ಮಡಿಕೇರಿ: ಮೈಸೂರು ಸಂಸ್ಥಾನದ ಬ್ರಿಟಿಷ್ ಆಡಳಿತಾವಧಿಯ ದಾಖಲೆಗಳು ಜಿಲ್ಲಾಡಳಿತದ ವಶದಲ್ಲಿದ್ದು, ಇದನ್ನು ಡಿಜಿಟಲೀಕರಣದ ಮೂಲಕ ಸಂರಕ್ಷಿಸಲು ರಾಜ್ಯ ಸರಕಾರ ಮುಂದಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ ಘೋಷಿಸಿದ ಒಂದು ಕೋಟಿ ರೂ. ಅನುದಾನದಲ್ಲಿ ಈಗಾಗಲೇ 50 ಲಕ್ಷ ರೂ. ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ಪತ್ರಾಗಾರ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿದೇಶಕರಾದ ಕೆ.ಎಸ್. ದಯಾನಂದ ತಿಳಿಸಿದ್ದಾರೆ.
ನಗರದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗತಿಸಿ ಹೋದ ಇತಿಹಾಸದ ಸತ್ಯವನ್ನು ಕಟ್ಟಿ ಕೊಡುವ ದಾಖಲೆಗಳನ್ನು ಸಂರಕ್ಷಿಸಿ ನಿರ್ವಹಣೆ ಮಾಡುವುದು ಪತ್ರಾಗಾರ ಇಲಾಖೆಯ ಕಾರ್ಯವಾಗಿದೆ ಎಂದರು.
ಸಾಂಸ್ಕೃತಿಕ, ಸಾಹಿತ್ಯ, ಐಸಿಹಾಸಿಕ ದಾಖಲೆಗಳು ಸಂಸ್ಕೃತಿಯ ಭಾಗವಾಗಿದ್ದು, ಸಂರಕ್ಷಿ ಸಲ್ಪಡುವ ಈ ದಾಖಲೆಗಳು ವಿದ್ಯಾರ್ಥಿಗಳು ಹಾಗೂ ಯುವ ಸಮೂಹಕ್ಕೆ ಮಾರ್ಗದರ್ಶಕ ವಾಗಲಿದೆ ಎಂದು ಅಭಿಪ್ರಾಯಪಟ್ಟರು. ಅಕಾಡೆಮಿಗಳು ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರೆ ಪತ್ರಾಗಾರ ಇಲಾಖೆ ಇದನ್ನು ಸಂರಕ್ಷಿಸುವ ಕೆಲಸವನ್ನು ಮಾಡುತ್ತದೆ. ಕೊಡವ, ಅರೆಭಾಷೆ, ಬ್ಯಾರಿ, ಲಲಿತಕಲಾ ಯಕ್ಷಗಾನ ಅಕಾಡೆಮಿಗಳ ಅವಧಿ ಇನ್ನೂ ಇದ್ದು ಉಳಿದ ಅಕಾಡೆಮಿಗಳ ಅವಧಿ ಈ ತಿಂಗಳ 28ಕ್ಕೆ ಕೊನೆಗೊಳ್ಳಲಿದೆ ಎಂದು ದಯಾನಂದ ಅವರು ತಿಳಿಸಿದರು.
ಅರೆಭಾಷೆ ಅಕಾಡೆಮಿಗೆ ಅನುದಾನ ಹೆಚ್ಚಳ: ಅರೆಭಾಷೆ ಅಕಾಡೆಮಿಗೆ ಅನುದಾನ ಕಡಿಮೆಯಾಗಿರುವ ಬಗ್ಗೆ ಗಮನ ಸೆಳೆದಾಗ ಉತ್ತರಿಸಿದ ದಯಾನಂದ ಅವರು ಅರೆಭಾಷಿಕರು ಸೀಮಿತ ಪ್ರದೇಶದಲ್ಲಷ್ಟೇ ವಾಸವಾಗಿದ್ದಾರೆ ಎನ್ನುವ ಕಾರಣಕ್ಕಾಗಿ ಅನುದಾನವನ್ನು ಕೂಡ ಸೀಮಿತಗೊಳಿಸಲಾಗಿತ್ತು. ಆದರೆ ಅರೆಭಾಷಿಕರು ಎಲ್ಲ ಪ್ರದೇಶಗಳಲ್ಲಿ ವಾಸವಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದ್ದು, ಮುಂದಿನ ಎಪ್ರಿಲ್‌ನಲ್ಲಿ ಅನು ದಾನವನ್ನು ಹೆಚ್ಚಿಸುವ ಬಗ್ಗೆ ಪ್ರಯತ್ನಿಸಲಾಗುವುದೆಂದು ಭರವಸೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಬಿ.ಎಸ್.ತಮ್ಮಯ್ಯ, ಸದಸ್ಯರಾದ ಮಾದೇಟಿರ ಬೆಳ್ಯಪ್ಪ, ಅರೆಭಾಷೆ ಅಕಾಡೆಮಿ ಅಧ್ಯಕ್ಷರಾದ ಕೊಲ್ಯದ ಗಿರೀಶ್, ರಿಜಿಸ್ಟ್ರಾರ್ ಉಮರಬ್ಬ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಳಯ್ಯ ಉಪಸ್ಥಿತರಿದ್ದರು.