ಫ್ರೆಂಚ್ ಸಿನೆಮಾ ನಿರ್ದೇಶಕ ಅಲ್ಬರ್ಟ್ ಲಿಮೋರಿಸ್ 1956ರಲ್ಲಿ ನಿರ್ಮಿಸಿದ 32 ನಿಮಿಷಗಳ ಪುಟ್ಟ ಚಲನಚಿತ್ರವಿದು. ಚಿತ್ರಕಥೆಯನ್ನು ಕೆಲವೇ ಸಾಲಿನಲ್ಲಿ ಹೇಳಿ ಮುಗಿಸುವುದಾದರೆ, ಒಬ್ಬ ಪುಟ್ಟ ಬಾಲಕನಲ್ಲಿದ್ದ ಕೆಂಪು ಬಲೂನ್‌ನ್ನು ಕಿತ್ತುಕೊಳ್ಳಲು ಅವನ ಸಹಪಾಠಿಗಳು ನಿರ್ಧರಿಸುತ್ತಾರೆ. ಅದಕ್ಕಾಗಿ ಅವನ ಮೇಲೆ ಮುಗಿ ಬೀಳುತ್ತಾರೆ. ಬಲೂನ್ ಇವರಿಂದ ತಪ್ಪಿಸಿಕೊಂಡರೂ, ಒಬ್ಬ ಚಾಟರ್‌ಬಿಲ್‌ನಿಂದ ಕಲ್ಲನ್ನು ತೂರಿ ಬಿಡುತ್ತಾನೆ ಬಲೂನ್‌ಗೆ. ಸಣ್ಣ ರಂಧ್ರವಾಗಿ ಒಳಗಿದ್ದ ಬಿಸಿ ಗಾಳಿ ಹೋಗಿ ಕುಸಿದು ಬೀಳುತ್ತದೆ. ಅಂತಿಮವಾಗಿ ಆ ಊರಿನಲ್ಲಿದ್ದ ಎಲ್ಲ ಬಲೂನುಗಳೂ ಹಾರಿ ಇವನ ಬಳಿಗೆ ಬರುತ್ತವೆ. ಇವನು
ಅವುಗಳೊಂದಿಗೆ ಸಂಪ್ರೀತಗೊಳ್ಳುತ್ತಾನೆ.
ಬದುಕಿನ ಹಲವು ಸಂಗತಿಗಳನ್ನು 32 ನಿಮಿಷಗಳ ಚಿತ್ರದಲ್ಲಿ ಹೇಳಿರುವುದು ವಿಶೇಷ. ಕೆಟ್ಟವರು ವಿಜೃಂಭಿಸತೊಡಗಿದರೆ ಒಳ್ಳೆಯವರೆಲ್ಲ ಬೀದಿಗಿಳಿದಾರು ಎಂಬ ಎಚ್ಚರಿಕೆ ಈ ಚಿತ್ರದ ಸನ್ನಿವೇಶ (ಬಲೂನುಗಳು ಹೊರಡುವುದು) ಹೇಳಿದರೆ, ಬಲೂನುಗಳೆಲ್ಲ ಅವನನ್ನು ಹೊತ್ತೂಯ್ಯುವುದು ಮತ್ತೂಂದು ಸ್ಥಳಕ್ಕೆ. ಅಂದರೆ ಕೆಟ್ಟವರಿರುವ ಜಾಗ ಒಳ್ಳೆಯವರಿಗಲ್ಲ ಎಂಬ ಅರ್ಥವೋ ? ಹೀಗೆ ಹಲವಾರು ಕೋನಗಳಿಂದ ಸಿನೆಮಾ ನಮ್ಮನ್ನು ಕಾಡದೆ ಬಿಡುವುದಿಲ್ಲ.
ವಸ್ತು ನಾವೀನ್ಯತೆ ಮತ್ತು ಸರಳ ನಿರೂಪಣೆ ಇಡೀ ಸಿನೆಮಾವನ್ನು ಕೇಂದ್ರೀಕರಿಸಿರುವುದೇ ಖುಷಿ ಕೊಡಲು ಕಾರಣ. ಪುಟ್ಟ ಮಕ್ಕಳಿಗೆ ಒಂದು ಸಾಮಾನ್ಯ ಕಥಾ ಚಿತ್ರವಾಗಿ ಕಂಡರೆ, ದೊಡ್ಡವರಿಗೆ ತತ್ವನೆಲೆಯಾಗಿ ಗೋಚರಿಸುವುದುಂಟು. ಸರಳತೆಯಲ್ಲೂ ಒಂದು ಬಗೆಯ ಅನನ್ಯವಾದ ಗಾಂಭೀರ್ಯವನ್ನು ಹೊತ್ತುಕೊಂಡಿರುವುದೇ ಈ ಸಿನಿಮಾ ಎಲ್ಲರಿಗೂ ಇಷ್ಟವಾಗಲು ಕಾರಣ.
