ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ಬೆಂಗಳೂರು ನಿವಾಸದ ಬಳಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಗೂಂಡಾಗಳ ರೀತಿ ವರ್ತಿಸಿದ್ದಾರೆಂದು ಆರೋಪಿಸಿ, ಬಿಜೆಪಿ ಜಿಲ್ಲಾ ಘಟಕ ಶುಕ್ರವಾರ ಸಹ ಪ್ರತಿಭಟಿಸಿದೆ.
ನಗರದ ಕೆ.ಬಿ. ಬಡಾವಣೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಿಂದ ಗಾಂಧಿ ವೃತ್ತದವರೆಗೂ ಮೆರವಣಿಗೆ ಮೂಲಕ ಸಾಗಿದ ಕಾರ್ಯಕರ್ತರು, ಮುಖಂಡರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಜಿ.
ಪರಮೇಶ್ವರ್ ಅವರ ಭಾವಚಿತ್ರದ ಫ್ಲೆಕ್ಸ್ ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರು ಈ ರೀತಿ ಪ್ರಚೋದನಕಾರಿ ದಂಗೆ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ. ಗೂಂಡಾಗಿರಿ ಮಾಡೋದು, ಮನೆಗೆ ನುಗ್ಗಿ ಅನ್ನೋದು ಸರಿಯಲ್ಲ. ನಿಮಗೆ 2 ರಿಂದ 3 ಜಿಲ್ಲೆಗಳ ಪ್ರಭಾವ ಅಷ್ಟೇ ಇರೋದು. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರಿಗೆ ರಾಜ್ಯಾದ್ಯಂತ ಬೆಂಬಲವಿದೆ.
ಮುಂದಿನ ದಿನಗಳಲ್ಲಿ ಇಂಥವರಿಗೆ ಜನರೇ ತಕ್ಕ ಬುದ್ಧಿ ಕಲಿಸುತ್ತಾರೆ ಎಂದರು. ಜಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಸ್ಥಾನಗ ಘನತೆ ಮರೆತು ಸರ್ಕಾರ ನಡೆಸುವುದಕ್ಕೆ ತೊಂದರೆ ಕೊಟ್ಟರೆ ದಂಗೆ ಏಳುವಂತೆ ಮಾಡುತ್ತೇನೆ ಎಂದು ಹೇಳಿಕೆ ನೀಡಿರುವುದು ಸಂವಿಧಾನ ಬಾಹಿರ. ಸಂವಿಧಾನಕ್ಕೆ ಬದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿ ಈಗ ಅಧಿಕಾರದ ಆಸೆಗಾಗಿ ಈ ತರ ಹೇಳಿಕೆ ನೀಡುವುದು ಸರಿಯಲ್ಲ. ಬಿಎಸ್‌ವೈ ಹಿಂದೆ 104 ಶಾಸಕರು, 17 ಎಂಪಿಗಳು, ರಾಜ್ಯದ ಜನರಿದ್ದಾರೆ. ಅವರ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂದರು.
ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ಎಚ್.ಸಿ. ಜಯಮ್ಮ ಮಾತನಾಡಿ, ಮುಖ್ಯಮಂತ್ರಿಗಳು ದಂಗೆ ಅಂತಹ ಹೇಳಿಕೆ ನೀಡಿರುವುದು ರಾಜ್ಯ ಮತ್ತು ಸಂವಿಧಾನಕ್ಕೆ ಮಾಡಿದ ಅವಮಾನ. ಕನ್ನಡಿಗರು ತಲೆ ತಗ್ಗಿಸುವಂತಹ ವಿಚಾರ. ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಿಎಂ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ. ಕೂಡಲೇ ಅವರ ಹೇಳಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪಕ್ಷದ ಮುಖಂಡರಾದ ಎಚ್.ಎನ್. ಶಿವಕುಮಾರ್, ರಮೇಶ್ ನಾಯ್ಕ, ಎನ್. ರಾಜಶೇಖರ್, ಹೇಮಂತಕುಮಾರ್, ಡಾ|
ಜಿ. ಮಂಜುನಾಥ ಗೌಡ, ಪ್ರಭು ಕಲ್ಬುರ್ಗಿ, ಮುಕುಂದಪ್ಪ, ಶಿವಕುಮಾರಸ್ವಾಮಿ, ಉಜ್ಜಿನಪ್ಪ, ಆನಂದ ಶಿಂಧೆ, ಗುರು ಕೊಡೆಕಲ್, ಧನುಷ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.