Advertisement

ಬಣ್ಣದ ಮಹಾಲಿಂಗ ನೆನಪಿನ ಮರುಹುಟ್ಟು

03:35 AM Jun 30, 2017 | |

ಹದಿನೇಳು ವರುಷಗಳ ಹಿಂದೆ. ಸಂಪಾಜೆ- ಕಲ್ಲುಗುಂಡಿಯ ಅವರ ಮನೆಯಲ್ಲಿ ಭೇಟಿ ಮಾಡಿದ ಸಂದರ್ಭ. “”ಇದು ಲಂಕೇಶ್ವರನ ಸಣ್ಣ ಮನೆ, ಬನ್ನಿ” ಎನ್ನುತ್ತಾ ಕೈಹಿಡಿದು ಜಗಲಿಗೆ ಕರೆದುಕೊಂಡು ಹೋದರು. “”ರಾವಣನಿಗೆ ಕುಬೇರ ದಾಸನಾಗಿದ್ದಾನೆ. ಈ ಲಂಕೇಶ್ವರನಿಗೆ ಕುಬೇರನ ಸ್ನೇಹ ಸಿಗಲಿಲ್ಲ” ಎಂದು ದೊಡ್ಡ ಬಾಯಲ್ಲಿ ನಕ್ಕ ಬಣ್ಣದ ಮಹಾಲಿಂಗನವರ ಆ ಕ್ಷಣದ ಚಿತ್ರ ಮಾಸಿಲ್ಲ. 

Advertisement

ರಾವಣ, ಲಂಕೇಶ್ವರ ಎನ್ನುವಾಗ ಯಕ್ಷಗಾನ ಪಾತ್ರಧಾರಿಯಾಗುತ್ತಿದ್ದರು, ಕುಬೇರನ ಉಲ್ಲೇಖ ಮಾಡುವಾಗ ತಾನು ಹಾಗಿಲ್ಲ ಎಂಬ ಸೂಕ್ಷ್ಮ ಸಂದೇಶವನ್ನೂ ನೀಡಿದ್ದರು. ಬಣ್ಣದ ಬದುಕಿನ ಸಂಕಷ್ಟವನ್ನು ಮಹಾಲಿಂಗನವರು ದಿನಪೂರ್ತಿ ಎಳೆಎಳೆಯಾಗಿ ವಿವರಿಸಿದ್ದರು. ಧ್ವನಿಮುದ್ರಿಸುತ್ತಿದ್ದರೆ ಈಗ ಅದೊಂದು ದಾಖಲೆಯಾಗುತ್ತಿತ್ತು. “”ಬಣ್ಣದ ವೇಷದ ಸೊಬಗನ್ನು ಹಲವು ಕಲಾವಿದರು ವೈಭವೀಕರಿಸಿದ್ದರು. ಮುಂದೆ ಈ ಸ್ವರೂಪದಲ್ಲೇ ಉಳಿಸಿದರೆ ಈ ಶಿಲ್ಪವನ್ನು ಕೆತ್ತಿದ ಕಲಾವಿದರನ್ನು ಗೌರವಿಸಿದಂತೆ” ಎಂದು ಅವರದ್ದೇ ಶೈಲಿಯಲ್ಲಿ ಹೇಳಿದ್ದರು.

ಕಾಲಮಿತಿಯ ಕಾಲವಿದು. ನಾಲ್ಕೈದು ಗಂಟೆಗಳ ಅವಧಿಯೊಳಗೆ ಪ್ರಸಂಗವನ್ನು ಮುಗಿಸಬೇಕಾದ ಧಾವಂತ. ಸಮಯದ ಮಿತಿಯಲ್ಲಿ ಪಾತ್ರಗಳ ಸೊಗಸನ್ನು ಬಲವಂತದಿಂದ ಹೊರಗೆಳೆಯಬೇಕಾದ ಕಲಾವಿದರ ಮನಃಸ್ಥಿತಿಯ ಪರಿಮಿತಿ. ಇಂತಹ ಸಂದರ್ಭದಲ್ಲಿ ಬಣ್ಣದ ವೇಷಗಳಿಗೆ ಎಷ್ಟು ಸಮಯ ಸಿಗಬಹುದು ಎನ್ನುವುದು ಸರ್ವವೇದ್ಯ. ಬಹುತೇಕ ಪ್ರದರ್ಶನಗಳನ್ನು ವೀಕ್ಷಿಸುವಾಗ ಮಹಾಲಿಂಗನವರ “”ಈ ಸ್ವರೂಪದಲ್ಲೇ ಉಳಿಸಿದರೆ…” ಎನ್ನುವ ಮಾತು ನೆನಪಾಗುತ್ತದೆ. 

