ಚಿಕ್ಕಬಳ್ಳಾಪುರ: ಹತ್ತು ಮಂದಿ ನೂತನ ಶಾಸಕರಿಗೆ ಸಚಿವ ಸ್ಥಾನ ನೀಡಿ ಸಂಪುಟ ವಿಸ್ತರಣೆ ಮಾಡಿ ಉಳಿದಿರುವ ಮೂರು ಸ್ಥಾನಗಳನ್ನು ಮೂಲ ಬಿಜೆಪಿ ಶಾಸಕರಿಗೆ ನೀಡುವ ವಿಶ್ವಾಸ, ಭರವಸೆ ಇದೆ. ಈ ಬಗ್ಗೆ ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮಲು ತಿಳಿಸಿದರು.
ತಮ್ಮ ಪುತ್ರಿಯ ವಿವಾಹ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ವಿತರಿಸಲು ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಹುದ್ದೆಯ ವಿಚಾರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಪರಿಶಷ್ಟ ಪಂಗಡ ವರ್ಗಕ್ಕೆ ಶೇ.7.5 ಮೀಸಲಾತಿ ಹೆಚ್ಚಿಸುವ ಕುರಿತು ಕೇಳಿದ ಪ್ರಶ್ನೆಗೆ, ಈಗಾಗಲೇ ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದಲ್ಲಿ ಸರ್ಕಾರ ಆಯೋಗ ರಚಿಸಿ ವರದಿ ನೀಡುವಂತೆ ಸೂಚಿಸಲಾಗಿದ್ದು, ಈ ನಿಟ್ಟಿನಲ್ಲಿ ಆಯೋಗ ಕಾರ್ಯ ನಿರ್ವಹಿಸುತ್ತಿದ್ದು, ವರದಿ ಸಲ್ಲಿಸಿದ ನಂತರ ಕಾರ್ಯರೂಪಕ್ಕೆ ತರಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಲ್ಲಿದ್ದಾರೆ ಎಂದರು.
ಕಲಾಪ ವ್ಯರ್ಥವಾಗದಿರಲಿ: ಸೋಮವಾರದಿಂದ ಆರಂಭಗೊಳ್ಳಲಿರುವ ವರ್ಷದ ಮೊದಲ ಅಧಿವೇಶನದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಒಂದು ದಿನದ ಅಧಿವೇಶನ ನಡೆಸಲು ಸಾಕಷ್ಟು ಹಣ ಖರ್ಚಾಗುತ್ತದೆ. ಅಧಿವೇಶನದಲ್ಲಿ ನಡೆಯುವ ಚರ್ಚೆಗಳು ಜನಪರವಾಗಿರಬೇಕು. ಎಲ್ಲಾ ಶಾಸಕರು, ಸಚಿವರು ಭಾಗವಹಿಸುವ ಮೂಲಕ ರಾಜ್ಯದ ಜನರಿಗೆ ಅನುಕೂಲವಾಗುವಂತ ಹಾಗೂ ಸಮಾಜದ ಅಭಿವೃದ್ದಿಗೆ ಸಹಕಾರಿಯಾಗುವಂತಹ ಅಂಶಗಳ ಚರ್ಚೆಯಲ್ಲಿ ಭಾಗವಹಿಸಬೇಕು.
ಅಧಿವೇಶನದ ಮೌಲ್ಯಯುತ ಸಮಯವನ್ನು ಕಳೆದುಕೊಳ್ಳದೇ ಜನರ ಅಭಿವೃದ್ಧಿಗೆ ಪೂರಕ ಚರ್ಚೆಗಳು ನಡೆಯಲಿ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ನಿಕಟಪೂರ್ವ ಅಧ್ಯಕ್ಷ ಎನ್.ಎಂ.ರವಿನಾರಾಯಣರೆಡ್ಡಿ, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಕೃಷ್ಣಾರೆಡ್ಡಿ, ಹಿರಿಯ ಮುಖಂಡರಾದ ಅಗಲಗುರ್ಕಿ ಚಂದ್ರಶೇಖರ್, ರಾಮಣ್ಣ, ನಾಗಭೂಷಣ್, ಎಚ್.ಎಚ್.ಶಿವಕುಮಾರ್, ಲಕ್ಷ್ಮೀಪತಿ ಉಪಸ್ಥಿತರಿದ್ದರು.
ಬಿ.ಶ್ರೀರಾಮಲುಗೆ ಸ್ವಾಗತ: ತಮ್ಮ ಪುತ್ರಿಯ ಮದುವೆ ಆಮಂತ್ರಣ ಪತ್ರಿಕೆ ನೀಡಲು ಚಿಕ್ಕಬಳ್ಳಾಫುರ ನಗರದ ನ್ಯೂಹಾರೈಜನ್ ಶಾಲೆಗೆ ಆಗಮಿಸಿದ್ದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರನ್ನು ಪಕ್ಷದ ಕಾರ್ಯಕರ್ತರು ಹೂಗುತ್ಛ ನೀಡಿ ಬರಮಾಡಿಕೊಂಡರು. ಪಕ್ಷದ ಹಿರಿಯ ಮುಖಂಡರಿಗೆ, ಕಾರ್ಯಕರ್ತರಿಗೆ ಸಚಿವ ಶ್ರೀರಾಮಲು ಮದುವೆಗೆ ಆಹ್ವಾನಿಸಿದರು.