭಜನೆಗೊಂಡು ಅಲ್ಲಿ ಪ್ರತ್ಯೇಕ ಎಪಿಎಂಸಿ ಸ್ಥಾಪನೆ ಆಗುವ ಸಾಧ್ಯತೆ ಇದೆಯೇ ಎಂದು ಪ್ರಶ್ನಿಸಿದರು. ತಾ| ಆಗುವುದರಿಂದ ಅವಕಾಶ ಇರಬಹುದು ಎಂದು ಅಧ್ಯಕ್ಷರು ಉತ್ತರಿಸಿದರು. ಚರ್ಚೆಯ ಅನಂತರ ಲೆಕ್ಕಾಧಿಕಾರಿ ರಾಮಚಂದ್ರ ಮಾತನಾಡಿ, ಅದಕ್ಕೆ ಒಂದಷ್ಟು ಸಮಯ ಹಿಡಿಯಬಹುದು. ಪುತ್ತೂರು ಎಪಿಎಂಸಿಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಬಳಿಕ ಪರಿಶೀಲನೆ ನಡೆಯಬೇಕು. ಅನಂತರ ಅನುಷ್ಠಾನದ ಸಾಧ್ಯತೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳ ಬಹುದಷ್ಟೇ ಎಂದು ಮಾಹಿತಿ ನೀಡಿದರು.

ಚೀಟಿ ಎತ್ತಿ ಆಯ್ಕೆ
60 ಸಿ. ನಿಯಮದಡಿ ತಾಲೂಕಿನ ಗ್ರಾಮಾಂತರ ರಸ್ತೆ ಅಭಿವೃದ್ಧಿಗೆ 2018- 19ನೇ ಸಾಲ್ಲಿನಲ್ಲಿ ಎಪಿಎಂಸಿ ಆದಾಯಕ್ಕೆ ಅನುಗುಣವಾಗಿ 40 ಲಕ್ಷ ರೂ. ಬರಲಿದ್ದು, ಅದನ್ನು ಯಾವ ರೀತಿ ವಿಭಜಿಸುವುದು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪ್ರಭಾರ ಕಾರ್ಯದರ್ಶಿ ಭಾರತಿ ಅವರು, ಎಲ್ಲ ಸದಸ್ಯರಿಗೆ ಅನುದಾನ ಹಂಚಿದರೆ, 2 ಲಕ್ಷ ರೂ. ಸಿಗಬಹುದಷ್ಟೇ. ಅದಕ್ಕೆ ಬದಲಾಗಿ ವರ್ಷದಲ್ಲಿ ಇಂತಿಷ್ಟು ಸದಸ್ಯರಿಗೆ ಎಂದು ವಿಭಜಿಸಿದರೆ ಅನುದಾನ ಹೆಚ್ಚು ದೊರೆಯಬಹುದು ಎಂದರು.

ಈ ಕುರಿತು ಚರ್ಚೆ ನಡೆದು, ಈ ವರ್ಷದಲ್ಲಿ ಎಂಟು ಮಂದಿ ಸದಸ್ಯರ ವಾರ್ಡ್‌ಗೆ ತಲಾ 5 ಲಕ್ಷ ರೂಗಳಂತೆ ಅನುದಾನ ನೀಡುವುದು. ಸದಸ್ಯರ ಹೆಸರನ್ನು ಚೀಟಿ ಹಾಕಿ ಆರಿಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಮೈಸೂರಿನಲ್ಲಿ ನಡೆಯುವ ತರಬೇತಿ ಕಾರ್ಯಾಗಾರದಲ್ಲಿ ಎಪಿಎಂಸಿ ಸದಸ್ಯರು ಪಾಲ್ಗೊಳ್ಳುವ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ಎ. ಕುಶಾಲಪ್ಪ ಗೌಡ, ಕಾರ್ತಿಕ್‌ ರೈ, ಕೊರಗಪ್ಪ, ಮೇದಪ್ಪ ಗೌಡ, ದಿನೇಶ್‌ ಮೆದು, ತ್ರಿವೇಣಿ ಕೆ. ಪೆರ್ವೋಡಿ, ಮಂಜುನಾಥ ಎನ್‌.ಎಸ್‌., ಶಶಿಕಿರಣ್‌ ರೈ ಎನ್‌., ಗೀತಾ ಡಿ.ವಿ. ಉಪಸ್ಥಿತರಿದ್ದರು.

Advertisement

ಅನುಮೋದಿಸಿ 
ಸದಸ್ಯರು ತಾವು ಕಾಂಕ್ರೀಟ್‌ ಕಾಮಗಾರಿಗೆ ಸೂಚಿಸುವ ರಸ್ತೆಯ ನಕ್ಷೆಯನ್ನು ಪಂಚಾಯತ್‌ನಿಂದ ಅನುಮೋದಿಸಿ ಸಲ್ಲಿಸಬೇಕು. ಅದನ್ನು ಮುಂದಿನ ಕ್ರಿಯಾಯೋಜನೆಯಲ್ಲಿ ಸೇರಿಸಲಾಗುವುದು ಎಂದು ಪ್ರಭಾರ ಕಾರ್ಯದರ್ಶಿ ಭಾರತಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next