ಆಗ ಕೃತಕ ಚುಟ್ಟಿಗಳು ಹೆಜ್ಜೆಯೂರಿದ ಸಮಯ. ಕೃತಕ ಚುಟ್ಟಿಯಿಂದ ತನುಶ್ರಮ ಕಡಿಮೆ, ಕ್ಷಿಪ್ರವಾಗಿ ವೇಷ ಮಾಡಬಹುದಲ್ಲ – ನನ್ನ ಕೀಟಲೆಯ ಪ್ರಶ್ನೆಗೆ ಮಹಾಲಿಂಗರು ಉತ್ತರಿಸಿದ್ದರು, “”ನಮ್ಮದು ಯಕ್ಷಗಾನ. ಏನಿದ್ದರೂ ಸಿದ್ಧ ಚೌಕಟ್ಟಿದೆ. ನಮಗೆ ಬೇಕಾದಂತೆ ವ್ಯವಸ್ಥೆಯನ್ನು ಬದಲಾಯಿಸಲು ಆಗುವುದಿಲ್ಲ. ಸಹಜ ಚುಟ್ಟಿಗೂ ಕೃತಕ ಚುಟ್ಟಿಗೂ ವ್ಯತ್ಯಾಸವಿಲ್ವಾ? ವೇಷವೊಂದರ ಸರ್ವಾಂಗ ಸುಂದರತೆಯಲ್ಲಿ ಸಹಜ ಚುಟ್ಟಿಯು ತುಂಬಾ ಪರಿಣಾಮಕಾರಿಯಾಗಿ ಮೂಡಿಬರುತ್ತದೆ.” ನನ್ನ ಆ ಪ್ರಶ್ನೆಯೇ ಅವರಿಗೆ ಕಿರಿಕಿರಿಯನ್ನುಂಟು ಮಾಡಿತ್ತು! ಮುಖಕ್ಕೆ ಚುಟ್ಟಿಯಿಡುವುದು ವೇಷವೊಂದು ತಯಾರಾಗುವ ಬದ್ಧತೆ. ಅದೊಂದು ಧ್ಯಾನ. ಈ ಧ್ಯಾನದ ಕೊನೆಗೆ ಹೊರಹೊಮ್ಮುವ ರಮ್ಯಾದ್ಭುತ ಲೋಕವು ಕೃತಕ ಚುಟ್ಟಿಯ ವೇಷದಿಂದ ಅಸಾಧ್ಯ. 

ಒಂದು ಕಾಲಘಟ್ಟದ ಆಟದ ಪರಿಣಾಮವು ವರ್ತಮಾನದಲ್ಲೂ ನೆನಪಿನಿಂದ ಮಾಸುತ್ತಿಲ್ಲ ಎಂದರೆ ಆ ಪರಿಣಾಮವು ಕಟ್ಟಿಕೊಟ್ಟ ಕ್ಷಣ ಇದೆಯಲ್ಲ, ಅದು ಯಕ್ಷಗಾನ. ಬಣ್ಣದ ಮಹಾಲಿಂಗನವರ ತಿರುಗಾಟದುದ್ದಕ್ಕೂ ಜರಗಿದ ಪ್ರದರ್ಶನಗಳೆಲ್ಲವೂ ಯಕ್ಷಗಾನವೇ ಆಗಿತ್ತು! ದಕ್ಷಾಧ್ವರ ಪ್ರಸಂಗದಲ್ಲಿ ಕುರಿಯ ವಿಠಲ ಶಾಸ್ತ್ರಿಗಳ ಈಶ್ವರ, ಕೋಳ್ಯೂರು ರಾಮಚಂದ್ರ ರಾಯರ ದಾಕ್ಷಾಯಿಣಿ, ಬಣ್ಣದ ಮಹಾಲಿಂಗರ ವೀರಭದ್ರ – ನಾಲ್ಕೈದು ದಶಕದ ಹಿಂದಿನ ರಂಗದ ಪಾತ್ರಶಿಲ್ಪಗಳು ಈಗಲೂ ಜೀವಂತ. ಯಕ್ಷಗಾನವು ಓರ್ವ ಕಲಾವಿದನಾಗಿ ರೂಪುಗೊಳ್ಳಲು ಸತತ ತ್ಯಾಗ ಮತ್ತು ಪರಿಶ್ರಮವನ್ನು ಬೇಡುತ್ತದೆ. ಈ ಹಾದಿಯನ್ನು ಕ್ರಮಿಸಿ ಬಂದವರು ಮಹಾಲಿಂಗನವರು. 

