Advertisement

ಇಲ್ಲಿ ಪ್ರತಿಯೊಬ್ಬರೂ ಕೀಚಕರೇ

06:00 AM Jul 20, 2018 | |

“ಅನೇಕ ಚಿತ್ರಗಳಿಗೆ ಪತ್ರಿಕೆ ಹಾಗೂ ವಾಹಿನಿಗಳಲ್ಲಿ ಬರುವ ಕಥೆಗಳೇ ಸ್ಪೂರ್ತಿ…’
– “ಕೀಚಕರು’ ಎಂಬ ಚಿತ್ರದ ಕಥೆ ಕೂಡ ಪತ್ರಿಕೆಗಳೇ ಸ್ಫೂರ್ತಿ. ಹೀಗೆ ಹೇಳುತ್ತಾ ಹೋದರು ನಿರ್ದೇಶಕ ಶಿವಮಣಿ. ಇವರು ಆ ಹಿರಿಯ ನಿರ್ದೇಶಕ ಶಿವಮಣಿ ಅಲ್ಲ. ಅದೇ ಹೆಸರಿನ ಮತ್ತೂಬ್ಬ ನಿರ್ದೇಶಕರು. ಇವರು ಈಗ “ಕೀಚಕರು’ ಎಂಬ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ. ಈ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 

Advertisement

ತಮ್ಮ ಚೊಚ್ಚಲ ಚಿತ್ರ ಕುರಿತು ಮಾತಿಗಿಳಿದ ಶಿವಮಣಿ, “ಇತ್ತೀಚೆಗೆ ಪತ್ರಿಕೆಗಳಲ್ಲಿ ಬಾಲಕಿಯರ ಮೇಲೆ, ಅತ್ಯಾಚಾರ, ಕೊಲೆ ಸುದ್ದಿಗಳೇ ಹೆಚ್ಚಾಗಿವೆ. ಅದರ ಮೇಲೊಂದು ಸಿನಿಮಾ ಯಾಕೆ ಮಾಡಬಾರದು ಅಂತ ನಿರ್ಧರಿಸಿ, ಕಥೆ ಹೆಣೆದೆ. ಆರಂಭದಲ್ಲಿ ಯಾರೂ ನಿರ್ಮಾಪಕರು ಸಿಗಲಿಲ್ಲ. ಕೊನೆಗೆ ಗೆಳೆಯರೇ ಸೇರಿ ಚಿತ್ರ ನಿರ್ಮಾಣಕ್ಕೆ ಮುಂದಾದೆವು. ಸಮಾಜದಲ್ಲಿ ಈಗ ಅತ್ಯಾಚಾರ ಸುದ್ದಿಗಳೇ ಹೆಚ್ಚು. ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದ ಸುದ್ದಿ ಬೆಚ್ಚಿಬೀಳಿಸಿದ್ದು ನಿಜ. ಆ ರೀತಿಯ ವಿಷಯ ಇಲ್ಲಿದೆಯಾದರೂ, ಇಲ್ಲೊಂದು ಸಂದೇಶವಿದೆ. ಇಂತಹ ಘಟನೆಗಳು ನಡೆದಾಗ, ಪೊಲೀಸರ ಮೊರೆ ಹೋಗುತ್ತಾರೆ. ಆದರೆ, ಕೆಲವು ಅಧಿಕಾರಿಗಳೇ ರಕ್ಷಣೆ ಮಾಡುವುದನ್ನು ಬಿಟ್ಟು, ಕೀಚಕರಾಗುತ್ತಿದ್ದಾರೆ. ಅದೇ ವಸ್ತು ಚಿತ್ರದಲ್ಲಿದೆ. ಇಲ್ಲಿ ಕಾಣುವ ಪ್ರತಿ ಪಾತ್ರಗಳೂ ಕೀಚಕರೇ. ಹಾಗಂತ, ಇಲ್ಲಿ ಕೆಟ್ಟದ್ದನ್ನು ತೋರಿಸುವ ಮಟ್ಟಕ್ಕೆ ಹೋಗಿಲ್ಲ. ಕುಟುಂಬ ಕುಳಿತು ಚಿತ್ರ ನೋಡಬಹುದು. ಇಲ್ಲಿ ಸಾಕಷ್ಟು ಸಂದೇಶವಿದೆ. ಅದನ್ನು ಚಿತ್ರದಲ್ಲೇ ನೋಡಬೇಕೆಂಬುದು ನಿರ್ದೇಶಕರ ಮಾತು.

ಇನ್ನು, ಚಿತ್ರದಲ್ಲಿ “ಉಗ್ರಂ’ ರೆಡ್ಡಿ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದಾರೆ. ಹಾಗಂತ ಅವರದು ದಕ್ಷ ಪೊಲೀಸ್‌ ಪಾತ್ರವಲ್ಲ. ಬದಲಿಗೆ ಅದು ಕೀಚಕ ಪೊಲೀಸ್‌ ಪಾತ್ರವಂತೆ. ಇದುವರೆಗೆ ಅವರು 300 ಚಿತ್ರಗಳಲ್ಲಿ ನಟಿಸಿದ್ದು, ಕಳೆದ ಹದಿನೈದು ವರ್ಷಗಳಿಂದಲೂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. “ಈ ಚಿತ್ರದ ಪಾತ್ರ ಅವರಿಗೆ ಖುಷಿ ಕೊಟ್ಟಿದೆಯಂತೆ. ಒಬ್ಬ ಕಲಾವಿದನಿಗೆ ಇಂತಹ ಪಾತ್ರಗಳು ಚಾಲೆಂಜ್‌ ಎನಿಸುತ್ತವೆ. ಅಂಥದ್ದೊಂದು ಪಾತ್ರವನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ’ ಅಂದರು ಉಗ್ರಂ ರೆಡ್ಡಿ.

ಸಂಗೀತ ನಿರ್ದೇಶಕ ವಿನು ಮನಸು ಚಿತ್ರಕ್ಕೆ ಸಂಗೀತ ನೀಡಿದ್ದು, “ಒಂದು ಸಾಮಾಜಿಕ ಕಳಕಳಿ ಇರುವ ಚಿತ್ರದಲ್ಲಿ ಕೆಲಸ ಮಾಡಿರುವ ಖುಷಿ ನನ್ನದು’ ಎಂದರು. ಎಸ್‌.ಕೆ. ಸಾಲಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಉಳಿದಂತೆ ಚಿತ್ರದಲ್ಲಿ ಜಯನಾಯ್ಕ ಪೊಲೀಸ್‌ ಎಂಟ್‌ಕೌಂಟರ್‌ ಅಧಿಕಾರಿಯಾಗಿ ನಟಿಸಿದ್ದಾರೆ. ಚಾಮಿ ಸುನೀಲ್‌ ಕಾಮಿಡಿ ಪಾತ್ರ ನಿರ್ವಹಿಸಿದ್ದಾರೆ. ಬುಲೆಟ್‌ ರಾಜ ಖಳನಾದರೆ, ಜಗ್ಗಿ ಕಲಾಕಾರ್‌ ಅವರಿಗೆ ಇಲ್ಲಿ ಕಿಡ್ನಾಪರ್‌ ಪಾತ್ರ ಸಿಕ್ಕಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next