ಒಳ್ಳೆಯವರಿಗೆ, ಒಳ್ಳೆಯದನ್ನು ಬಯಸುವವರಿಗೆ ಸಹಾಯ ಮಾಡುವರು ಹಲವರಿರುತ್ತಾರೆ ಎಂಬ ಆಶಾವಾದವನ್ನೂ ಹೊಮ್ಮಿಸುವ ಚಿತ್ರವಿದು. ಇದೆಲ್ಲದರ ಮಧ್ಯೆ ಸ್ವಾತಂತ್ರ್ಯ ಮತ್ತು ಆನಂದದ ಮಹತ್ವವನ್ನೂ ಬಹಳ ವಿಭಿನ್ನವಾಗಿ ಹೇಳುವಂಥ ಚಿತ್ರ. ಮರದ ಗೆಲ್ಲಿಗೆ ಸಿಕ್ಕಿ ಹಾಕಿಕೊಂಡ ಬಲೂನ್‌ನ್ನು ಬಿಡಿಸುವ ಪುಟ್ಟ ಹುಡುಗ ಪ್ಯಾಸ್ಕೆಲ್, ಹಗ್ಗ ಕಟ್ಟದೆಯೇ ಬಿಟ್ಟುಬಿಡುತ್ತಾನೆ. ಅದು ಇವನನ್ನೇ ಹಿಂಬಾಲಿಸುತ್ತದೆ. ಅವನ ಸ್ವಾತಂತ್ರ್ಯ ಮತ್ತು ಅದರೊಂದಿಗಿನ ಖುಷಿಯನ್ನು ಕಸಿದುಕೊಳ್ಳಲು ಸಹಪಾಠಿಗಳು ಯತ್ನಿಸಿದಾಗ ಉಳಿದ ಎಲ್ಲ ಬಲೂನುಗಳು ಸಹಾಯಕ್ಕೆ ಬರುವುದು ಇತ್ಯಾದಿ.
ಇನ್ನೊಂದು ವ್ಯಾಖ್ಯಾನದ ಪ್ರಕಾರ ಈ ಸಿನಿಮಾ ಆ ಹೊತ್ತಿನ ರಾಜಕೀಯ ಪರಿಸ್ಥಿತಿ ಕುರಿತ ಜನರ ಪ್ರತಿಕ್ರಿಯೆ ಎಂದೂ ಹೇಳುವುದುಂಟು. ಈ ಎಲ್ಲ ಕಾರಣದಿಂದಲೇ ಹತ್ತಾರು ಅರ್ಥ ಸಾಧ್ಯತೆಗಳನ್ನು ಒಡಲಲ್ಲಿಟ್ಟುಕೊಂಡು ಸಾರ್ವಕಾಲಿಕ ಚಿತ್ರವೆನಿಸಿರುವುದು.
ಇನ್ನೊಂದು ಕೌತುಕಮಯ ಸಂಗತಿಯೆಂದರೆ, ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಆಸ್ಕರ್ ಪ್ರಶಸ್ತಿ ಜಗತ್ತಿನ ಒಳ್ಳೆ ಚಿತ್ರಗಳಿಗೆ ಅಮೆರಿಕದಲ್ಲಿ ನೀಡಲಾಗುವ ಪ್ರಶಸ್ತಿ.
ಸಿನಿಮಾದ ಪೂರ್ತಿಯಾಗಿ ಕಾಣಬರುವ ನೋಟಗಳೆಂದರೆ, ಬಲೂನ್, ಮಕ್ಕಳು ಮತ್ತು ಆ ನಗರದ ಗಲ್ಲಿಗಳು. ಆ ಸೀಮಿತ ನೆಲೆಯಲ್ಲೇ ಕಟ್ಟಿಕೊಟ್ಟ ಚಿತ್ರ ನಿಜಕ್ಕೂ ಅದ್ಭುತ.
ರೂಪರಾಶಿ