Advertisement

ಚಂದ್ರಗಿರಿ ಅಂಬು, ಬಣ್ಣದ ಮಹಾಲಿಂಗ; ಅವರಿಂದ ಹಿಂದೆ ಬಣ್ಣದ ಕುಟ್ಯಪ್ಪು… ಹೀಗೆ ಇವರನ್ನು ನೋಡದೆ, ಒಡನಾಟವಿಲ್ಲದೆ, ಅವರ ಬಗ್ಗೆ ಏನೂ ಬಯೋಡಾಟ ಅಧ್ಯಯನ ಮಾಡದೆ; ಇವರೆಲ್ಲರ ವೇಷಗಳು ಯಕ್ಷರಾತ್ರಿಗಳನ್ನು ನಡುಗಿಸಿವೆ ಎಂದು ಸಂದರ್ಭ ಸಿಕ್ಕಾಗಲೆಲ್ಲ ಗುಣಗಾನ ಮಾಡುತ್ತೇವೆ. ಏನು ಕಾರಣ? ಅವರೆಲ್ಲ ಯಕ್ಷಗಾನದ ಪ್ರಾಡಕ್ಟ್! ಅವರು ಸ್ಥಾಪಿಸಿದ ಶಿಲ್ಪಕ್ಕೆ ಸಾವಿಲ್ಲ. ಅದು ಅವಿನಾಶಿ. ಬಹುಶಃ ವರ್ತಮಾನದ ರಂಗವು ಇವರೆಲ್ಲರ ರಂಗಕೊಡುಗೆಯ ಪಠ್ಯದಲ್ಲಿ ಉಸಿರಾಡುತ್ತಿದೆ ಎಂದರೆ ತಪ್ಪಾಗಲಾರದು. 

ದಂಡ-ಪಾಶವನ್ನು ಕೈಯಲ್ಲಿ ಹಿಡಿದು ರಂಗ ಪ್ರವೇಶಿಸುವ ಯಮ, ಅಲೌಕಿಕ ಲೋಕವನ್ನು ಮರುಸೃಷ್ಟಿಸಿದ ವೀರಭದ್ರ, ದೊಂದಿ ಹಿಡಿದು ಅಬ್ಬರಿಸುವ ರುದ್ರಭೀಮ, ಕ್ಷಣಕ್ಷಣಕ್ಕೂ ಯಕ್ಷಗಾನದ ಬೆರಗನ್ನು ಕಟ್ಟಿಕೊಡುತ್ತಿದ್ದ ಮಹಿಷಾಸುರ, ಲಂಕಾಧೀಶ ರಾವಣ… ಪಾತ್ರಗಳನ್ನು ನೋಡಿದ ಎಲ್ಲರೂ ರೋಮಾಂಚನಗೊಂಡ ಕ್ಷಣಗಳೇ. “”ರಾಕ್ಷಸ ಪಾತ್ರವಾದರೇನು? ಆ ಪಾತ್ರಕ್ಕೂ ಮನಸ್ಸಿದೆ, ಭಾವ ಇದೆ. ಭಾವನೆಗಳಿವೆ. ಅವನ್ನೆಲ್ಲ ಮಾತಿನಲ್ಲಿ ವ್ಯಕ್ತಪಡಿಸಬೇಕು” ಎಂದು ಕಮ್ಮಟದಲ್ಲೊಮ್ಮೆ ಹೇಳಿದ್ದರು. ಮಹಾಲಿಂಗನವರ ಪಾತ್ರಗಳು ಕೇವಲ ವೇಷವಲ್ಲ! ಇವರ ರುದ್ರಭೀಮನನ್ನು ನೋಡಲೆಂದೇ ದುಶಾÏಸನ ವಧೆ ಪ್ರದರ್ಶನಕ್ಕಾಗಿ ಮೇಳಕ್ಕೆ ವೀಳ್ಯ ಕೊಡುತ್ತಿದ್ದರಂತೆ. 

ಬದುಕಿನ ತೊಂಬತ್ತೂಂದು ವರುಷಗಳಲ್ಲಿ ಏಳು ದಶಕಕ್ಕೂ ಮಿಕ್ಕಿದ ರಂಗಾನುಭವ. ಯಕ್ಷರಾತ್ರಿಗಳನ್ನು ನಡುಗಿಸಿದ ದೈತ್ಯ. ಅಬ್ಟಾ… ಅಹಿರಾವಣ, ಅಜಮುಖೀ, ಶೂರ್ಪನಖೀ, ಪೂತನಿ, ಕುಂಭಕರ್ಣ, ಹಿರಣ್ಯಕಶಿಪು, ತಾರಕಾಸುರ, ಬಕಾಸುರ, ಭೀಮ, ವೀರವರ್ಮ, ಕಿರಾತ… ಈ ಎಲ್ಲ ಪಾತ್ರಗಳು ರಂಗದಲ್ಲಿ ಅಬ್ಬರಿಸಿ ಎಬ್ಬಿಸಿದ ಧೂಳಿನ ಕಣಗಳು ಇನ್ನೂ ನೆಲ ಸೇರಿಲ್ಲ! ಅವರು ಸ್ಥಾಪಿಸಿದ ಬಣ್ಣದ ವೇಷಗಳ ನಡೆಯಲ್ಲಿ ಸಾಗುವ ಅನೇಕರಿಗೆ ಈ ಧೂಳಿನ ಕಣಗಳು ಈಗಲೂ ಶುಭ ಹಾರೈಕೆ. 

ಮಹಾಲಿಂಗನವರು ಮರಣಿಸುವ ಕೊನೆಯ ಹತ್ತೋ ಹದಿನೈದೋ ವರುಷಗಳಲ್ಲಿ ಅವರೊಂದಿಗೆ ಸಂಪರ್ಕವಿತ್ತು. “”ನನ್ನನ್ನು ಮಾಲಿಂಗಜ್ಜ ಅಂತ ಕರೆಯಿರಿ, ಖುಷಿಯಾಗುತ್ತದೆ” ಎಂದು ಅವರೇ ಹೇಳಿದ್ದರು. ಆಪ್ತರ ಪಾಲಿಗೆ ಅವರು ಪ್ರೀತಿಯ ಮಾಲಿಂಗಜ್ಜ. ಆಟದಂದು ಚೌಕಿಗೆ ಬಂದರೆ ಸ್ನೇಹಮಯಿಯಾಗಿ ವರ್ತಿಸುವ ಗುಣವನ್ನು ಹತ್ತಿರದಿಂದ ಬಲ್ಲೆ. ಅವರ ನೀಳಕಾಯ, ಶಾರೀರವನ್ನು ನೋಡುವುದೇ ಅಂದ. ರಂಗದಲ್ಲಿ ಸಿಡಿಲಬ್ಬರದ ಸ್ವರ, ಬೀಸು ನಡೆ, ರಂಗತುಂಬುವ ತಂತ್ರಗಳನ್ನು ಗಮನಿಸಿದರೆ ಇವರೇನಾ ಮಾಲಿಂಗಜ್ಜ ಎಂದು ನಾವೇ ಬೆರಗಾಗುತ್ತೇವೆ. ಇಂತಹ ಅದ್ಭುತ ಅಭಿವ್ಯಕ್ತಿಯು ಕಲಿತೋ ಮೇಳ ತಿರುಗಾಟದಿಂದಲೋ ಬರುವಂತಹುದಲ್ಲ. ಅದು ದೈವದತ್ತ. ಪಾತ್ರಗಳ ತೆರೆಕ್ಲಾಸ್‌, ತೆರೆ ಪೊರಪ್ಪಾಟ್‌, ಅದರೊಳಗಿನ ದಂತಧಾವನ, ಸಂಧ್ಯಾವಂದನೆ, ಶಿವಪೂಜೆಯ ಕ್ರಿಯೆಗಳು; ರಾಕ್ಷಸಿ ಪಾತ್ರಗಳ ತಲೆಬಾಚುವ, ಹೇನು ಹೆಕ್ಕುವ, ಜಡೆ ಹೆಣೆಯುವ, ಹೂ ಅಲಂಕಾರ ಮಾಡುವ ಬಣ್ಣದ ವೇಷಗಳ ಸೊಬಗಿನ ತಾಂತ್ರಿಕತೆಯನ್ನು ಮಾಲಿಂಗನವರು ತಮ್ಮ ಜತೆಯಲ್ಲಿಯೇ ಒಯ್ದಿರಬೇಕು! 

ಸುಳ್ಯದ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯು “ಬಣ್ಣ’ ಎನ್ನುವ ಕೃತಿಯನ್ನು ಮಾಲಿಂಗರಿಗೆ ಅರ್ಪಿಸಿದೆ. ಮಾಲಿಂಗನವರ ಕಲಾಯಾನಕ್ಕೆ “ಬಣ್ಣ’ವು ಕನ್ನಡಿ. ಬಹುಶಃ ದಾಸರಬೈಲು ಚನಿಯ ನಾಯ್ಕರ ಭಾಗವತಿಕೆಯಲ್ಲಿ ದುಶಾÏಸನ ವಧೆ ಪ್ರಸಂಗದ ಆಟವೂ ಜರಗಿತ್ತು. ಉಡುಪಿಯ ಆರ್‌ಆರ್‌ಸಿಯು ಅವರ ಬಣ್ಣದ ಲೋಕವನ್ನು ದಾಖಲಿಸಿದೆ. ಸುಳ್ಯದ ರಂಗಮನೆಯಲ್ಲಿ ಮಹಾಲಿಂಗನವರ ಮಹಿರಾವಣ ಪಾತ್ರದ ಪ್ರತಿಮೆಯೊಂದು ಸ್ಥಾಪಿತವಾಗಿದೆ. ಅವರು ಹಲವು ಪ್ರಶಸ್ತಿ, ಸಮ್ಮಾನಗಳಿಂದ ಅಲಂಕೃತರು. 

“”ನಾನೇನೂ ಸ್ಥಿತಿವಂತನಲ್ಲ. ಬಣ್ಣದ ಬದುಕು ನನ್ನ ಬದುಕಿಗೆ ಆಸರೆಯಾಯಿತು. ಮನೆತುಂಬಾ ಸಂಪತ್ತು ಇಲ್ಲದೆ ಇರಬಹುದು. ಕಿಸೆತುಂಬಾ ಹಣ ಇಲ್ಲದೇ ಇರಬಹುದು. ಆದರೆ ಅಸಂಖ್ಯಾತ ಅಭಿಮಾನಿಗಳು ನನ್ನ ದೊಡ್ಡ ಆಸ್ತಿ” ಎಂದಿದ್ದರು. ಮಹಾಲಿಂಗನವರ ಅಭಿಮಾನಿಗಳೆಂದರೆ ಅವರನ್ನು ಪ್ರೀತಿಸುವ, ಅವರ ವೇಷಾಭಿವ್ಯಕ್ತಿಯನ್ನು ಮನಸಾ ಅನುಭವಿಸುವ ಮತ್ತು ಗೌರವಿಸುವ ಅಪ್ಪಟ ಯಕ್ಷಗಾನ ಪ್ರೇಮಿಗಳು ಎಂದರ್ಥ. ಮಗ ಸುಬ್ರಾಯರನ್ನು ತನ್ನ ಹಾದಿಯಲ್ಲಿ ಬೆಳೆಸಿದ್ದಾರೆ. ಈಗವರು ಶ್ರೀ ಕಟೀಲು ಮೇಳದ ಕಲಾವಿದ. ತಂದೆಯನ್ನು ನೆನಪಿಸುವ ಅಭಿವ್ಯಕ್ತಿ. 

2004ರ ಮೇ 25ರಂದು ಬಣ್ಣದ ಮಹಾಲಿಂಗನವರು ದೈವಾಧೀನರಾದರು. ರಂಗದಿಂದ ಕಣ್ಮರೆಯಾದ ತತ್‌ಕ್ಷಣ ಅವರ ಹೆಸರನ್ನು ನೆನಪಿಸುವ ಕೆಲಸ ಆಗಬೇಕಿತ್ತು, ಆಗಲಿಲ್ಲ. ಭಾಗವತ ದಾಸರಬೈಲು ಚನಿಯ ನಾಯ್ಕರ ಪಾಲಿಗೂ ಇಂತಹ ಸ್ಥಿತಿಯು ಯೋಗವಾಗಿ ಬಾಧಿಸಿತು. ಆದರೆ ಅವರ ಶಿಷ್ಯರು ವರುಷಕ್ಕೊಮ್ಮೆ ನೆನಪಿನ ಕಾರ್ಯಕ್ರಮವನ್ನು ತಮ್ಮ ಮಿತಿಯಲ್ಲಿ ಮಾಡುತ್ತಿರುವುದು ಶ್ಲಾಘನೀಯ. 

ಈಗ ಬಣ್ಣದ ಮಹಾಲಿಂಗನವರನ್ನು ನೆನಪಿಸುವ ಕ್ಷಣಕ್ಕೆ ಯೋಗ ಕೂಡಿಬಂದಿದೆ. ಹದಿಮೂರು ವರುಷಗಳ ಬಳಿಕ ಅವರ ಅಭಿಮಾನಿಗಳು ಪುತ್ತೂರಿನಲ್ಲಿ “ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ’ವನ್ನು ಹುಟ್ಟು ಹಾಕಿದ್ದಾರೆ. ಪ್ರತೀ ವರುಷವೂ ಮಹಾಲಿಂಗ ನವರ ಸ್ಮರಣೆ, ಅವರ ಹೆಸರಿನ ಪ್ರಶಸ್ತಿ ಮತ್ತು ಪಾರಂಪರಿಕ ಸೊಗಡನ್ನು ಉಳಿಸುವ ಯೋಚನೆಯಿಂದ ಹಲವು ಕಲಾಪಗಳನ್ನು ನಡೆಸುವ ಯೋಜನೆಯು ಪ್ರತಿಷ್ಠಾನಕ್ಕಿದೆ. 

2017ರ ಜುಲೈ 2ರಂದು ದಿನಪೂರ್ತಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಪ್ರತಿಷ್ಠಾನದ ಉದ್ಘಾಟನೆ ಮತ್ತು ಅದಕ್ಕೆ ಪೂರಕವಾದ ಕಲಾಪಗಳು ಸಂಪನ್ನವಾಗಲಿವೆ. ಪರಮಪೂಜ್ಯ ಎಡನೀರು 
ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ದಿವ್ಯಾಶೀರ್ವಚನದೊಂದಿಗೆ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ. ಶ್ಯಾಮ ಭಟ್ಟರು ಪ್ರತಿಷ್ಠಾನವನ್ನು ಉದ್ಘಾಟಿಸಲಿದ್ದಾರೆ. ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರಿಗೆ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿಯನ್ನು ಪ್ರದಾನಿಸಲಾಗುತ್ತದೆ. ಬಳಿಕ ಅಭಿಮನ್ಯು- ದುಶಾÏಸನ- ಗದಾಯುದ್ಧ ಆಖ್ಯಾನಗಳ ಪ್ರದರ್ಶನ ಜರಗಲಿದೆ. 

ನಾ. ಕಾರಂತ ಪೆರಾಜೆ
ಚಿತ್ರಗಳು: ಯಜ್ಞ ಮಂಗಳೂರು 
ಮತ್ತು ಸಂಗ್ರಹ

Advertisement

Udayavani is now on Telegram. Click here to join our channel and stay updated with the latest news.

Next